Advertisement

‘ವಿಜ್ಞಾನಿಗಳಾಗಲು ಅಟಲ್‌ ಲ್ಯಾಬ್‌ ಪೂರಕ’

11:42 AM Sep 23, 2018 | Team Udayavani |

ಬೆಳ್ತಂಗಡಿ: ಮಕ್ಕಳಿಗೆ ಎಳವೆಯಿಂದಲೇ ತಾಂತ್ರಿಕ ಜ್ಞಾನದೊಂದಿಗೆ ಬೆಳೆಸುವ ಪ್ರಯತ್ನ ಮಾಡಿದಾಗ ಮುಂದೆ ಅವರು ಪ್ರಸಿದ್ಧ ವಿಜ್ಞಾನಿಗಳಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರ ಕಲ್ಪನೆಯ ಅಟಲ್‌ ಟಿಂಕ ರಿಂಗ್‌ ಲ್ಯಾಬ್‌ ಪೂರಕವಾಗಿ ಕೆಲಸ ಮಾಡಲಿದೆ ಎಂದು ಶಾಸಕ ಹರೀಶ್‌ ಪೂಂಜ ಅವರು ಹೇಳಿದರು. ಅವರು ಶನಿವಾರ ಇಲ್ಲಿನ ವಾಣಿ ಪ.ಪೂ. ಕಾಲೇಜಿನಲ್ಲಿ ಕೇಂದ್ರ ಸರಕಾರ ಪ್ರಾಯೋಜಿತ ಅಟಲ್‌ ಟಿಂಕರಿಂಗ್‌ ಲ್ಯಾಬ್‌ ಅನ್ನು ಉದ್ಘಾಟಿಸಿ ಮಾತನಾಡಿದರು.

Advertisement

ಉತ್ತಮ ಕಾರ್ಯ ನಿರ್ವಹಿಸುತ್ತಿರುವ ವಾಣಿ ಸಂಸ್ಥೆಗೆ ಅರ್ಹವಾಗಿ ಈ ಲ್ಯಾಬ್‌ ಲಭಿಸಿದ್ದು, ಪ್ರಧಾನಿ ಅವರ ಕಲ್ಪನೆಯನ್ನು ಈಡೇರಿಸುವ ನಿಟ್ಟಿನಲ್ಲಿ ಸಂಸ್ಥೆ ಕಾರ್ಯನಿರ್ವಹಿಸುವ ವಿಶ್ವಾಸವಿದೆ ಎಂದ ಅವರು, ತನ್ನ ನಿಧಿಯಿಂದ ಸಂಸ್ಥೆಯ ಅಭಿವೃದ್ಧಿಗೆ ಅನುದಾನದ ಭರವಸೆ ನೀಡಿದರು. ಸಂಸ್ಥೆಯ ವೆಬ್‌ಸೈಟನ್ನು ಅನಾವರಣಗೊಳಿಸಿದ ವಿಧಾನ ಪರಿಷತ್‌ ಸದಸ್ಯ ಕೆ. ಹರೀಶ್‌ಕುಮಾರ್‌ ಮಾತನಾಡಿದರು.

ಅಕ್ಷರವಾಣಿ ಬಿಡುಗಡೆ
ಸಂಸ್ಥೆಯ ವಾರ್ಷಿಕ ಸಂಚಿಕೆ ಅಕ್ಷರವಾಣಿಯನ್ನು ಉದ್ಯಮಿ ವಿಜಯಕುಮಾರ್‌ ಬಿಡುಗಡೆಗೊಳಿಸಿದರು. ಕೆ. ಹರೀಶ್‌ ಕುಮಾರ್‌ ಅವರನ್ನು ಸಮ್ಮಾನಿಸಲಾಯಿತು. ವಾಣಿ ಸಂಸ್ಥೆಯ ವಿದ್ಯಾರ್ಥಿಗಳು ತಯಾರಿಸಿದ 6 ವಿಧಗಳ ತಾಂತ್ರಿಕ ಮಾದರಿಗಳನ್ನು ಪ್ರದರ್ಶಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಸೋಮೇಗೌಡ, ಗೌರವಾಧ್ಯಕ್ಷ ಎಚ್‌. ಪದ್ಮ ಗೌಡ, ಮಾಜಿ ಅಧ್ಯಕ್ಷ ಕುಶಾಲಪ್ಪ ಗೌಡ, ಕಾರ್ಯದರ್ಶಿ ಮೋಹನ್‌ ಗೌಡ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ನಾರಾಯಣ ಗೌಡ, ಮುಖ್ಯ ಶಿಕ್ಷಕ ಲಕ್ಷ್ಮೀನಾರಾಯಣ, ಉಪಾಧ್ಯಕ್ಷ ನಾರಾಯಣ ಗೌಡ ದೇವಸ್ಯ, ಜತೆ ಕಾರ್ಯದರ್ಶಿ ಗಣೇಶ್‌ ಗೌಡ, ಕೋಶಾಧಿಕಾರಿ ರಾಜೀವ ಗೌಡ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಚೇತನ್‌ಕುಮಾರ್‌, ಯುವ ವೇದಿಕೆ ಅಧ್ಯಕ್ಷ ಜಯಾನಂದ ಗೌಡ ಉಪಸ್ಥಿತರಿದ್ದರು. ಪ್ರಾಂಶುಪಾಲ ಡಿ. ಯದುಪತಿ ಗೌಡ ಸ್ವಾಗತಿಸಿ, ಉಪಪ್ರಾಂಶುಪಾಲ ವಿಷ್ಣುಪ್ರಕಾಶ್‌ ವಂದಿಸಿದರು. ಗುಣಶ್ರೀ ನಿರೂಪಿಸಿದರು.

ಆರಂಭದಲ್ಲಿ 12 ಲಕ್ಷ ರೂ. ಅನುದಾನ
ಮಕ್ಕಳಲ್ಲಿರುವ ತಾಂತ್ರಿಕ ಆಲೋಚನೆಗಳನ್ನು ಹೊರತೆಗೆಯುವ ನಿಟ್ಟಿನಲ್ಲಿ ಈ ಲ್ಯಾಬ್‌ಗಳು ಕೆಲಸ ಮಾಡಲಿದ್ದು, ಕೇಂದ್ರ ಸರಕಾರವು ಆರಂಭದಲ್ಲಿ ಇದಕ್ಕೆ 12 ಲಕ್ಷ ರೂ. ಅನುದಾನ ನೀಡುತ್ತದೆ. ಅದರಲ್ಲಿ 10 ಲಕ್ಷ ರೂ. ಅನುಷ್ಠಾನ, 2 ಲಕ್ಷ ರೂ. ನಿರ್ವಹಣೆ ವೆಚ್ಚವಾಗಿರುತ್ತದೆ. 5 ವರ್ಷಗಳವರೆಗೆ ಪ್ರತಿ ವರ್ಷ ತಲಾ 2 ಲಕ್ಷ ರೂ.ಗಳನ್ನು ನಿರ್ವಹಣೆಗೆ ನೀಡಲಾಗುತ್ತದೆ. ಚೆನ್ನೈಯ ಸಂಸ್ಥೆ ಲ್ಯಾಬ್‌ ಅನುಷ್ಠಾನದ ಕಾರ್ಯ ನಿರ್ವಹಿಸಲಿದ್ದು, 6ರಿಂದ ಪಿಯುಸಿ ವರೆಗಿನ ಮಕ್ಕಳಿಗೆ ಇದು ಪೂರಕವಾಗಲಿದೆ. ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ತಾನು ಈಗಾಗಲೇ ಒಟ್ಟು 30 ಲ್ಯಾಬ್‌ ಗಳನ್ನು ಅನುಷ್ಠಾನಗೊಳಿಸಿದ್ದು, ಅದರಲ್ಲಿ 11 ಅಟಲ್‌ ಟಿಂಕರಿಂಗ್‌ ಲ್ಯಾಬ್‌ಗಳಿವೆ. ರೋಬೊಟಿಕ್‌, ಐಒಟಿ ಸೆನ್ಸಾರ್‌ ಹೀಗೆ ವಿವಿಧ ಬಗೆಯ ತಂತ್ರಜ್ಞಾನಗಳನ್ನು ಈ ಲ್ಯಾಬ್‌ ಒಳಗೊಂಡಿರುತ್ತದೆ ಎಂದು ಚೆನ್ನೈಯ ರಾಜಗೋಪಾಲನ್‌ ವಿವರಿಸಿದರು.

Advertisement

ಲ್ಯಾಬ್‌ ನೆರವಾಗಲಿದೆ
ಗ್ರಾಮೀಣ ವಿದ್ಯಾರ್ಥಿಗಳು ಸಂಶೋಧನಾತ್ಮಕವಾಗಿ ಕೆಲಸ ಮಾಡುವುದಕ್ಕೆ ಲ್ಯಾಬ್‌ ನೆರವಾಗಲಿದೆ. ವಾಣಿ ಸಂಸ್ಥೆ ಉತ್ತಮ ಶೈಕ್ಷಣಿಕ ಸಂಸ್ಥೆಯಾಗಿ ಬೆಳೆಯುತ್ತಿದ್ದು, ಇದರ ಅಭಿವೃದ್ಧಿಗೆ ತನ್ನ ನಿಧಿಯಿಂದ 3 ಲಕ್ಷ ರೂ. ಅನುದಾನ ನೀಡುವೆ.
– ಕೆ. ಹರೀಶ್‌ಕುಮಾರ್‌
ವಿಧಾನ ಪರಿಷತ್‌ ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next