Advertisement

AtishiAAP; ದೆಹಲಿಯ ಮೂರನೇ ಮಹಿಳಾ ಸಿಎಂ ಆದ ಆತಿಷಿ

08:28 PM Sep 21, 2024 | Team Udayavani |

ಹೊಸದಿಲ್ಲಿ: ಆಮ್ ಆದ್ಮಿ ಪಕ್ಷದ ನಾಯಕಿ ಆತಿಷಿ(Atishi) ಶನಿವಾರ(ಸೆ21) ದೆಹಲಿಯ ಮೂರನೇ ಮಹಿಳಾ ಮುಖ್ಯಮಂತ್ರಿಯಾಗಿ(Delhi Chief Minister) ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರ ರಾಜಧಾನಿಯಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ ಮೂವರಲ್ಲಿ ಅತ್ಯಂತ ಕಿರಿಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸ್ವತಂತ್ರ ಭಾರತದಲ್ಲಿ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ 17 ನೇ ಮಹಿಳೆಯಾಗಿದ್ದಾರೆ.

Advertisement

2025 ಫೆಬ್ರವರಿಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಕಾರಣ, 43 ರ ಹರೆಯದ ಆತಿಷಿ ಅವರ ಅಧಿಕಾರ ಅಲ್ಪಾವಧಿಯದ್ದಾಗಿದೆ.

ಮೊದಲ ಬಾರಿಗೆ ಶಾಸಕಿಯಾಗಿರುವ ಆತಿಷಿ ಅವರು ಪಕ್ಷದ ಪ್ರಮುಖ ಮುಖವಾಗಿದ್ದು, ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ತಿಹಾರ್ ಜೈಲಿನಲ್ಲಿದ್ದ ಸಮಯದಲ್ಲಿ ಪಕ್ಷದ ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದರು.

ಆತಿಷಿ ಅವರೊಂದಿಗೆ ಸೌರಭ್ ಭಾರದ್ವಾಜ್, ಗೋಪಾಲ್ ರಾಯ್, ಕೈಲಾಶ್ ಗೆಹ್ಲೋಟ್, ಇಮ್ರಾನ್ ಹುಸೇನ್ ಮತ್ತು ಮುಖೇಶ್ ಅಹ್ಲಾವತ್ ಅವರು ಸಚಿವರಾಗಿ ಪ್ರಮಾಣ ಸ್ವೀಕರಿಸಿದರು.

Advertisement

ಈ ವಾರದ ಆರಂಭದಲ್ಲಿ ಅನಿರೀಕ್ಷಿತ ಎಂಬಂತೆ ಕೇಜ್ರಿವಾಲ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿ ವಿಧಾನಸಭಾ ಚುನಾವಣೆಯಲ್ಲಿ ದೆಹಲಿಯ ಜನರು “ಪ್ರಾಮಾಣಿಕತೆಯ ಪ್ರಮಾಣಪತ್ರ” ನೀಡಿದರೆ ಮಾತ್ರ ಮತ್ತು ಹುದ್ದೆಗೆ ಮರಳುವುದಾಗಿ ಘೋಷಣೆ ಮಾಡಿದ ನಂತರ ಆತಿಷಿ ಅವರನ್ನು ಶಾಸಕಾಂಗ ಪಕ್ಷದ ನಾಯಕಿಯನ್ನಾಗಿ ಆಯ್ಕೆ ಮಾಡಲಾಗಿತ್ತು. ಮುಂದಿನ ವರ್ಷದ ಆರಂಭದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.

ಬಿಜೆಪಿ ನಾಯಕಿ ದಿವಂಗತ ಸುಷ್ಮಾ ಸ್ವರಾಜ್ ಮತ್ತು ಕಾಂಗ್ರೆಸ್ ನಾಯಕಿ ಶೀಲಾ ದೀಕ್ಷಿತ್ ಅವರು ದೆಹಲಿಯ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದರು.

ದೆಹಲಿಗೆ ಹೊಸ ಮನಮೋಹನ್ ಸಿಂಗ್ ಸಿಕ್ಕಿದ್ದಾರೆ’: ಬಿಜೆಪಿ ಲೇವಡಿ

“ಅರವಿಂದ್ ಕೇಜ್ರಿವಾಲ್ ಅವರ ಬಳಿ ನಿಜವಾದ ಶಕ್ತಿ ಇರುವುದರಿಂದ ದೆಹಲಿಯ ಜನರಿಗೆ ‘ಹೊಸ ಮನಮೋಹನ್ ಸಿಂಗ್’ ಸಿಕ್ಕಿದ್ದರಿಂದ ನಾನು ಅವರನ್ನು ಅಭಿನಂದಿಸುತ್ತೇನೆ. ಅವರು ವಾಸ್ತವಿಕ ಸಿಎಂ ಆಗಿರುತ್ತಾರೆ ಮತ್ತು ಆತಿಷಿ ನ್ಯಾಯಸಮ್ಮತ ಸಿಎಂ ಆಗಿರುತ್ತಾರೆ. ಅರವಿಂದ್ ಕೇಜ್ರಿವಾಲ್ ನೇರವಾಗಿ ಸಿಎಂ ಆಗಿ ಕಾರ್ಯನಿರ್ವಹಿಸಲು ಸಾಧ್ಯವಾಗದ ಕಾರಣ ನ್ಯಾಯಾಲಯ ಜಾಮೀನಿನಲ್ಲಿ ಷರತ್ತುಗಳನ್ನು ವಿಧಿಸಿದೆ, ಹೀಗಾಗಿ ಇಲ್ಲಿ ಒಪಿಎಸ್ ವ್ಯವಸ್ಥೆ ಆರಂಭವಾಗಿದೆ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಟೀಕಾ ಪ್ರಹಾರ ನಡೆಸಿದ್ದಾರೆ.

ದೆಹಲಿಯ ವಿಪಕ್ಷ ನಾಯಕ ವಿಜೇಂದರ್ ಗುಪ್ತಾ ಪ್ರತಿಕ್ರಿಯಿಸಿ “ಇದು ಡಮ್ಮಿ ಸರಕಾರ ಮತ್ತು ಡಮ್ಮಿ ಮುಖ್ಯಮಂತ್ರಿ. ಇದು ರಿಮೋಟ್ ಕಂಟ್ರೋಲ್ ರನ್ ಸರಕಾರವಾಗಿರುತ್ತದೆ” ಎಂದು ವ್ಯಂಗ್ಯವಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next