ಮೈಸೂರು: 1983ರಲ್ಲಿ ಮೈಸೂರಿಗೆ ಅಟಲ್ ಬಿಹಾರಿ ವಾಜಪೇಯಿಯವರ ಪ್ರವಾಸ ನಿಗದಿಯಾಗಿತ್ತು. ನಾನಾಗ ಬಿಜೆಪಿಯ ಮೈಸೂರು ಜಿಲ್ಲಾಧ್ಯಕ್ಷ. ಮಡಿಕೇರಿಯಿಂದ ಬರುತ್ತಿದ್ದ ವಾಜಪೇಯಿ ಅವರನ್ನು ಪಿರಿಯಾಪಟ್ಟಣದಲ್ಲಿ ಸ್ವಾಗತಿಸಿದೆವು.
ಕಾರಿನಲ್ಲಿ ವಾಜಪೇಯಿ, ನಾನು ಹಾಗೂ ಡ್ರೈವರ್ ಮೂವರೇ ಮೈಸೂರಿನತ್ತ ಹೊರಟಿದ್ದೆವು. ಮುಖ್ಯರಸ್ತೆಯಲ್ಲಿ ಅಂಗಡಿ ನೋಡಿದ ಕೂಡಲೇ ಕಾರನ್ನು ನಿಲ್ಲಿಸುವಂತೆ ಡ್ರೆçವರ್‌ಗೆ ಹೇಳಿದವರೇ ನನಗೆ ಚೌಚೌ ತನ್ನಿ ಅಂದ್ರು. ರಸ್ತೆಬದಿ ಕಾರು ನಿಲ್ಲಿಸಿ ಅಯ್ಯಂಗಾರ್ ಬೇಕರಿಗೆ ಹೋಗಿ ಚೌಚೌ ತಂದು ಕೊಟ್ಟಿದ್ದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ತೋಂಟದಾರ್ಯ ಸ್ಮರಿಸಿಕೊಂಡರು.
ಸಮಯ ಉಳಿಯುತ್ತೆ: ಅಲ್ಲಿಂದ ಹೊರಟ ಮೇಲೆ ಜಿಲ್ಲಾ ಕಾರ್ಯದರ್ಶಿಯಾಗಿದ್ದ ಡಾ.ತಮ್ಮಯ್ಯ ಚಪಾತಿ, ಅಲೂಗಡ್ಡೆ ಪಲ್ಯ ಸೇರಿದಂತೆ ಊಟ ತಂದುಕೊಟ್ಟಿದ್ದರು. ಮೈಸೂರಿನಿಂದ ಚಾಮರಾಜನಗರಕ್ಕೆ ಹೋಗಬೇಕಿದ್ದರಿಂದ ಗಣಪತಿ ಆಶ್ರಮಕ್ಕೆ ಒಂದು ಕಿ.ಮೀ. ದೂರದಲ್ಲಿ ಕಾರನ್ನು ನಿಲ್ಲಿಸಿ ರಸ್ತೆ ಬದಿಯಲ್ಲೇ ಊಟ ಮಾಡಿದ್ದರು.
ರಸ್ತೆಯಲ್ಲಿ ಊಟ ಮಾಡೋದಾ ಸರ್ ಅಂದಾಗ ಸಮಯ ಉಳಿಯುತ್ತಲ್ಲಾ ಎಂದು ನಕ್ಕಿದ್ದರು. ಚಾಮರಾಜನಗರ, ಕೊಳ್ಳೇಗಾಲಕ್ಕೆ ಹೋಗಿ ವಾಪಸ್ ಮೈಸೂರಿಗೆ ಬಂದು ಅವರನ್ನು ದೆಹಲಿಗೆ ಬೀಳ್ಕೊಡಲಾಯಿತು. ವಾಜಪೇಯಿ ಅವರೊಂದಿಗೆ ಅಷ್ಟು ದೂರ ಪ್ರಯಾಣ ಮಾಡಿದ್ದು ನನ್ನ ಸೌಭಾಗ್ಯ ಅಂಥ ಭಾವಿಸಿರುವೆ.
1983ರಲ್ಲಿ ಎ.ಕೆ.ಸುಬ್ಬಯ್ಯ ರಾಜ್ಯಾಧ್ಯಕ್ಷರಾಗಿದ್ದಾಗ ನಿಧಿ ಅರ್ಪಣೆ ಕಾರ್ಯಕ್ರಮಕ್ಕೆ ವಾಜಪೇಯಿ ಬಂದಿದ್ದರು. ಪಿರಿಯಾಪಟ್ಟಣ, ಕೆ.ಆರ್.ನಗರ, ತಿ.ನರಸೀಪುರ, ನಂಜನಗೂಡು, ಕೊಳ್ಳೇಗಾಲ, ಚಾಮರಾಜನಗರದಲ್ಲಿ ನಿಧಿ ಅರ್ಪಣೆ ಮಾಡಲಾಯಿತು.
ಕೊಳ್ಳೇಗಾಲದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಎ.ಕೆ.ಸುಬ್ಬಯ್ಯ ವಾಜಪೇಯಿ ಭಾಷಣವನ್ನು ಕನ್ನಡಕ್ಕೆ ಅನುವಾದ ಮಾಡಬೇಕಾಗಿತ್ತು. ಆದರೆ, ಅವರು ತುರ್ತಾಗಿ ಕೊಡಗಿಗೆ ಹೊರಟಿದ್ದರಿಂದ ನಾನು ಅನುವಾದ ಮಾಡಿದೆ. ನಾನು ಅವರೊಂದಿಗೆ ಓಡಾಡಿದ್ದು, ಬೆರೆತಿದ್ದು ನನ್ನ ಪಾಲಿಗೆ ಅಸ್ಮರಣೀಯ.