ಹೃದಯ, ಕಿಡ್ನಿ ಸೇರಿದಂತೆ ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಚಿಕಿತ್ಸೆ ಫಲಕಾರಿಯಾಗದೆ ಸಂಜೆ 5.05ಕ್ಕೆ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿರುವುದಾಗಿ ಅಧಿಕೃತ ಪ್ರಕಟಣೆ ತಿಳಿಸಿದೆ. ಜೂನ್ 11ರಂದು ವಾಜಪೇಯಿ ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪೋಖ್ರಾನ್ ಅಣ್ವಸ್ತ್ರ ಪರೀಕ್ಷೆ ನಡೆಸಿ ಜಗತ್ತಿನ ಹುಬ್ಬೇರಿಸುವಂತೆ ಮಾಡಿದ್ದ ವಾಜಪೇಯಿ ಅವರು ಮೂರು ಬಾರಿ ಪ್ರಧಾನಿ ಗದ್ದುಗೆ ಏರಿದ್ದರು. ಸುಮಾರು 4 ದಶಕಗಳ ಕಾಲ ಸಂಸದರಾಗಿ, 2 ಬಾರಿ ರಾಜ್ಯಸಭಾ ಸದಸ್ಯರಾಗಿ ರಾಜನೀತಿಯಲ್ಲಿ ಕಳಂಕರಹಿತ ವ್ಯಕ್ತಿಯಾಗಿ ಹೊರಹೊಮ್ಮಿದ್ದರು. ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೇನಾಪಡೆ ಆಪರೇಶನ್ ವಿಜಯ್ ಮೂಲಕ ಪಾಕ್ ಸೈನಿಕರನ್ನು ಬಗ್ಗುಬಡಿದು ವಿಜಯಪತಾಕೆ ಹಾರಿಸಿತ್ತು..ಈ ಯುದ್ಧ ಪ್ರಧಾನಿಯಾಗಿದ್ದ ವಾಜಪೇಯಿ ಅವರ ವ್ಯಕ್ತಿತ್ವ ಮತ್ತಷ್ಟು ಎತ್ತರಕ್ಕೆ ಏರಿಸುವಂತೆ ಮಾಡಿತ್ತು. ಹೀಗೆ ರಾಜಕಾರಣಿಯಾಗಿ, ಕವಿಯಾಗಿ, ಶ್ರೇಷ್ಠ ವಾಗ್ಮಿಯಾಗಿ, ಪತ್ರಕರ್ತರಾಗಿದ್ದ ವಾಜಪೇಯಿ ಅವರ ನಿಧನದಿಂದ ರಾಷ್ಟ್ರರಾಜಕಾರಣದ ಮತ್ತೊಂದು ಮಹತ್ವದ ಕೊಂಡಿ ಕಳಚಿದಂತಾಗಿದೆ.