ಕೋಸ್ಟಲ್‌ವುಡ್‌ನಲ್ಲಿ ಸದ್ಯ ಸೂತಕದ ಛಾಯೆ ಇದೆ. ತುಳು ಸಿನೆಮಾ ಶೂಟಿಂಗ್ ಕಾಣುವ ಹಂತದಲ್ಲಿಯೇ ಕೋಸ್ಟಲ್‌ವುಡ್‌ನ ಭರವಸೆಯ ನಿರ್ದೇಶಕ ಆರ್. ಹರೀಶ್ ಕೊಣಾಜೆಕಲ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಶೇ. 80ರಷ್ಟು ಶೂಟಿಂಗ್ ಪೂರ್ಣಗೊಳಿಸಿದ ಅವರ ಬಹುನಿರೀಕ್ಷಿತ ಸಿನೆಮಾ ‘ಅಟಿಡೊಂಜಿ ದಿನ’ ಸದ್ಯ ಈ ಕಾರಣದಿಂದ ಶೂಟಿಂಗ್ ನಿಲ್ಲಿಸಿದೆ. ಅಂದಹಾಗೆ ಮುಂದೇನು? ಎಂಬ ಪ್ರಶ್ನೆ ಕೋಸ್ಟಲ್‌ವುಡ್‌ನಲ್ಲಿ ಮೂಡಿದೆ. ಮುಕ್ಕಾಲು ಭಾಗ ಶೂಟಿಂಗ್ ಮುಗಿಸಿದ ಸಿನೆಮಾವನ್ನು ಮತ್ತೆ ಯಾರು ಮುಂದುವರಿಸುತ್ತಾರೆ? ಶೂಟಿಂಗ್ ಮತ್ತೆ ಶುರುವಾಗುತ್ತದಾ? ಎಂಬೆಲ್ಲ ಪ್ರಶ್ನೆ ಮೂಡಿದೆ.
ಸಿನೆಮಾದ ಮುಖ್ಯನಟ ಪೃಥ್ವಿ ಅಂಬರ್ ಅವರನ್ನು ಈ ಬಗ್ಗೆ ವಿಚಾರಿಸಿದಾಗ ಅವರು ಹೀಗೆನ್ನುತ್ತಾರೆ.. ‘ತುಳು ಚಿತ್ರದ ಸಮರ್ಥ ನಿರ್ದೇಶಕನಾಗಬೇಕು ಎಂಬುದು ಅವರಿಗಿದ್ದ ಬಹುದೊಡ್ಡ ಕನಸು. ಈ ನಿಟ್ಟಿನಲ್ಲಿ ಕೈಯಲ್ಲಿ
ಕಥೆ ಹಿಡಿದುಕೊಂಡು ಮೂರು ವರ್ಷಗಳಿಂದ ನಿರ್ಮಾಪಕರಿಗಾಗಿ ಹುಡುಕಾಟ ನಡೆಸಿದ್ದರು. ಈ ಎಳೆ ವಯಸ್ಸಿಗೆ ಚಿತ್ರ ನಿರ್ದೇಶನ ಬೇಡ ಎಂದು ಕೆಲವರು ಹೇಳಿದ್ದೂ ಇದೆ. ಆದರೆ, ಹಠಕ್ಕೆ ಬಿದ್ದು ನಿರ್ಮಾಪಕರನ್ನು ಹುಡುಕಿ, ‘ಆಟಿಡೊಂಜಿ ದಿನ’ ಎಂಬ ತುಳು ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದರು. ಶೇ. 80ರಷ್ಟು ಚಿತ್ರೀಕರಣ ಮುಗಿಸಿ, ಇನ್ನೇನು ಕನಸು ಈಡೇರಿತು ಎನ್ನುವಷ್ಟರಲ್ಲಿ ವಿಧಿಯಾಟಕ್ಕೆ ಬಲಿಯಾದರು ಎನ್ನುವುದನ್ನು ನಂಬುವುದಕ್ಕೆ ಕಷ್ಟವಾಗುತ್ತಿದೆ ಎನ್ನುತ್ತಾರೆ ಅವರು.
ಅವರ ಕನಸನ್ನು ಪೂರ್ಣ ಮಾಡುವುದು ಈಗ ನಮ್ಮ ಮುಂದಿರುವ ಜವಾಬ್ದಾರಿ. ಹೀಗಾಗಿ ಶೇ.20ರಷ್ಟು ಬಾಕಿ ಇರುವ ಸಿನೆಮಾದ ಶೂಟಿಂಗ್ ಅನ್ನು ನಾವು ಪೂರ್ಣಗೊಳಿಸಲಿದ್ದೇವೆ. ಚಿತ್ರತಂಡ ಜತೆಯಾಗಿ ನಿಂತು ಈ ಕಾರ್ಯಕ್ಕೆ ಮುಂದಿನ ತಿಂಗಳಿನಿಂದ ಕಾರ್ಯನಿರ್ವಹಿಸಲಿದ್ದೇವೆ. 2 ಹಾಡಿನ ಹಾಗೂ 3 ಫೈಟ್ ದೃಶ್ಯಗಳ ಚಿತ್ರೀಕರಣ ನಡೆಯಬೇಕಿದೆ. ಜತೆಗೆ 2-3 ಕಥೆಗಳ ದೃಶ್ಯಗಳ ಶೂಟಿಂಗ್ ನಡೆಯಲಿದೆ ಎಂದರು. ಅಂದಹಾಗೆ, ಸಿನೆಮಾದಲ್ಲಿ ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಸತೀಶ್ ಬಂದಳೆ, ಪೃಥ್ವಿ ಅಂಬರ್, ನಿರೀಕ್ಷಾ ಶೆಟ್ಟಿ, ದೀಪಕ್ ರೈ, ಸೂರಜ್ ಸಾಲ್ಯಾನ್, ಶ್ರದ್ಧಾ ಸಾಲ್ಯಾನ್, ಪೃಥ್ವೀರಾಜ್ ಮೂಡುಬಿದಿರೆ ಸಿನೆಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಆಕಾಶ್ ಹಾಸನ ಕಾರ್ಯಕಾರಿ ನಿರ್ಮಾಪಕ ಸಹನಿರ್ದೇಶನ ಮಾಡುತ್ತಿದ್ದಾರೆ.