“ನಾವು ಯಾರು ಅಂತ ಅವನು ಕಂಡುಹಿಡಿಯೋ ಮುನ್ನ, ಅವನು ಯಾರು ಅಂತ ನಾವು ಕಂಡು ಹಿಡಿಯಬೇಕು …’ ಹಾಗಂತ ಇಬ್ಬರೂ ತೀರ್ಮಾನಿಸುವ ಹೊತ್ತಿಗೆ ಮೊದಲಾರ್ಧ ಮುಗಿಯುತ್ತದೆ. ಮುಗಿಯೋಕು ಮುನ್ನ, “ದಿ ಗೇಮ್ ಬಿಗಿನ್ಸ್ ನೌ …’ ಎಂಬ ಸಂದೇಶ ಮುಗಿಯುತ್ತದೆ. ದ್ವಿತೀಯಾರ್ಧದಲ್ಲಿ ಶುರುವಾಗುತ್ತದೆ ನೋಡಿ ಅವರಿಬ್ಬರ ಹಗ್ಗಜಗ್ಗಾಟ, ಚಿತ್ರದ ಕೊನೆಯ ದೃಶ್ಯದವರೆಗೂ ಮುಂದುವರೆಯುತ್ತದೆ.
ಅವನು ಒಂದು ಹೆಜ್ಜೆ ಮುಂದೆ ಇಟ್ಟರೆ, ಇವನು ಎರಡಿಡುತ್ತಾನೆ. ಅವನು ತಾನು ಸೇರು ಎಂದು ತೋರಿಸಿಕೊಟ್ಟರೆ, ಇವನು ತಾನು ಸವ್ವಾಸೇರು ಎಂದು ಸಾಬೀತು ಮಾಡುತ್ತಾನೆ. ಈ ಮೈಂಡ್‌ಗೇಮ್‌ನಲ್ಲಿ ಯಾರು ಗೆಲ್ಲುತ್ತಾರೆ, ಯಾರು ಚೆಕ್‌ಮೇಟ್ ಆಗುತ್ತಾರೆ ಎಂಬ ಕುತೂಹಲವಿದ್ದರೆ ಸಿನಿಮಾ ಮಿಸ್ ಮಾಡದೇ ನೋಡಬೇಕು. ಬಹುಶಃ ಇಡೀ ಭಾರತೀಯ ಚಿತ್ರರಂಗದಲ್ಲಿ ಅದ್ಭುತ ಮೈಂಡ್‌ಗೇಮ್ ಇರುವ ಚಿತ್ರಗಳು ಬರುತ್ತಿವೆ ಎಂದರೆ ಅದು ತಮಿಳಿನಲ್ಲೇ ಇರಬೇಕು.
ಇತ್ತೀಚೆಗೆ ಹಲವು ಅದ್ಭುತ ಎನ್ನುವಂತ ಮೈಂಡ್‌ಗೇಮ್ ಚಿತ್ರಗಳು ಬಂದಿವೆ ಮತ್ತು ಅವುಗಳಲ್ಲಿ ಕೆಲವು ಕನ್ನಡಕ್ಕೆ ರೀಮೇಕ್ ಸಹ ಆಗಿವೆ. ಆ ಸಾಲಿನಲ್ಲಿ “ಅತಿರಥ’ ಸಹ ಒಂದು. ಅದು ತಮಿಳಿನ “ಕನಿಧನ್’ ಚಿತ್ರದ ರೀಮೇಕು. ನಕಲಿ ಮಾರ್ಕ್ಸ್ಕಾರ್ಡ್ ಮತ್ತು ಪ್ರಮಾಣ ಪತ್ರದ ಮಾಫಿಯ ವಿರುದ್ಧ ಸಮರ ಸಾರುವ ಚಿತ್ರ ಇದು. ಚಾನಲ್‌ವೊಂದರಲ್ಲಿ ಟಿ.ವಿ ರಿಪೋರ್ಟರ್ ಆಗಿರುವ ನಾಯಕ, ತನಗೆ ಗೊತ್ತಿಲ್ಲದೆಯೇ ನಕಲಿ ಮಾರ್ಕ್ಸ್ಕಾರ್ಡ್ ಮತ್ತು ಪ್ರಮಾಣಪತ್ರ ದಂಧೆಯಲ್ಲಿ ಒಬ್ಬನಾಗಿರುತ್ತಾನೆ.
ಇದರಿಂದ ಬೇಸತ್ತು ಆತ ಈ ದಂಧೆಯನ್ನು ಬುಡಮೇಲು ಮಾಡುವುದಕ್ಕೆ ಪಣತೊಡುತ್ತಾನೆ. ಈ ನಿಟ್ಟಿನಲ್ಲಿ ನಕಲಿ ಪ್ರಮಾಣಪತ್ರದ ಕಿಂಗ್‌ಪಿನ್ ಸರ್ಕಾರ್‌ನನ್ನು ಎದುರು ಹಾಕಿಕೊಳ್ಳುತ್ತಾನೆ. ನಂತರ ಅವರ ನಡುವೆ ದೊಡ್ಡ ಜಟಾಪಟಿಯೇ ನಡೆದು ಹೋಗುತ್ತದೆ. ಇದರಲ್ಲಿ ಯಾರು ಮತ್ತು ಹೇಗೆ ಗೆಲ್ಲುತ್ತಾರೆ ಎನ್ನುವುದೇ ಚಿತ್ರದ ಹೈಲೈಟು. ಚಿತ್ರದ ಮೊದಲ ಒಂದು ಗಂಟೆ ಹೆಚ್ಚೇನೂ ಆಗುವುದಿಲ್ಲ. ನಾಯಕ-ನಾಯಕಿಯ ಭೇಟಿ, ಕಿತ್ತಾಟ, ಸ್ನೇಹ, ಸಲುಗೆ ಜೊತೆಗೆ ಹಾಸ್ಯದ ಹೆಸರಿನಲ್ಲಿ ಒಂದಿಷ್ಟು ಮಂಗಾಟಗಳು ಮೊದಲ ಮುಕ್ಕಾಲು ತಾಸು ನಡೆಯುತ್ತದೆ.
ನಕಲಿ ಪ್ರಮಾಣ ಪತ್ರ ದಂಧೆಯಲ್ಲಿ ನಾಯಕ ಸಿಕ್ಕಿಬೀಳುವ ಮೂಲಕ, ಚಿತ್ರ ಟೇಕಾಫ್ ಆಗುತ್ತದೆ. ಇನ್ನು ಖಳನಾಯಕನ ಎಂಟ್ರಿ ಮೂಲಕ ಚಿತ್ರಕ್ಕಿನ್ನೂ ವೇಗ ಸಿಗುತ್ತದೆ. ನಂತರ ಅವರಿಬ್ಬರ ತಂತ್ರ-ಕುತಂತ್ರ-ಪ್ರತಿತಂತ್ರಗಳು ಪ್ರೇಕ್ಷಕರನ್ನು ಕಟ್ಟಿ ಹಾಕುತ್ತದೆ. ಕೊನೆಯವರೆಗೂ ಪ್ರೇಕ್ಷಕ ಬಿಗಿ ಹಿಡಿದು ನೋಡುವಂತೆ ಚಿತ್ರ ನೋಡಿಸಿಕೊಂಡು ಹೋಗುತ್ತದೆ. ಈ ಮಧ್ಯೆ ಚಿತ್ರ ಸ್ವಲ್ಪ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದನಿಸಬಹುದು. ಆದರೆ, ಒಟ್ಟಾರೆ ಚಿತ್ರದ ಹೈಲೈಟೇ ದ್ವಿತೀಯಾರ್ಧ ಎಂದರೆ ತಪ್ಪಿಲ್ಲ. ಅದು ಇಷ್ಟವಾದರೆ, ಚಿತ್ರ ಇಷ್ಟವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಚೇತನ್ ಅವರ ಹಿಂದಿನ ಕೆಲವು ಚಿತ್ರಗಳಿಗೆ ಹೋಲಿಸಿದರೆ ಇದು ವಿಭಿನ್ನವಾದ ಪಾತ್ರ. ಹೆಜ್ಜೆ ಹೆಜ್ಜೆಗೂ ಎದುರಾಳಿಯ ತಂತ್ರವನ್ನು ಊಹಿಸಿ, ಪ್ರತಿತಂತ್ರ ರೂಪಿಸುವ ಒಂದು ಚುರುಕಾದ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಲತಾ ಹೆಗಡೆ ತಮ್ಮ ಅಂದ-ಚೆಂದದಿಂದ ಗಮನಸೆಳೆಯುತ್ತಾರೆ. ಅವಿನಾಶ್ ಮತ್ತು ಅಚ್ಯುತ್ ಕುಮಾರ್ ಇಷ್ಟವಾಗುತ್ತಾರೆ. ಹೀರೋಗೆ ತಕ್ಕ ವಿಲನ್ ಆಗಿ ಕಬೀರ್ ಸಿಂಗ್ ದುಹಾನ್ ನಟಿಸಿದ್ದಾರೆ. ಸುರಾಗ್ ಸಂಗೀತ ನಿರ್ದೇಶನದಲ್ಲಿ ಎರಡು ಹಾಡುಗಳು ಇಷ್ಟವಾಗುತ್ತದೆ. ಜೈ ಆನಂದ್ ಕತ್ತಲೆ ರಾತ್ರಿಗಳನ್ನು ಬಹಳ ಚೆನ್ನಾಗಿ ಹಿಡಿದಿಟ್ಟಿದ್ದಾರೆ.
ಚಿತ್ರ: ಅತಿರಥ
ನಿರ್ದೇಶನ: ಮಹೇಶ್ ಬಾಬು
ನಿರ್ಮಾಣ: ಕೃಷ್ಣ, ಮೈಸೂರು
ತಾರಾಗಣ: ಚೇತನ್, ಲತಾ ಹೆಗಡೆ, ಕಬೀರ್ ಸಿಂಗ್ ದುಹಾನ್, ಅವಿನಾಶ್, ಅಚ್ಯುತ್ ಕುಮಾರ್, ಸಾಧು ಕೋಕಿಲ ಮುಂತಾದವರು
* ಚೇತನ್ ನಾಡಿಗೇರ್