ಒಳ್ಳೆಯ ಕಥೆ ಇಟ್ಟುಕೊಂಡು ಸಿನಿಮಾ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಕೊಡಬಹುದು ಎಂಬುದು ಅನೇಕರನಂಬಿಕೆ. ಇದೇ ನಂಬಿಕೆಯನ್ನುಇಟ್ಟುಕೊಂಡು ಇಲ್ಲೊಂದು ಚಿತ್ರತಂಡ ಉತ್ತಮ ಕಥೆಯನ್ನು ಆಯ್ಕೆ ಮಾಡಿಕೊಂಡು ಅದನ್ನು ತೆರೆಮೇಲೆ ಹೇಳಲು ಹೊರಟಿದೆ. ಅಷ್ಟೇ ಅಲ್ಲದೆ ತಮ್ಮ ಚಿತ್ರಕ್ಕೆ “ಅತ್ಯುತ್ತಮ’ ಎಂದು ಹೆಸರನ್ನೂ ಕೂಡ ಇಟ್ಟಿದೆ.
ಇಂದಿನ ಸಮಾಜದಲ್ಲಿ ಕೌಟುಂಬಿಕ ಜೀವನ ಹೇಗೆಲ್ಲ ಬದಲಾಗುತ್ತಿದೆ.ಸ್ವಪ್ರತಿಷ್ಟೆಯಿಂದ, ಅಹಂ ಭಾವದಿಂದ, ಮನಸ್ತಾಪದಿಂದ ಜೀವನ ಹೇಗೆಲ್ಲದುರಂತಕ್ಕೆ ಸಿಲುಕಿಕೊಳ್ಳುತ್ತದೆ ಎಂಬ ಅಂಶಗಳನ್ನು ಇಟ್ಟುಕೊಂಡು ತಯಾರಾಗುತ್ತಿರುವ ಈ ಚಿತ್ರದಲ್ಲಿ ಕೊನೆಗೊಂದು “ಅತ್ಯುತ್ತಮ’ ಸಂದೇಶವನ್ನು ಹೇಳಲು ಚಿತ್ರತಂಡ ಯೋಜಿಸಿದೆ.
ಉದ್ಯಮಿ ಶಿವಕುಮಾರ್ ಜೇವರಗಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯ ಬರೆದಿರುವ ಈ ಚಿತ್ರಕ್ಕೆ ಎಂ.ಆರ್ ಕಪಿಲ್ ನಿರ್ದೇಶನ ಮಾಡುತ್ತಿದ್ದಾರೆ. “ಬಿ.ಎಂ.ಎಸ್ ಸಿನಿ ಕ್ರಿಯೇಷನ್ಸ್’ ಬ್ಯಾನರ್‌ನಲ್ಲಿ ಈ ಚಿತ್ರವನ್ನು ಸುನಿತಾ ಎಸ್. ಜೇವರಗಿ, ಪುಷ್ಪಲತಾ ಕುಡ್ಲೂರು, ವೀಣಾ ಶ್ರೀನಿವಾಸ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಹಿರಿಯ ನಿರ್ಮಾಪಕ ಬಾ.ಮಾ ಹರೀಶ್ ಚಿತ್ರಕ್ಕೆ ಕ್ಲಾಪ್ ಮಾಡಿದರೆ, ಫಿಲಂ ಚೇಂಬರ್ ಉಪಾಧ್ಯಕ್ಷ ಉಮೇಶ್ ಬಣಕಾರ್ ಕ್ಯಾಮರಾ ಸ್ವಿಚ್ ಆನ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ಮಾಡಿದರು. ಹಿರಿಯ ಸಾಹಿತಿ ಪ್ರೊ. ದೊಡ್ಡರಂಗೇಗೌಡ, ನಿರ್ಮಾಪಕ ಬಾ.ಮಾ ಗಿರೀಶ್ ಮೊದಲಾದ ಗಣ್ಯರು ಮುಹೂರ್ತ ಸಮಾರಂಭದಲ್ಲಿ ಹಾಜರಿದ್ದು ಚಿತ್ರತಂಡಕ್ಕೆ ಶುಭ ಕೋರಿದರು.
ಇದೇ ವೇಳೆ ಮಾತನಾಡಿದ ಚಿತ್ರತಂಡ, “”ಅತ್ಯುತ್ತಮ’ ಚಿತ್ರಕ್ಕೆ “ಪ್ರಥಮ ಉತ್ತಮ ಜೀವನಧಾಮ’ ಎಂದು ಅಡಿಬರಹವಿದ್ದು, ಶೀರ್ಷಿಕೆ ಮತ್ತು ಅಡಿ ಬರಹದಲ್ಲಿಯೇ ಇಡೀ ಚಿತ್ರವನ್ನು ಸಂಕ್ಷಿಪ್ತವಾಗಿ ಹೇಳಿದ್ದೇವೆ. ಇದೊಂದು ಕೌಟುಂಬಿಕ ಕಥಾಹಂದರ ಸಿನಿಮಾ. ಕೊರೊನಾ ಲಾಕ್‌ಡೌನ್ ವೇಳೆ ಹೊಳೆದ ಕಥೆಯನ್ನ ಚಿತ್ರ ರೂಪದಲ್ಲಿ ತೆರೆಗೆ ತರುತ್ತಿದ್ದೇವೆ. ಸಂಸಾರದಲ್ಲಿ ಬರುವ ಮನಸ್ತಾಪ ಹೇಗೆ ದುಷ್ಪರಿಣಾಮ ಬೀರುತ್ತದೆ ಎನ್ನುವುದು ಚಿತ್ರದ ಕಥೆಯ ಒಂದು ಎಳೆ. ಇದರಲ್ಲಿ ಇಂದಿನ ಜೀವನ, ಸಮಾಜ, ಸಂಬಂಧ ಎಲ್ಲದರ ಮಹತ್ವವನ್ನೂ ಹೇಳಲಾಗಿದೆ ಜೊತೆಗೆ ಹೆಸರಿಗೆ ತಕ್ಕಂತೆ “ಅತ್ಯುತ್ತಮ’ ಸಂದೇಶ ಕೂಡ ಇರಲಿದೆ’ ಎಂದಿತು.
“ಅತ್ಯುತ್ತಮ’ ಚಿತ್ರದಲ್ಲಿ ಶಿವಕುಮಾರ್ ಜೇವರಗಿ, ಶಿವಪ್ಪ ಕುಡ್ಲೂರು, ಗೀತಾ, ಮನೋಜ್ಞ, ವಿನಯ್, ಉಮೇಶ್, ರಮೇಶ್ ಭಟ್, ಬಿರಾದಾರ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ದಿನೇಶ್ ಈಶ್ವರ್ ಸಂಗೀತವಿದೆ. ಸಿ. ನಾರಾಯಣ್ ಛಾಯಾಗ್ರಹಣ, ಆರ್.ಡಿ ರವಿ ಸಂಕಲನ ಚಿತ್ರಕ್ಕಿದೆ. ಸದ್ಯ “ಅತ್ಯುತ್ತಮ’ ಚಿತ್ರದ ಚಿತ್ರೀಕರಣ ಆರಂಭಿಸಿರುವ ಚಿತ್ರತಂಡ, ಬೆಂಗಳೂರು, ಬಿಜಾಪುರ ಸುತ್ತಮುತ್ತ ಶೂಟಿಂಗ್ ನಡೆಸುವ ಯೋಜನೆ ಹಾಕಿಕೊಂಡಿದೆ.