ಜೀ ಕನ್ನಡ ವಾಹಿನಿಯಲ್ಲಿ ಈಗಾಗಲೇ ಎಲ್ಲಾ ರೀತಿಯ ಧಾರಾವಾಹಿಗಳು ಪ್ರಸಾರವಾಗಿವೆ, ಪ್ರಸಾರಗೊಳ್ಳುತ್ತಲೂ ಇವೆ. ಆ ಸಾಲಿಗೆ ಈಗ ಮತ್ತೂಂದು ಹಾರರ್ ಧಾರಾವಾಹಿಯ ಸರದಿ. ಹೌದು, ಈಗಾಗಲೇ “ಆತ್ಮಬಂಧನ’ ಎಂಬ ಧಾರಾವಾಹಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಡಿಸೆಂಬರ್ 17 ರಿಂದ ಶುರುವಾಗಲಿರುವ “ಆತ್ಮಬಂಧನ’ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ರಾತ್ರಿ 10.30 ಕ್ಕೆ ಪ್ರಸಾರವಾಗಲಿದೆ.
ಇದು ತಾಯಿ ಮತ್ತು ಪುಟ್ಟ ಮಗನ ನಡುವಿನ ಬಾಂಧವ್ಯದ ಹಿನ್ನೆಲೆಯಲ್ಲಿ ಸಾಗುವ ಧಾರಾವಾಹಿ. ಜನನ ಮತ್ತು ಮರಣದ ಸಾಕ್ಷಿ ಆತ್ಮ. ಮರಣದ ಬಳಿಕ ಆತ್ಮ ತನ್ನ ಪ್ರೀತಿ ಹಾಗು ದ್ವೇಷವನ್ನು ಬಿಡುವುದಿಲ್ಲ ಎಂಬುದು ನಂಬಿಕೆ. ಈ ಎಳೆ ಇಟ್ಟುಕೊಂಡು ಈ ಕಥೆ ಹೆಣೆಯಲಾಗಿದೆ. ದುರಂತವೊಂದರಲ್ಲಿ ಸಾವನ್ನಪುವ ಮಗನ ಆತ್ಮ ತನ್ನ ಅಮ್ಮನ ಪ್ರೀತಿಗಾಗಿ ಹಂಬಲಿಸಿ ಬರುವ ಮತ್ತು ಆ ಪ್ರೀತಿಗೆ ಅಡ್ಡ ಬರುವವರನ್ನು ಶಿಕ್ಷಿಸುವ ಕಥೆ ಇಲ್ಲಿದೆ.
ಜಿ.ಕೆ. ಸತೀಶ್ ಕೃಷ್ಣನ್ ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ. ಮಹೇಶ್ ಗೌಡ ಮತ್ತು ಡಾ. ಸುಮಾ ಧಾರಾವಾಹಿಯ ನಿರ್ಮಾಪಕರು. ಎಸ್. ಸೆಲ್ವಂ ಮತ್ತು ಗಿರೀಶ್ ತಂಡ ಕಥೆ, ಚಿತ್ರಕಥೆ ಬರೆದಿದೆ. ರತ್ನಗಿರಿ ಅವರ ಸಂಭಾಷಣೆ, ವಿನಯ್ ಅವರ ಸಂಗೀತ, ಹರ್ಷಪ್ರಿಯ ಅವರ ಶೀರ್ಷಿಕೆ ಸಾಹಿತ್ಯ ಧಾರಾವಾಹಿಗಿದೆ. ಇಂತಹ ಧಾರಾವಾಹಿಗಳಿಗೆ ಗ್ರಾಫಿಕ್ಸ್ ಸ್ಪರ್ಶ ಅತೀ ಮುಖ್ಯ. ಹಾಗಾಗಿ, ಪ್ರತಿ ಸಂಚಿಕೆಯಲ್ಲೂ ನೋಡುಗರಿಗೆ ಅದೊಂದು ಹೊಸ ಅನುಭವ ಕಟ್ಟಿಕೊಡಲಿದೆ ಎಂಬುದು ತಂಡದ ಅಭಿಪ್ರಾಯ.
ಇದು ಹಾರರ್ ಅಂಶ ಇರುವ ಧಾರಾವಾಹಿಯಾಗಿದ್ದರೂ, ನೋಡುಗರಿಗೆ ಮನರಂಜನೆ ಕೊಡುತ್ತಲೇ ಒಂದಷ್ಟು ಭಾವನಾತ್ಮಕ ಅಂಶಗಳನ್ನೂ ತೆರೆದಿಡುತ್ತದೆ ಎಂಬುದು ಜೀ ಕನ್ನಡ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು ಅವರ ಮಾತು. ಧಾರಾವಾಹಿಯಲ್ಲಿ ರಜನಿ, ಪ್ರಶಾಂತ್, ಬಾಲನಟ ಆಲಾಪ್, ಶಿವಾನಿ, ಲಕ್ಷಿಗೌಡ, ರಾಮಮೂರ್ತಿ, ರಾಜೇಶ್, ನೇತ್ರಾ ಸಿಂಧ್ಯಾ, ಸುನೇತ್ರ ಪಂಡಿತ್ ಮುಂತಾದವರು ನಟಿಸುತ್ತಿದ್ದಾರೆ. ಡಿಸೆಂಬರ್ 17 ರಿಂದ ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ರಾತ್ರಿ 10.30ಕ್ಕೆ “ಆತ್ಮಬಂಧನ’ ಪ್ರಸಾರವಾಗಲಿದೆ.