ವಿಶೇಷ ವರದಿ –ಶಿರ್ವ: ಆತ್ರಾಡಿ ಶಿರ್ವ ಬಜ್ಪೆ ರಾಜ್ಯ ಹೆದ್ದಾರಿಯಿಂದ ಹಿಂದೂ ಪ.ಪೂ. ಕಾಲೇಜು, ಎಂಎಸ್‌ಆರ್‌ಎಸ್ ಕಾಲೇಜು, ಗಾಂಧಿನಗರ, ತೋಪನಂಗಡಿಗಾಗಿ ಶಿರ್ವ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದೆ.
ಪದವು ಕ್ರಾಸ್‌ನಿಂದ ಸುಮಾರು 2 ಕಿ.ಮೀ.ರಸ್ತೆಯು ಕಾಲೇಜು ಬಳಿ, ಜಾರಂದಾಯ ದೈವಸ್ಥಾನ ಕ್ರಾಸ್, ಪದವುನೀರಿನ ಟ್ಯಾಂಕ್ ಬಳಿ, ಗಾಂಧಿ ನಗರ ಹಾಗೂ ತೋಪನಂಗಡಿ ಬಳಿ ಡಾಮರು ಕಿತ್ತುಹೋಗಿ ಹೊಂಡಗಳು ನಿರ್ಮಾಣವಾಗಿವೆ.
ಪ್ರತಿದಿನ ಸಾರಿಗೆ ಹಾಗೂ ಶಾಲಾ ಬಸ್, ಕಾರು, ಆಟೋರಿಕ್ಷಾ ಸೇರಿದಂತೆ ನೂರಾರು ವಾಹನಗಳು ಈ ರಸ್ತೆಯಲ್ಲಿ ಓಡಾಡುತ್ತಿದ್ದಾರೆ. ರಸ್ತೆ ಬದಿಯಲ್ಲಿ ಸಮರ್ಪಕ ಚರಂಡಿಯಿಲ್ಲದೆ ಭಾರೀ ಮಳೆಯಾಗುವ ಸಂದರ್ಭದಲ್ಲಿ ಮಳೆನೀರು ರಸ್ತೆಯಲ್ಲಿಯೇ ಹರಿಯುತ್ತಿದ್ದು ರಸ್ತೆ ಚರಂಡಿಯಂತಾಗಿದೆ. ಹೊಂಡ ಗುಂಡಿಗಳಲ್ಲಿ ನೀರು ನಿಂತು ಶಾಲಾ ಮಕ್ಕಳಿಗೆ ಕೆಸರು ನೀರಿನ ಸಿಂಚನವಾಗುತ್ತಿದೆ. ಅಲ್ಲದೆ ಕಾಡಿಕಂಬಳ ಕ್ರಾಸ್ ರಸ್ತೆಯಲ್ಲಿಯೇ ನೀರು ಹಾದುಹೋಗುವ ಮೋರಿಯ ದಂಡೆಯೊಂದಿದ್ದು ರಾತ್ರಿ ವೇಳೆ ಸಂಚರಿಸುವ ವಾಹನ ಸವಾರರಿಗೆ ಅಪಾಯಕಾರಿ ಯಾಗಿದೆ. ಜನಪ್ರತಿನಿಧಿಗಳು, ಸಂಬಂಧಪಟ್ಟ ಇಲಾಖೆ ಇದರ ಬಗ್ಗೆ ಗಮನಹರಿಸಬೇಕಿದೆ ಎಂಬುದು ಗ್ರಾಮಸ್ಥರ ಆಗ್ರಹ.
ಮಳೆಗಾಲ ಕಳೆದ ಕೂಡಲೇ ದುರಸ್ತಿ
ಗ್ರಾ.ಪಂ. ಅನುದಾನದಲ್ಲಿ ಈ ರಸ್ತೆ ಅಭಿವೃದ್ಧಿ ಅಸಾಧ್ಯ. ದುರಸ್ತಿಗಾಗಿ ಕ್ರಿಯಾ ಯೋಜನೆ ಯಲ್ಲಿ ಅನುದಾನ ಮೀಸಲಿರಿ ಸಿದ್ದು ಮಳೆಗಾಲ ಮುಗಿದ ಕೂಡಲೇ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು.
-ವಾರಿಜಾ ಪೂಜಾರ್ತಿ,ಶಿರ್ವ ಗ್ರಾ.ಪಂ. ಅಧ್ಯಕ್ಷೆ
ರಸ್ತೆ ಅಭಿವೃದ್ಧಿಗೆ ಶಾಸಕರಿಗೆ ಮನವಿ
ರಸ್ತೆಯ ಬಗ್ಗೆ ಸಾರ್ವಜನಿಕರು ಮನವಿ ಸಲ್ಲಿಸಿದ್ದು,ಸದ್ರಿ ರಸ್ತೆಯನ್ನು ಅಭಿವೃದ್ಧಿ ಪಡಿಸಲು ಜಿ.ಪಂ.ನಲ್ಲಿ ಸಾಕಷ್ಟು ಅನುದಾನವಿಲ್ಲದ ಕಾರಣ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸಲು ಕ್ಷೇತ್ರದ ಶಾಸಕರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ.
-ವಿಲ್ಸನ್ ರೋಡ್ರಿಗಸ್,
ಜಿ.ಪಂ.ಸದಸ್ಯರು