ಅರ್ಜುನ್ ಸರ್ಜಾ ಕುಟುಂಬದಿಂದ ಈಗಾಗಲೇ ಚಿರಂಜೀವಿ, ಧ್ರುವ ಮತ್ತು ಐಶ್ವರ್ಯ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾಗಿದೆ. ಈಗ ಅದೇ ಕುಟುಂಬದ ಪವನ್ ತೇಜ ಸಹ “ಅಥರ್ವ’ ಎಂಬ ಚಿತ್ರದ ಮೂಲಿಕ ಹೀರೋ ಆಗಿ ಎಂಟ್ರಿಯಾಗುತ್ತಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದಿದ್ದು, ಈಗ ಹಾಡುಗಳು ಸಹ ಬಿಡುಗಡೆಯಾಗಿದೆ.
ಇತ್ತೀಚೆಗೆ ಚಿರಂಜೀವಿ ಸರ್ಜಾ, ಧ್ರುವ ಸರ್ಜಾ ಹಾಗೂ ಅವರ ಕುಟುಂಬ ವರ್ಗ ಹಾಡುಗಳ ಬಿಡುಗಡೆಗೆ ಸಾಕ್ಷಿಯಾಯಿತು. ಚಿರು ಮತ್ತು ಧ್ರುವ ಇಬ್ಬರೂ ಆಡಿಯೋ ಸಿಡಿ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಚಿತ್ರದ ಮೂಲಕ ಹೀರೋ ಆಗಿರುವ ಸಹೋದರ ಪವನ್ ತೇಜ ಇನ್ನೂ ಒಳ್ಳೆಯ ಚಿತ್ರಗಳನ್ನು ಮಾಡುವ ಮೂಲಕ ಎತ್ತರಕ್ಕೆ ಬೆಳೆಯಲಿ ಎಂದು ಶುಭ ಕೋರಿದರು.
ಮೊದಲ ಬಾರಿಗೆ “ಅಥರ್ವ’ ನಿರ್ದೇಶಿಸುತ್ತಿರುವ ಅರುಣ್‌ಗೆ “ಅಥರ್ವ’ ಮೇಲೆ ನಂಬಿಕೆ ಇದೆ. “ಇದು ಸಂಬಂಧಗಳ ಸುಳಿಯಲ್ಲಿ ಸಿಲುಕಿದ ಕಥೆ. ಇದರೊಳಗೊಂದು ಪ್ರೇಮಕಥೆಯೂ ಸಮ್ಮಿಶ್ರಗೊಂಡಿದೆ. ಒಂದು ಕಮರ್ಷಿಯಲ್ ಚಿತ್ರದಲ್ಲಿ ಏನೆಲ್ಲಾ ಇರಬೇಕೋ ಅದೆಲ್ಲವೂ ಇಲ್ಲಿರಲಿದೆ’ ಎಂಬುದು ನಿರ್ದೇಶಕ ಅರುಣ್ ಮಾತು.
ಪವನ್ ತೇಜಗೆ ಈ ಚಿತ್ರದಲ್ಲಿ ನಟಿಸುವ ಮುನ್ನ ಸಾಕಷ್ಟು ಭಯ ಇತ್ತಂತೆ. ಕೊನೆಗೆ ಚಿರಂಜೀವಿ ಸರ್ಜಾ ಅವರ ಬಳಿ ಹೋಗಿ, ಚಿತ್ರದ ಬಗ್ಗೆ ಹೇಳಿಕೊಂಡಾಗ, ಅವರು ಸಾಕಷ್ಟು ಧೈರ್ಯ ಕೊಟ್ಟರಂತೆ. ಹಾಗಾಗಿ, “ಅಥರ್ವ’ ಶುರುವಾದಾಗಿನಿಂದ ಅಂತ್ಯದವರೆಗೂ ಚಿರಂಜೀವಿ ಸರ್ಜಾ ಕೊಟ್ಟ ಧೈರ್ಯದಿಂದಲೇ ಚಿತ್ರ ಮಾಡಿದ್ದಾಗಿ ಹೇಳಿಕೊಂಡ ಪವನ್ ತೇಜ, ಚಿರು ಕಾಲಿಗೆ ನಮಸ್ಕರಿಸಿ, ಆಶೀರ್ವಾದ ಪಡೆದರು.
ಈ ಚಿತ್ರಕ್ಕೆ ಸನಮ್ ಶೆಟ್ಟಿ ನಾಯಕಿ. ಕನ್ನಡದಲ್ಲಿ ಇದು ಮೊದಲ ಚಿತ್ರವಾದರೂ, ಈಗಾಲಗೇ ತೆಲುಗು ಹಾಗೂ ತಮಿಳು ಭಾಷೆಯ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರಿಗೆ ಇಲ್ಲಿ ಒಳ್ಳೆಯ ಪಾತ್ರ ಸಿಕ್ಕ ಖುಷಿ. ಹೊಸ ತಂಡವಾದರೂ, ಒಳ್ಳೆಯ ತಂಡದಲ್ಲಿ ಕೆಲಸ ಮಾಡಿದ್ದು ಅನನ್ಯ ಅನುಭವ ಅವರಿಗಾಗಿದೆಯಂತೆ.
ಅಂದು ನಟಿ ತಾರಾ ಕೂಡ ಹಾಜರಿದ್ದರು. ಅವರೊಂದು ಸಣ್ಣ ಪಾತ್ರ ನಿರ್ವಹಿಸಿದ್ದಾರೆ. ಚಿಕ್ಕ ಪಾತ್ರವಾದರೂ, ಅದು ಕಾಡುವ ಪಾತ್ರ ಎಂಬುದು ತಾರಾ ಮಾತು.
ರಾಘವೇಂದ್ರ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಹಾಡುಗಳನ್ನು ಮುಂಬೈ, ಚೆನ್ನೈ, ಕೇರಳದಲ್ಲಿ ರೆಕಾರ್ಡಿಂಗ್ ಮಾಡಿದ ಬಗ್ಗೆ ವಿವರ ಕೊಟ್ಟರಲ್ಲದೆ, ಈಗ ಎರಡು ಗೀತೆಗಳನ್ನು ಹೊರಬಿಡಲಾಗಿದ್ದು, ಉಳಿದ ಮೂರು ಹಾಡುಗಳನ್ನು ಇಷ್ಟರಲ್ಲೇ ಬಿಡುಗಡೆ ಮಾಡಲಾಗುತ್ತದೆ ಎಂದು ವಿವರ ಕೊಟ್ಟರು ಸಂಗೀತ ನಿರ್ದೇಶಕ ರಾಘವೇಂದ್ರ. ಈ ಚಿತ್ರಕ್ಕೆ ರಕ್ಷಯ್ ಎಸ್.ಪಿ. ಮತ್ತು ವಿನಯ್‌ಕುಮಾರ್ ನಿರ್ಮಾಪಕರು.