Advertisement
ಕೃಷಿ ಪ್ರಧಾನ ಭಾರತದಲ್ಲಿ ರೈತ ಹಾಗೂ ಕೃಷಿ ಕೂಲಿ ಕಾರ್ಮಿಕರು ಆರ್ಥಿಕ ಪ್ರಗತಿ ಕಂಡಾಗ ಮಾತ್ರ ದೇಶವಾಸಿಗಳ ಜೀವನಮಟ್ಟ ಉತ್ಕೃಷ್ಟವಾಗಲು ಸಾಧ್ಯ. ನೀರು ಮತ್ತು ವಿದ್ಯುತ್‌ಎರಡೂ ಸರಿಯಾಗಿ ರೈತನಿಗೆ ಸಿಕ್ಕಿದ್ದೇ ಆದಲ್ಲಿ ಆತ ಸದೃಢನಾಗುತ್ತಾನೆ. ಒಮ್ಮೆ ಅತಿವೃಷ್ಟಿ, ಮತ್ತೂಮ್ಮೆ ಅನಾವೃಷ್ಟಿ ಅನ್ನದಾತನನ್ನು ಕಂಗೆಡಿಸಿದೆ. ದೇಶದ ವಿವಿಧ ಭಾಗಗಳಲ್ಲಿ ಪ್ರತಿವರ್ಷ ಬರಗಾಲದಿಂದಾಗಿ ರೈತ ಕೃಷಿ ಕೆಲಸ ಬಿಟ್ಟು ಹೊಟ್ಟೆಪಾಡಿಗೆ ನಗರಗಳಿಗೆ ವಲಸೆ ಹೊಗುತ್ತಿರುವುದು ಬೇಸರದ ಸಂಗತಿ. ಒಂದೆಡೆ ಈ ಸಮಸ್ಯೆಯಾದರೆ ಮತ್ತೂಂದೆಡೆ ಉತ್ತರ ಭಾರತದ ನದಿ ಪ್ರಾಂತ್ಯದಲ್ಲಿ ಪ್ರಮುಖ ನದಿಗಳಿಂದ ಉಂಟಾಗುವ ನೆರೆಯಿಂದಾಗಿ ಪ್ರತಿವರ್ಷ ಜನಜೀವನ ಅಸ್ತವ್ಯಸ್ತವಾಗುತ್ತದೆ. ಈ ಎಲ್ಲ ಸಮಸ್ಯೆಗಳಿಗೂ ಒಂದೇ ಉತ್ತರ- ರಾಷ್ಟ್ರೀಯ ನದಿ ಜೋಡಣೆ.
Related Articles
Advertisement
ಆದರೆ 9 ಮತ್ತು 10ನೇ ಪಂಚವಾರ್ಷಿಕ ಯೋಜನೆಗಳಲ್ಲಿ ಈ ಯೋಜನೆಯ ಪ್ರಸ್ತಾಪವೇ ಬರಲಿಲ್ಲ. ಆಮೇಲೆ ಕಾರ್ಯಸಾಧ್ಯತೆ ಪರಾಮರ್ಶೆ, ಪರಿಸರದ ಸಾಧಕ-ಬಾಧಕಗಳ ಅವಲೋಕನ ಮೊದಲಾದ ದೀರ್ಘಕಾಲಿಕ ಅಧ್ಯಯನದ ಪ್ರಕ್ರಿಯೆಯಿಂದಾಗಿ ಯೋಜನೆ ಅನುದಾನವಾಗಲೇ ಇಲ್ಲ. ಮುಂದೆ 2002ರಲ್ಲಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂರವರು ತಮ್ಮ ಭಾಷಣದಲ್ಲಿ ನದಿ ಜೋಡಣೆಯ ಬಗ್ಗೆ ಉಲ್ಲೇಖೀಸಿದರು. 2002ರ ಅಕ್ಟೋಬರ್‌ನಲ್ಲಿ ನದಿ ಜೋಡಣೆಯ ಕಾರ್ಯ ಆರಂಭಿಸಬೇಕೆಂದು ಸುಪ್ರಿಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿತು. ಇದನ್ನು ರಾಜಕೀಯ ಅವಕಾಶವಾಗಿ ಬಳಸಿ ಕೊಂಡ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿರವರು ಸಂಸತ್ತಿನಲ್ಲಿ ನದಿ ಜೋಡಣೆ ಯೋಜನೆಯನ್ನು ಘೋಷಿಸಿದರು.
ಆದರೆ ಯೋಜನೆ ಕೈಗೆತ್ತಿಕೊಳ್ಳುವ ಮೊದಲೇ ಅಟಲ್‌ಜೀ ಸರ್ಕಾರದ ಅವಧಿ ಮುಗಿದ ಕಾರಣ ಯೋಜನೆ ಕಾರ್ಯರೂಪಕ್ಕೆ ಬರಲಿಲ್ಲ. ನಂತರ ಬಂದ ಮನಮೋಹನ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಈ ಯೋಜನೆಯ ಕುರಿತು ಆಸಕ್ತಿ ವಹಿಸಲಿಲ್ಲ. ಇದಾದ ಬಳಿಕ 2012ರ ಫೆ.12ರಂದು 2 ರಿಟ್ ಅರ್ಜಿಗಳನ್ನು ಪರಿಶೀಲಿಸಿ ಅರ್ಜಿ ಬಗ್ಗೆ ತೀರ್ಪು ನೀಡಿದ ಸುಪ್ರಿಂಕೋರ್ಟ್, ರಾಷ್ಟ್ರೀಯ ನದಿ ಜೋಡಣೆ ಯನ್ನು ಅನುಷ್ಠಾನಗೊಳಿಸಲು ಹಾಗೂ ಅದರ ನಿರ್ವಹಣೆಗೆ ಪ್ರತ್ಯೇಕ ಸಮಿತಿ ರೂಪಿಸಲು ಆದೇಶ ನೀಡಿತು. ಆಗಲೂ ಯುಪಿಎ ಸರ್ಕಾರ ಈ ಕುರಿತು ಆಸಕ್ತಿವಹಿಸಲಿಲ್ಲ. 2014ರಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದಾಗ ಅಟಲ್‌ಜೀ ಸಂಸತ್ತಿನಲ್ಲಿ ಘೋಷಿಸಿದ ಯೋಜನೆಯನ್ನು ನರೇಂದ್ರ ಮೋದಿ ಕಾರ್ಯರೂಪಕ್ಕೆ ತರುತ್ತಾರೆ ಎಂಬ ಆಸೆ ಮತ್ತೆ ಚಿಗುರಿತ್ತು. ಕರ್ನಾಟಕದ ಪ್ರಮುಖ ನದಿಯಾದ ಕಾವೇರಿ ಹಾಗೂ ಆಂಧ್ರಪ್ರದೇಶದ ಪ್ರಮುಖ ನದಿಯಾದ ಗೋದಾವರಿಯನ್ನು ಪರಸ್ಪರ ಜೋಡಿಸುವ ಮೂಲಕ ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ನೀರಿನ ಬವಣೆ ನೀಗಿಸುವ ಮಹಾತ್ವಾಕಾಂಕ್ಷೆಯ ಯೋಜನೆಯನ್ನು ಕೇಂದ್ರ ಸರಕಾರ ಪ್ರಥಮ ಹಂತದಲ್ಲಿ ಕೈಗೆತ್ತಿಕೊಳ್ಳಬೇಕು.
ಅಂದಾಜು 60,000 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೆತ್ತಿಕೊಳ್ಳಬಹುದಾದ ಈ ಯೋಜನೆಯು ನಿಜಾರ್ಥದಲ್ಲಿ ಕಾವೇರಿ-ಕೃಷ್ಣ-ಗೋದಾವರಿ-ಪೆನ್ನಾರ್ ನದಿಗಳ ಜೋಡಣೆ ಯೋಜನೆ ಆಗಿದೆ. ಇದರ ವಿಸ್ತೃತ ವರದಿಯು ಈಗಾಗಲೇ ಸರ್ಕಾರದ ಬಳಿ ಸಿದ್ಧವಿದೆ. ಈ ಯೋಜನೆಯನ್ನು ಸಂಪುಟ ಸಭೆಯಲ್ಲಿ ಮಂಡಿಸಿ ಸಂಪುಟ ಸಭೆಯ ಒಪ್ಪಿಗೆ ದೊರೆತ ನಂತರ ಯೋಜನೆಗೆ ಬೇಕಾದ ಹಣವನ್ನು ವಿಶ್ವಬ್ಯಾಂಕ್‌ನಿಂದ ಅಥವಾ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನಿಂದ ಪಡೆದು ಯೋಜನೆ ಅನುಷ್ಠಾನಗೊಳಿಸಬಹುದು.
ಹಂತ-ಹಂತವಾಗಿ ಈ ಯೋಜನೆಯಡಿ ಪ್ರತಿ ರಾಜ್ಯಗಳಲ್ಲಿ ಬೇಡಿಕೆಗೆ ಅನುಸಾರವಾಗಿ ಅಲ್ಲಿಯ ಚಿಕ್ಕಪುಟ್ಟ ನದಿ ಜೋಡಣೆಗಳ ಜೊತೆಗೆ ರಾಷ್ಟ್ರದ ಪ್ರಮುಖ ನದಿಗಳನ್ನು ಜೋಡಿಸಿದರೆ 10-15 ವರ್ಷಗಳಲ್ಲಿ ರಾಷ್ಟ್ರದಲ್ಲಿರುವ ಎಲ್ಲ ಪ್ರಮುಖ ನದಿಗಳು ಜೋಡಣೆಯಾಗಿ ದೇಶ ಸುಭಿಕ್ಷ ಗೊಳ್ಳುತ್ತದೆ. ಹಾಗೂ ದೇಶ ಹಸಿರಿನಿಂದ ಕಂಗೊಳಿಸುವುದರೊಂದಿಗೆ, ಕೃಷಿ ವ್ಯವಸ್ಥೆ ಸುಭದ್ರವಾಗುತ್ತದೆ.
ಬರ ಮತ್ತು ಪ್ರವಾಹದ ನಿರ್ವಹಣೆ: ಭಾರತ ಪ್ರತಿವರ್ಷ ಮಳೆಯ ರೂಪದಲ್ಲಿ ಸುಮಾರು 1 ಮಿಲಿಯನ್ ಗ್ಯಾಲನ್‌ಗಳಷ್ಟು ತಾಜಾ ನೀರನ್ನು ಪಡೆಯುತ್ತದೆ. ಆದರೆ ಈ ಮಳೆ ದೇಶದ ತುಂಬೆಲ್ಲ ಸಮ ಪ್ರಮಾಣದಲ್ಲಿ ಆಗಲ್ಲ. ಹೀಗಾಗಿ ಹಿಮಾಲಯ ಮತ್ತು ಘಟ್ಟ ಪ್ರದೇಶಗಳಲ್ಲಿ ವಿಪರೀತ ಮಳೆಯಾದರೆ ಬಯಲುಸೀಮೆ ಮಳೆಯ ಕೊರತೆಯನ್ನು ಅನುಭವಿಸುತ್ತದೆ. ಹಿಮಾಲಯದಿಂದ ಹರಿದುಬರುವ ನದಿಗಳು ಉತ್ತರ ಭಾರತದಲ್ಲಿ ಪ್ರವಾಹದ ಭೀಕರತೆಯನ್ನು ಸೃಷ್ಟಿಸಿದರೆ, ದಕ್ಷಿಣ ಭಾರತದ ಬಯಲು ಸೀಮೆಯ ಪ್ರದೇಶ ನೀರಿಲ್ಲದೇ ನರಕಯಾತನೆ ಅನುಭವಿಸುತ್ತದೆ. ರಾಷ್ಟ್ರೀಯ ನದಿ ಜೋಡಣೆ ದೇಶದ ಈ ಗುರುತರವಾದ ಸಮಸ್ಯೆಗೆ ಪರಿಹಾರವಾಗುತ್ತದೆ.
ಕೃಷ್ಣ, ಗೋದಾವರಿ-ಕರ್ನಾಟಕಕ್ಕೆ ಅನ್ಯಾಯವೇಕೆ? ಈ ಪ್ರಶ್ನೆಗೆ ಕೇಂದ್ರದ ಬಳಿಯೂ ಉತ್ತರವಿಲ್ಲ. ದಕ್ಷಿಣ ಭಾರತದ ಪ್ರಮುಖ ನದಿಗಳನ್ನು ಜೋಡಿಸುವ ಗೋದಾವರಿ-ಮಹಾನದಿ-ಕೃಷ್ಣ-ಕಾವೇರಿ-ಪೆನ್ನಾರ ನದಿ ಜೋಡಣೆ ಯೋಜನೆಯನ್ನು ಅನುಷ್ಠಾನಗೊಳಿಸುವುದು ರಾಷ್ಟ್ರೀಯ ನದಿ ಜೋಡಣೆ ಯೋಜನೆಯಲ್ಲಿ ಸರ್ಕಾರದ ಮೊದಲ ಪ್ರಾಶಸ್ತÂವಾಗಿದೆ. ಆಂಧ್ರ ಸರ್ಕಾರವು ಕೃಷ್ಣ ಮತ್ತು ಗೋದಾವರಿ ನದಿಗಳನ್ನು ಜೋಡಿಸುವ ಮೂಲಕ ಭಾರತದ ಬಹುಕಾಲದ ಕನಸಿಗೆ ಜೀವತುಂಬಿದೆ. ಈ ಮೂಲಕ ಗೋದಾವರಿ ನದಿ ಕೃಷ್ಣೆಗೆ ಹರಿಯಲಿದೆ. ಯೋಜನೆಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದ್ದರೂ ಕರ್ನಾಟಕ ಮಾತ್ರ ಇದರಲ್ಲಿ ಮೋಸಹೋಗಿದೆ. ಮಹಾನದಿ ಮತ್ತು ಗೋದಾವರಿ ನದಿ ಪಾತ್ರಗಳಿಂದ ನೀರನ್ನು ಕಾವೇರಿ ಮತ್ತು ಕೃಷ್ಣಾ ಕಣಿವೆಗಳಿಗೆ ತಿರುಗಿಸುವ ಯೋಜನೆಗಳಿಂದ ರಾಜ್ಯಕ್ಕೆ ಹಂಚಿಕೆಯಾಗಬೇಕಿದ್ದ ನೀರಿನ ಪ್ರಮಾಣವನ್ನು ಸತತವಾಗಿ ತಗ್ಗಿಸಿ, 3ನೇ ಬಾರಿ ಸಂಪೂರ್ಣವಾಗಿ ರದ್ದು ಮಾಡಲಾಗಿದೆ. ಈ ವಿಚಾರದಲ್ಲಿ ಹಂತ-ಹಂತವಾಗಿ ರಾಜ್ಯಕ್ಕೆ ಅನ್ಯಾಯವಾಗುತ್ತಲೇ ಬಂದಿದೆ.
1980ರಲ್ಲಿ ಮಹಾನದಿ ಮತ್ತು ಗೋದಾವರಿ ಪಾತ್ರಗಳಿಂದ ರಾಜ್ಯಕ್ಕೆ 283 ಟಿಎಂಸಿ ಅಡಿ ನೀರು ಹಂಚಿಕೆಯಾಗಿತ್ತು. 2000ರಲ್ಲಿ ಈ ಪ್ರಮಾಣವನ್ನು 164 ಟಿಎಂಸಿ ಅಡಿಗೆ ತಗ್ಗಿಸಲಾಯಿತು. 2010ರಲ್ಲಿ ನಡೆದ ಪರಿಷ್ಕರಣೆಯಲ್ಲಿ ಕರ್ನಾಟಕದ ಪಾಲನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಯಿತು. ಕರ್ನಾಟಕಕ್ಕೆ ಏಕೆ ಹೀಗೆ ಅನ್ಯಾಯ ವಾಗುತ್ತಿದೆ ಎಂಬ ಪ್ರಶ್ನೆಗೆ ಕೇಂದ್ರ ಸರ್ಕಾರದ ಬಳಿಯೂ ಉತ್ತರವಿಲ್ಲ. ಇಷ್ಟು ದೊಡ್ಡ ಪ್ರಮಾಣದ ನೀರು ರಾಜ್ಯದಿಂದ ಕೈ ಬಿಟ್ಟರೂ ರಾಜ್ಯದ ಕೃಷ್ಣಾ ನದಿ ಪಾತ್ರದಲ್ಲಿ ಬರುವ ನಮ್ಮ ಸಂಸದರು ಏನು ಮಾಡುತ್ತಿದ್ದರು?
ಅಮೃತಧಾರೆ: ಕಾಳಿ-ಘಟಪ್ರಭಾ-ಮಲಪ್ರಭಾ ನದಿ ಜೋಡಣೆ: ಘಟಪ್ರಭಾ ಮತ್ತು ಮಲಪ್ರಭಾ ನದಿಗಳು ಬೆಳಗಾವಿ, ಬಾಗಲಕೋಟೆ, ಧಾರವಾಡ ಮತ್ತು ಗದಗ ಜಿಲ್ಲೆಗಳ ಜನರ ಜೀವನಾಡಿಗಳಾಗಿವೆ. ಆದರೆ ಈ ನದಿಗಳು ಹಾಗೂ ಇದರ ಜಲಾಶಯಗಳು ನೀರಿನ ಕೊರತೆ ಅನುಭವಿಸುತ್ತಿವೆ. ಹೀಗಾಗಿ ಈ ಭಾಗದಲ್ಲಿ ಅಂತರ್ಜಲ ಪ್ರಮಾಣವು ದಾಖಲೆಯ ಪ್ರಮಾಣದಲ್ಲಿ ಇಳಿಮುಖವಾಗಿದೆ. ಈ ನಾಲ್ಕು ಜಿಲ್ಲೆಗಳ ಅನುಕೂಲತೆ ಯಿಂದ ಸಮಗ್ರ ಕುಡಿಯುವ ನೀರಿಗಾಗಿ ಹಾಗೂ ಈ ಭಾಗದ ಕೆರೆಗಳ ಪುನಶ್ಚೇತನಕ್ಕಾಗಿ, ಪಕ್ಕದ ಉತ್ತರಕನ್ನಡ ಜಿಲ್ಲೆಯಲ್ಲಿ ಹರಿಯುವ ಕಾಳಿ ನದಿಯ 25 ಟಿಎಂಸಿ ಅಡಿ ನೀರನ್ನು ಸೂಪಾ ಜಲಾಶಯದಿಂದ ಏತ ನೀರಾವರಿ ಮೂಲಕ ಘಟಪ್ರಭಾ ಮತ್ತು ಮಲಪ್ರಭಾ ನದಿಗಳಿಗೆ ಹರಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಮಾಜಿ ಸಚಿವ ಮುರುಗೇಶ ನಿರಾಣಿಯವರ ಮಾರ್ಗದರ್ಶನದಲ್ಲಿ ನಿರಾಣಿ ಸಮಗ್ರ ನೀರಾವರಿ ವರದಿಯ ಮೂಲಕ ಪರಿಚಯಿಸಿದ್ದೇವೆ. ಈ ಕುರಿತು ಯೋಜನಾ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ಯೋಜನೆಯನ್ನು ರಾಷ್ಟ್ರೀಯ ನದಿ ಜೋಡಣೆಯ ಇಂಟ್ರಾ ಲಿಂಕಿಂಗ್ ರಿವರ್ ಅಡಿಯಲ್ಲಿ ತೆಗೆದುಕೊಳ್ಳಬಹುದು.
ಬಸವಧಾರೆ: ಕೃಷ್ಣ-ಘಟಪ್ರಭಾ-ಮಲಪ್ರಭಾ ನದಿ ಜೋಡಣೆ: ಪ್ರತಿ ವರ್ಷ ಕರ್ನಾಟಕದಲ್ಲಿ ಮಳೆಯಾಗಲಿ ಅಥವಾ ಬಿಡಲಿ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಬೀಳುವ ಉತ್ತಮ ಮಳೆಯಿಂದಾಗಿ ಪ್ರತಿವರ್ಷ ಕೃಷ್ಣೆಗೆ ನೀರು ಯತೇತ್ಛವಾಗಿ ಹರಿದುಬರುತ್ತದೆ. ಹೀಗೆ ಮಳೆಗಾಲದಲ್ಲಿ ದೊರೆಯುವ ನೀರನ್ನು ರಾಯಬಾಗ ತಾಲೂಕಿನಿಂದ 40 ಕಿ.ಮೀ ದೂರದಲ್ಲಿರುವ ಹಿಡಕಲ್ ಜಲಾಶಯಕ್ಕೆ ಏತ ನೀರಾವರಿ ಮೂಲಕ ಒಂದೇ ಹಂತದ ಲಿಫ್ಟಿಂಗ್ ಮೂಲಕ ಕೃಷ್ಣಾ ನದಿಯ ನೀರನ್ನು ಘಟಪ್ರಭೆಗೆ ಸೇರಿಸಬಹುದು. ಅಲ್ಲಿಂದ ಇಳಿಜಾರು ಕಾಲುವೆಯ ಮುಖಾಂತರ 60 ಕಿ.ಮೀ ದೂರದಲ್ಲಿರುವ ಮಲಪ್ರಭಾ ನದಿಗೆ ಸೇರಿಸಿದರೆ ಆ ನೀರು ನವಿಲುತೀರ್ಥ ಜಲಾಶಯದಲ್ಲಿ ಸಂಗ್ರಹಣೆಯಾಗುತ್ತದೆ. ಆ ಮೂಲಕ ಕೃಷ್ಣಾ ನದಿಯ ನೀರನ್ನು ಘಟಪ್ರಭಾ ಹಾಗೂ ಮಲಪ್ರಭಾ ನದಿ ಪಾತ್ರದ ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ ಜಿಲ್ಲೆಗಳಲ್ಲಿ ಕೃಷಿಗಾಗಿ ಬಳಸಿಕೊಳ್ಳಬಹುದು.
ಆಲಮಟ್ಟಿ ಜಲಾಶಯದಿಂದಾಗಿ ಬಾಗಲಕೋಟ ಜಿಲ್ಲೆಯ ಅತಿಹೆಚ್ಚು ಭೂಪ್ರದೇಶ ಬಾಧಿತಗೊಂಡಿದೆ. ಅಷ್ಟು ದೊಡ್ಡ ಪ್ರಮಾಣದ ನೀರಾವರಿ ಜಮೀನುಗಳನ್ನು ಕಳೆದುಕೊಂಡ ನಮ್ಮ ಜಿಲ್ಲೆಯ ಒಣ ಬೇಸಾಯ ಭೂಮಿಗಳನ್ನು ಪರ್ಯಾಯವಾಗಿ ನೀರಾವರಿಗೆ ಒಳಪಡಿಸುವುದು ಸರ್ಕಾರದ ಮೊದಲ ಜವಾಬ್ದಾರಿಯಾಗಿದೆ. ಕೃಷ್ಣೆಯ ನೀರನ್ನು ಘಟಪ್ರಭಾ ಮಲಪ್ರಭಾ ನದಿಗಳಿಗೆ ಹರಿಸಿದರೆ ಈ ನದಿಗಳು ಹಾಗೂ ಇವುಗಳ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳು ನಮ್ಮ ಜಿಲ್ಲೆಯಲ್ಲಿ ಹರಿಯುವುದರಿಂದ ಜಿಲ್ಲೆಯಲ್ಲಿ ಸಂಪೂರ್ಣ ನೀರಾವರಿ ಸಾಧಿಸಲು ಸಾಧ್ಯವಾಗುತ್ತದೆ.
ಜಾರಿಗೊಳ್ಳಬೇಕಾದ ಯೋಜನೆಗಳು: ಪಶ್ಚಿಮಾಭಿಮುಖೀ ನದಿ ಕಣಿವೆಯಲ್ಲಿರುವ ಕಾಳಿ, ಶರಾವತಿ, ನೇತ್ರಾವತಿ, ಸೀತಾನದಿ, ಕುಮಾರಧಾರಾ ಹಾಗೂ ಅವುಗಳ ಉಪನದಿಗಳಲ್ಲಿ ನೀರಿನ ವಾರ್ಷಿಕ ಲಭ್ಯತೆ ಸರಾಸರಿ 2000 ಟಿಎಂಸಿ ಅಡಿ ಅಷ್ಟಿದೆ. ಆದರೆ ಇದೆಲ್ಲವೂ ಸ್ಥಳೀಯ ಕುಡಿಯುವ ನೀರು, ವಿದ್ಯುತ್ ಬಿಟ್ಟರೆ ಇದರಲ್ಲಿಯ ಗರಿಷ್ಟ ಪ್ರಮಾಣದ ನೀರು ಕೃಷಿಗೆ ಬಳಕೆಯಾಗದೇ ಸಮುದ್ರ ಸೇರುತ್ತಿದೆ.ಜೈವಿಕ ಅರಣ್ಯಕ್ಕೆ ಹಾನಿಯಾಗುತ್ತದೆ ಎಂಬ ಕೂಗು ಹಾಗೂ ಸ್ಥಳೀಯ ಆಕ್ಷೇಪದ ಕಾರಣದಿಂದಾಗಿ ಈ ನೀರನ್ನು ಸದ್ಯ ಬಳಸಲಾ ಗುತ್ತಿಲ್ಲ. ಅಲ್ಲಿನ ಜನರ ಮನವೊಲಿಸಿ, ಪಶ್ಚಿಮಾ ಭಿಮುಖವಾಗಿ ಹರಿಯುವ ನದಿಗಳನ್ನು ಪೂರ್ವಾಭಿಮುಖವಾಗಿ ಹರಿಸಿದರೆ ಸುಮಾರು 200-300 ಟಿಎಂಸಿ ಅಡಿ ನೀರನ್ನು ಬಯಲು ಸೀಮೆಗೆ ಹಾಗೂ ನೀರಿನ ಬೇಡಿಕೆ ಇರುವ ಜಿಲ್ಲೆಗಳಿಗೆ ಹರಿಸಬಹುದು. ಸರ್ಕಾರ ಪೆನಿನ್ಸೂಲಾರ್ ನದಿ ಅಭಿವೃದ್ಧಿ ಯೋಜನೆಯನ್ನು ರೂಪಿಸಿದೆ. ಕರ್ನಾಟಕದ ಬೇಡಿಕೆಯನ್ನು ಮನ್ನಿಸಿರುವ ಕೇಂದ್ರ ಸರ್ಕಾರ 150 ಟಿಎಂಸಿ ಅಡಿ ನೀರನ್ನು ಹಂಚಿಕೆ ಮಾಡಲು ಒಪ್ಪಿಕೊಂಡಿದೆ. ಯೋಜನೆ ಅನುಷ್ಠಾನವಾದರೆ ಹೆಚ್ಚುವರಿ ನೀರು ರಾಜ್ಯಕ್ಕೆ ಲಭ್ಯವಾಗಲಿದೆ. ಮಹಾದಾಯಿ ನ್ಯಾಯಮಂಡಳಿ ಮುಂದಿರುವ ಜಲವ್ಯಾಜ್ಯಇತ್ಯರ್ಥವಾದರೆ 36.558 ಟಿಎಂಸಿ ಅಡಿ ನೀರು ರಾಜ್ಯಕ್ಕೆ ದೊರೆಯಲಿದೆ. ಎತ್ತಿನಹೊಳೆ ಯೋಜನೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿದರೆ 24 ಟಿಎಂಸಿ ಅಡಿ ನೀರು ಬಯಲುಸೀಮೆ ಜಿಲ್ಲೆಗಳಿಗೆ ಹರಿಯುತ್ತದೆ. ಗೋದಾವರಿ ಕಣಿವೆಯಲ್ಲಿರುವ ಹೆಚ್ಚುವರಿ ನೀರನ್ನು ಕೃಷ್ಣಾಕೊಳ್ಳದ ಭಾಗೀದಾರ ರಾಜ್ಯಗಳಿಗೆ ಮರು ಹಂಚಿಕೆ ಮಾಡಿದರೆ 30 ಟಿಎಂಸಿ ಹೆಚ್ಚುವರಿ ನೀರು ಕೃಷ್ಣಾನದಿ ಮೂಲಕ ಕರ್ನಾಟಕಕ್ಕೆ ಸಿಗುತ್ತದೆ.
ರಾಜ್ಯದಲ್ಲಿ ಜಲಾನಯನ ಪ್ರದೇಶಾಭಿವೃದ್ಧಿ ಹಾಗೂ ಮತ್ತು ಮಳೆ ನೀರುಕೊಯ್ಲು ಸಮರ್ಪಕವಾಗಿ ಅನುಷ್ಠಾನವಾದರೆ 182 ಟಿಎಂಸಿ ನೀರು ಅಂತರ್ಜಲ ರೂಪದಲ್ಲಿ ಬಳಕೆಗೆ ದೊರೆಯಲಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜಲಸಂಪನ್ಮೂಲ ಇಲಾಖೆ ದೂರ ದೃ ಷ್ಟಿಯ ಯೋಜನೆಗಳನ್ನು ರೂಪಿಸಿದರೆ ಮುಂಬರುವ ದಿನಮಾನಗಳಲ್ಲಿ ಈ ಎಲ್ಲ ಮೂಲ ಗಳಿಂದ 547 ಟಿಎಂಸಿ ಅಡಿ ನೀರು ರಾಜ್ಯದ ವಿವಿಧ ಜಿಲ್ಲೆಗಳಿಗೆ ಸಿಗಲಿದೆ. ರಾಷ್ಟ್ರೀಯ ನದಿ ಜೋಡಣೆ ಯೋಜನೆಯಲ್ಲಿ ರಾಜ್ಯ ಸರ್ಕಾರವು ಕೇಂದ್ರದೊಂದಿಗೆ ಸಮನ್ವಯತೆಯೊಂದಿಗೆ ಕಾರ್ಯ ನಿರ್ವಹಿಸಬೇಕು. ರಾಜ್ಯಕ್ಕೆ ದೊರೆಯುವ ಒಂದು ಹನಿ ನೀರು ವ್ಯರ್ಥವಾಗಬಾರದು. ಹನಿ ನೀರಿನ ಮಹತ್ವ ನಮಗೆ ಚೆನ್ನಾಗಿ ಗೊತ್ತಿದೆ. ಏಕೆಂದರೆ ಎಷ್ಟೇ ಆದರೂ ನಾವು ಬಯಲುಸೀಮೆಯವರಲ್ಲವೇ? ನಮಗೆ ನೀರಿನ ಅಭಾವದ ಅನುಭವವಿದೆ. ಜಲ್ ಹೈ ತೋಕಲ್ ಹೈ! (ನೀರಿದ್ದರೆ ನಾಳೆ) ಸಂಗಮೇಶ ಆರ್. ನಿರಾಣಿ