Advertisement

ನಿಮ್ಮೆಲ್ಲರ ಪ್ರೀತ್ಯಾದರಕ್ಕೆ ಚಿರಋಣಿ : ಕಾಮನ್‌ವೆಲ್ತ್‌ ಸಾಧಕ ಗುರುರಾಜ್‌ ಪೂಜಾರಿ ಮನದ ಮಾತು

09:17 AM Aug 08, 2022 | Team Udayavani |

ಕುಂದಾಪುರ : ಕಾಮನ್‌ವೆಲ್ತ್‌ ಗೇಮ್ಸ್‌ನ ವೇಟ್‌ ಲಿಫ್ಟಿಂಗ್‌ 61 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಗುರುರಾಜ್‌ ಪೂಜಾರಿ ರವಿವಾರ ಹುಟ್ಟೂರಿಗೆ ಆಗಮಿಸಿದ್ದು, ಮಂಗಳೂರು ವಿಮಾನ ನಿಲ್ದಾಣದಿಂದ ಉಡುಪಿ, ಕುಂದಾಪುರ, ಚಿತ್ತೂರು ಸಹಿತ ಹಾದಿಯುದ್ದಕ್ಕೂ ಅದ್ದೂರಿಯಾಗಿ ಸ್ವಾಗತ, ಸಮ್ಮಾನದೊಂದಿಗೆ ತಮ್ಮೂರಿನ ಹಿರಿಮೆಯನ್ನು ಹೆಚ್ಚಿಸಿದ ಹೆಮ್ಮೆಯ ಸಾಧಕನನ್ನು ಬರಮಾಡಿಕೊಂಡರು.

Advertisement

ಅಭಿನಂದನೆ ಸ್ವೀಕರಿಸಿದ ಗುರುರಾಜ್‌ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಹುಟ್ಟಿದ ನನ್ನಂತಹ ಕ್ರೀಡಾಪಟುಗಳು ಕಾಮನ್‌ವೆಲ್ತ್‌ನಂತಹ ಪಂದ್ಯಾವಳಿಯಲ್ಲಿ ಪದಕ ಗೆಲ್ಲುವುದೇ ಒಂದು ಸಾಧನೆಯಾಗಿದೆ. ಅಭಿಮಾನಿಗಳ ಪ್ರೀತ್ಯಾದರಕ್ಕೆ ನಾನು ಚಿರಋಣಿ ಎಂದರು.

ಹೆಮ್ಮೆಯ ಕ್ಷಣ
2018ರಲ್ಲಿ 56 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದಿದ್ದ ನಾನು 2022ರಲ್ಲಿ 61 ಕೆಜಿ ವಿಭಾಗದಲ್ಲಿ ಸ್ಪರ್ಧಿಸುವ ನಿರ್ಧಾರ ಮಾಡಿದ್ದೆ. ಈ ವಿಭಾಗದಲ್ಲಿ ಸಾಕಷ್ಟು ಪೈಪೋಟಿ ಇತ್ತು. ಕ್ರೀಡಾಕೂಟ ಆರಂಭವಾಗುವ ಕೆಲ ದಿನಗಳ ಮೊದಲು ನನಗೆ ಆರೋಗ್ಯ ಸಮಸ್ಯೆ ಕಾಡಿದ್ದರಿಂದ ಸ್ಪರ್ಧೆ ಹೇಗಾಗುತ್ತದೆ ಎನ್ನುವ ಆತಂಕ ಕಾಡಿತ್ತು. ಮನೆಯವರ ಹರಕೆ, ಎಲ್ಲರ ಹಾರೈಕೆಗಳು ಹಾಗೂ ತರಬೇತುದಾರರ ಮಾರ್ಗದರ್ಶನದಿಂದ ಕಂಚಿನ ಪದಕ ಪಡೆದುಕೊಳ್ಳುವಂತಾಯಿತು. ಕಾಮನ್‌ವೆಲ್ತ್‌ ಕ್ರೀಡಾಕೂಟದ ವೇಯ್‌r ಲಿಫ್ಟಿಂಗ್‌ 61 ಕೆಜಿ ವಿಭಾಗದಲ್ಲಿ ದೇಶಕ್ಕೆ ನನ್ನ ಮೂಲಕ ಮೊದಲ ಪದಕ ಬಂದಿರುವುದು ಹೆಮ್ಮೆಯ ಕ್ಷಣ ಎಂದರು.

ಕುಂದಾಪುರದಲ್ಲಿ ಸ್ವಾಗತ
ಕುಂದಾಪುರದ ಶಾಸ್ತ್ರೀ ವೃತ್ತದಲ್ಲಿ ಚೆಂಡೆ ವಾದನದೊಂದಿಗೆ ತಾಲೂಕು ಆಡಳಿತದ ಪರವಾಗಿ ತಹಶೀಲ್ದಾರ್‌ ಕಿರಣ್‌ ಜಿ. ಗೌರಯ್ಯ ಸ್ವಾಗತಿಸಿ ಅಭಿನಂದಿಸಿದರು. ತಾಲೂಕು ಯುವಜನ ಸೇವಾ ಕ್ರೀಡಾ ಇಲಾಖೆ, ಪೊಲೀಸ್‌ ಇಲಾಖೆ, ಕಲಾಕ್ಷೇತ್ರ ಕುಂದಾಪುರ, ಯುವ ಬಂಟರ ಸಂಘ, ನಮ್ಮ ನಾಡ ಒಕ್ಕೂಟ, ನ್ಯೂ ಹಕ್ಯುìಲಸ್‌ ಜಿಮ್‌ ವತಿಯಿಂದ ಸಮ್ಮಾನಿಸಲಾಯಿತು. ತಲ್ಲೂರಿನಲ್ಲಿ ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್‌ ಕುಮಾರ್‌ ಶೆಟ್ಟಿ ಅವರ ನೇತೃತ್ವದಲ್ಲಿ ಬರಮಾಡಿಕೊಂಡರು. ತೆಕ್ಕಟ್ಟೆ, ವಂಡ್ಸೆಯಲ್ಲೂ ಊರವರು ಅಭಿನಂದಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಇದನ್ನೂ ಓದಿ : ಕರಾವಳಿಯಲ್ಲಿ ಉತ್ತಮ ಮಳೆ ; 2 ದಿನ “ಆರೆಂಜ್‌ ಅಲರ್ಟ್‌’, ಮೀನುಗಾರರಿಗೆ ಎಚ್ಚರಿಕೆ

Advertisement

ಶಾಸಕರಿಂದ ಅಭಿನಂದನೆ
ನೆಂಪುವಿನಲ್ಲಿ ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅಭಿನಂದಿಸಿ, ನಮ್ಮ ಬೈಂದೂರಿಗೆ ಹೆಮ್ಮೆಯ ಕ್ಷಣ, ಇನ್ನಷ್ಟು ಸಾಧನೆ ಮಾಡುವಂತಾಗಲಿ ಎಂದು ಹಾರೈಸಿದರು. ದೇವಲ್ಕುಂದದಲ್ಲಿ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಸಮ್ಮಾನಿಸಿ, ದೇಶಕ್ಕೆ ಮತ್ತಷ್ಟು ಪದಕ ಗೆದ್ದು ತರುವಂತಾಗಲೆಂದು ಹಾರೈಸಿದರು.

ಜಿಲ್ಲಾ ಯುವಜನಾಸೇವಾ ಕ್ರೀಡಾಧಿಕಾರಿ ಡಾ| ರೋಶನ್‌ ಕುಮಾರ್‌ ಶೆಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷ ಎನ್‌. ದೀಪಕ್‌ ಕುಮಾರ್‌ ಶೆಟ್ಟಿ, ಜಿ.ಪಂ ಮಾಜಿ ಸದಸ್ಯ ರೋಹಿತ್‌ ಕುಮಾರ್‌ ಶೆಟ್ಟಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಗೋಪಾಲಕೃಷ್ಣ ನಾಡ, ಗುರುರಾಜ್‌ ಅವರ ಪೋಷಕರಾದ ಜಡ್ಡು ಮಹಾಬಲ ಪೂಜಾರಿ, ಪದ್ದು ಪೂಜಾರಿ ಹಾಗೂ ಪತ್ನಿ ಸೌಜನ್ಯ ಮೊದಲಾದವರು ಈ ಸಂದರ್ಭ ಜತೆಗಿದ್ದರು.

ಕೊಲ್ಲೂರು, ಮಾರಣಕಟ್ಟೆಗೆ ಭೇಟಿ
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ ಗುರುರಾಜ್‌ ಅವರನ್ನು ಆಡಳಿತ ಮಂಡಳಿಯ ಸದಸ್ಯರು, ಸಿಬಂದಿ, ವಿದ್ಯಾರ್ಥಿಗಳು ಬರಮಾಡಿಕೊಂಡರು. ದೇವಿಯ ದರ್ಶನದ ಬಳಿಕ ಅವರನ್ನು ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಜಯನಂದ ಹೋಬಳಿದಾರ್‌, ಡಾ| ಅತುಲ್‌ ಕುಮಾರ್‌ ಶೆಟ್ಟಿ ಹಾಗೂ ರತ್ನಾ ರಮೇಶ್‌ ಗೌರವಿಸಿದರು. ಮೂಕಾಂಬಿಕಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಅರುಣ್‌ ಕುಮಾರ್‌ ಶೆಟ್ಟಿ, ಕ್ರೀಡಾ ಶಿಕ್ಷಕರಾದ ಸುಕೇಶ್‌ ಶೆಟ್ಟಿ ಹೊಸ್ಮಠ, ಸಚಿನ್‌ ಶೆಟ್ಟಿ ಹುಂಚನಿ ಉಪಸ್ಥಿತರಿದ್ದರು.
ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇಗುಲಕ್ಕೆ ಭೇಟಿ ನೀಡಿದಾಗ ಆಡಳಿತ ಮಂಡಳಿ ವತಿಯಿಂದ ಗೌರವಿಸಲಾಯಿತು.

ಗುರುರಾಜ್‌ಗೆ ಡಾ| ಹೆಗ್ಗಡೆ, ನಳಿನ್‌ ಅಭಿನಂದನೆ
ಬೆಳ್ತಂಗಡಿ : ಕಾಮನ್‌ವೆಲ್ತ್‌ ಗೇಮ್ಸ್‌ನ ಭಾರ ಎತ್ತುವ ಸ್ಪರ್ಧೆಯಲ್ಲಿ ಕಂಚಿನ ಪದಕ ವಿಜೇತ ಉಜಿರೆ ಎಸ್‌ಡಿಎಂ ಕಾಲೇಜಿನ ಹಿರಿಯ ವಿದ್ಯಾರ್ಥಿ ಕುಂದಾಪುರದ ಗುರುರಾಜ್‌ ಪೂಜಾರಿ ಅವರು ರವಿವಾರ ಹುಟ್ಟೂರಿಗೆ ಮರಳುವ ಸಂದರ್ಭ ಮಂಗಳೂರು ವಿಮಾನ ನಿಲ್ದಾಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಕ್ಷೇತ್ರದ ಪರವಾಗಿ ಅಭಿನಂದಿಸಿ, ಆಶೀರ್ವದಿಸಿದರು. ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್‌ ಜತೆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next