Advertisement

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಪಟುಗಳು ಬೆಳೆಯಲಿ

03:49 PM Sep 09, 2018 | |

ಕುಮಟಾ: ಭಾರತದ ಜನಸಂಖ್ಯೆಗೆ ತಕ್ಕಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತಿಹೆಚ್ಚಿನ ಕ್ರೀಡಾ ಸಾಧನೆ ಆಗಬೇಕಿದೆ. ಈ ನಿಟ್ಟಿನಲ್ಲಿ ಭವಿಷ್ಯದ ಸಫಲ ಕ್ರೀಡಾಪಟುಗಳನ್ನು ತಯಾರು ಮಾಡುವ ಹೊಣೆ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು. ಅವರು ಕಡ್ಲೆ ಗಾಂಧೀವನ ಕ್ರೀಡಾಂಗಣದಲ್ಲಿ ಹೊಲನಗದ್ದೆ ಸರಕಾರಿ ಹಿಪ್ರಾ ಶಾಲೆ ಮುಂದಾಳತ್ವದಲ್ಲಿ ತಾಲೂಕು ಮಟ್ಟದ 14 ವರ್ಷದೊಳಗಿನ ಪ್ರಾಥಮಿಕ ಶಾಲಾ ಮಕ್ಕಳ ಇಲಾಖಾ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

Advertisement

ಆರ್ಥಿಕತೆಯ ಸಮಸ್ಯೆಯಿಂದ ಕ್ರೀಡಾಪಟುಗಳಿಗೆ ಸಾಧನೆ ಅಡ್ಡಿಯಾಗಬಾರದು. ಈ ನಿಟ್ಟಿನಲ್ಲಿ ಕ್ರೀಡಾ ಪ್ರತಿಭೆಗಳಿಗೆ ಎಲ್ಲರೂ ಕೈಲಾದ ಸಹಾಯ, ಸಹಕಾರ ನೀಡಬೇಕು ಎಂದರು. ಕಡ್ಲೆ ಕ್ರೀಡಾಂಗಣವು ಅರಣ್ಯ ಇಲಾಖೆ ಕ್ಷೇತ್ರಕ್ಕೊಳಪಟ್ಟಿರುವುದರಿಂದ ಇದನ್ನು ಅಭಿವೃದ್ಧಿ ಪಡಿಸಲು ಸಮಸ್ಯೆಯಾಗಿದೆ. ಸಂಬಂಧಪಟ್ಟ ದಾಖಲಾತಿಗಳನ್ನು ಪೂರೈಸಿ ಪ್ರಸ್ತಾವನೆ ಇಟ್ಟರೆ ಅದನ್ನು ಅರಣ್ಯ ಇಲಾಖೆಯಿಂದ ಮಂಜೂರಿಗೊಳಿಸುತ್ತೇನೆ ಎಂದು ಭರವಸೆ ನೀಡಿದರು.

ಜಿಪಂ ಸದಸ್ಯ ರತ್ನಾಕರ ನಾಯ್ಕ ಮಾತನಾಡಿ, ಇಷ್ಟೊಂದು ಸುಂದರ ಕ್ರೀಡಾಂಗಣ ಜಿಲ್ಲೆಯಲ್ಲೇ ಬೇರೆಲ್ಲೂ ಇಲ್ಲ. ಇದರ ಅಭಿವೃದ್ಧಿ ಅಗಲೇಬೇಕು. ಈ ನಿಟ್ಟಿನಲ್ಲಿ ಸ್ಥಳೀಯವಾಗಿ ಹಲವರು ಕೈಜೋಡಿಸಿ ಸಾಕಷ್ಟು ಪ್ರಯತ್ನ ಮಾಡಿದ್ದೇವೆ ಎಂದರು.

ಅಚ್ಚುಕಟ್ಟಾಗಿ ಕ್ರೀಡಾಕೂಟ ಸಂಘಟಿಸಿದ್ದರೂ ಮೇಲಧಿಕಾರಿಗಳು ನಮಗೆ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಬದಲು ಸಿದ್ಧತೆಗಳಿಗೂ ಮುಖತಿರುವಿ, ಕಾರ್ಯಕ್ರಮಕ್ಕೂ ಬಾರದೇ ಇರುವುದು ವಿಷಾದನೀಯ ಎಂದು ಕ್ರೀಡಾಕೂಟದ ಮುಖ್ಯಸಂಯೋಜಕ, ದೈಹಿಕ ಶಿಕ್ಷಕರ ಸಂಘದ ರಾಜ್ಯ ಘಟಕದ ರವೀಂದ್ರ ಭಟ್ಟ ಸೂರಿ ಶಾಸಕರ ಗಮನಸೆಳೆದರು.

ಅಧ್ಯಕ್ಷತೆ ವಹಿಸಿದ್ದ ವಿಜಯಾ ಪಟಗಾರ, ಜಿಪಂ ಸದಸ್ಯ ಗಜಾನನ ಪೈ, ಹೊಲನಗದ್ದೆ ಪಂಚಾಯತ ಅಧ್ಯಕ್ಷ ರಾಘವೇಂದ್ರ ಪಟಗಾರ, ಸದಸ್ಯರಾದ ರಾಮಾ ಮಡಿವಾಳ, ಡಯಟ್‌ ಪ್ರಾಚಾರ್ಯ ಈಶ್ವರ ನಾಯ್ಕ, ಎಸ್‌ಡಿಎಂಸಿ ಅಧ್ಯಕ್ಷೆ ದೀಪಾ ಹಿಣಿ, ಗಣಪತಿ ಮುಕ್ರಿ, ಶಿಕ್ಷಕರ ಸಂಘದ ಆನಂದು ಗಾಂವಕರ, ದೈಹಿಕ ಶಿಕ್ಷಕರ ಸಂಘದ ಬಿ.ಜಿ. ನಾಯಕ ಮತ್ತಿತರರು ಇದ್ದರು. ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್‌.ಎಸ್‌. ಭಟ್ಟ ಸ್ವಾಗತಿಸಿದರು. ಶಿಕ್ಷಕ ವಸಂತ ಶಾನಭಾಗ ಪ್ರತಿಜ್ಞಾವಿಧಿ ಬೋಧಿಸಿದರು. ನಿವೃತ್ತ ದೈಹಿಕ ಶಿಕ್ಷಕ ಗೋಪಾಲ ಆಗೇರ ಹಾಗೂ ಹೊಲನಗದ್ದೆ ಶಾಲೆಯ ಮುಖ್ಯ ಶಿಕ್ಷಕ ಗಣಪತಿ ನಾಯ್ಕರನ್ನು ಸನ್ಮಾನಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next