ಕೋಲ್ಕತಾ: ಇಲ್ಲಿನ ಜಾದವ್‌ಪುರ ಪ್ರದೇಶದಲ್ಲಿ ಎಟಿಎಂನಿಂದ ಹಣ ಪಡೆದುಕೊಂಡ 30ಕ್ಕೂ ಹೆಚ್ಚು ಮಂದಿ ಇದೀಗ ಖಾತೆಯಿಂದ ಲಕ್ಷಾಂತರ ರೂ.ಗಳನ್ನು ಕಳೆದುಕೊಂಡಿದ್ದಾರೆ. ಸುಕಾಂತ ಸೇತು ಪ್ರದೇಶವೂ ಸೇರಿದಂತೆ ಜಾದವ್‌ಪುರ ಆಸುಪಾಸಿನ ಎಟಿಎಂಗಳಲ್ಲಿ ದುಡ್ಡು ಪಡೆದುಕೊಂಡ ಗ್ರಾಹಕರು ನಮ್ಮ ಖಾತೆಯಿಂದ ಹಣ ದೋಚಿರುವ ಬಗ್ಗೆ ದೂರು ನೀಡಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್‌ಗಳು ಸೇರಿದಂತೆ ಖಾಸಗಿ ಬ್ಯಾಂಕ್‌ಗಳಲ್ಲಿ ಹಣ ಪಡೆದವರು ದೂರು ನೀಡಿದ್ದು, ಎಟಿಎಂ ಮೂಲಕ ಕಳ್ಳರು ಕಾರ್ಡ್ ನಂಬರ್ ಮತ್ತು ಪಿನ್ ಪಡೆದು ವಂಚನೆ ಎಸಗಿರಬಹುದು ಎಂದು ಹೇಳಲಾಗಿದೆ.
ಖಾತೆಯನ್ನು ಪೊಲೀಸರು ಮತ್ತು ಬ್ಯಾಂಕ್ ಅಧಿಕಾರಿಗಳು ಪರಿಶೀಲಿಸಿದ ವೇಳೆ ನೋಯ್ಡಾ, ದಿಲ್ಲಿಯಲ್ಲಿ ನಕಲಿ ಎಟಿಎಂ ಬಳಸಿ ಹಣ ಪಡೆದಿರುವುದು ಗೊತ್ತಾಗಿದೆ.
ಹಣ ಕಳೆದುಕೊಂಡ ಹೆಚ್ಚಿನ ವ್ಯಕ್ತಿಗಳದ್ದು ಸಂಬಳದ ಖಾತೆಗಳಾಗಿದ್ದವು. ಶನಿವಾರ ಎಲ್ಲೂ ಹಣ ತೆಗೆಯದಿದ್ದರೂ, 10 ಸಾವಿರ ವಿತ್‌ಡ್ರಾ ಆಗಿರುವುದಾಗಿ ಮೆಸೇಜ್ ಬಂದಿತ್ತು ಎಂದು ಹಣ ಕಳೆದುಕೊಂಡಿರುವ ಒಬ್ಬರು ದೂರಿನಲ್ಲಿ ಹೇಳಿದ್ದಾರೆ.
ಅಲ್ಲದೇ ಮತ್ತೂಬ್ಬರು ದೂರುದಾರರು ತಮ್ಮ ಪತ್ನಿಯ ಖಾತೆಯಿಂದ ಹಲವು ಸಾವಿರ ರೂ.ಗಳನ್ನು ಲಪಟಾಯಿಸಿರುವುದಾಗಿ ಹೇಳಿದ್ದಾರೆ. ಯಾರೊಂದಿಗೂ ಎಟಿಎಂ ಕಾರ್ಡ್ ನಂಬರ್, ಸೀಕ್ರೆಟ್ ಕೋಡ್ ಹಂಚಿಕೊಂಡಿಲ್ಲ ಆದರೂ ಹಣ ಲಪಟಾಯಿಸಲಾಗಿದೆ ಎಂದು ದೂರುದಾರರು ಹೇಳಿದ್ದಾರೆ.