Advertisement
ಬೆಲರೂಸ್‌ನ ವಿಕ್ಟೋರಿಯಾ ಅಜರೆಂಕಾ 4 ವರ್ಷಗಳ ಬಳಿಕ ಮೊದಲ ಗ್ರ್ಯಾನ್‌ಸ್ಲಾಮ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸಾಧನೆಗೈದರು. ಜೆಕ್ ಆಟಗಾರ್ತಿ ಕ್ಯಾರೋಲಿನಾ ಮುಶೋವಾ ಆಟವನ್ನು ಅವರು 5-7, 6-1, 6-4ರಿಂದ ಕೊನೆಗಾಣಿಸಿದರು. ಮಾಜಿ ನಂ.1 ಆಟಗಾರ್ತಿ ಅಜರೆಂಕಾ ಅವರಿನ್ನು ಬೆಲ್ಜಿಯಂನ ಎಲಿಸ್ ಮಾರ್ಟೆನ್ಸ್ ವಿರುದ್ಧ ಸೆಣಸಲಿದ್ದಾರೆ. ಇನ್ನೊಂದು ಪಂದ್ಯದಲ್ಲಿ ತವರಿನ ಆಟಗಾರ್ತಿ, ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಸೋಫಿಯಾ ಕೆನಿನ್ ಅವರನ್ನು ಮಾರ್ಟೆನ್ಸ್ ಮನೆಗೆ ಕಳುಹಿಸಿದರು. ಮಾರ್ಟೆನ್ಸ್ ಗೆಲುವಿನ ಅಂತರ 6-3, 6-3. 2016ರ ಆಸ್ಟ್ರೇಲಿಯನ್ ಓಪನ್ ಕ್ವಾರ್ಟರ್ ಫೈನಲ್‌ನಲ್ಲಿ ಆ್ಯಂಜೆಲಿಕ್ ಕೆರ್ಬರ್ ಅವರಿಗೆ ಶರಣಾದ ಬಳಿಕ ಅಜರೆಂಕಾ ಮೊದಲ ಸಲ ಈ ಹಂತದಲ್ಲಿ ಅದೃಷ್ಟಪರೀಕ್ಷೆ ಎದುರಿಸುತ್ತಿದ್ದಾರೆ.
ಯಾವುದೇ ಶ್ರೇಯಾಂಕ ಹೊಂದಿಲ್ಲದ ಬಲ್ಗೇರಿಯಾದ ಸ್ವೆತಾನಾ ಪಿರೊಂಕೋವಾ 3 ಗಂಟೆಗಳ ಕಠಿನ ಕಾದಾಟದ ಬಳಿಕ ಫ್ರಾನ್ಸ್‌ನ ಎಲೈಜ್ ಕಾರ್ನೆಟ್ ಅವರನ್ನು 6-4, 6-7 (5-7), 6-3 ಅಂತರದಿಂದ ಮಣಿಸುವಲ್ಲಿ ಯಶಸ್ವಿಯಾದರು. ತಮ್ಮ ಈ ಗೆಲುವನ್ನು ಅವರು 2 ವರ್ಷದ ಮಗ ಅಲೆಕ್ಸಾಂಡರ್‌ಗೆ ಅರ್ಪಿಸಿದರು. ಗೆಲುವಿನ ಬಳಿಕ ಅವರು ಆನಂದಬಾಷ್ಪ ಸುರಿಸುತ್ತ ಮಗನನ್ನು ಅಪ್ಪಿಕೊಂಡ ದೃಶ್ಯ ಎಲ್ಲರ ಗಮನ ಸೆಳೆಯಿತು. ಕೂಟದ ಮತ್ತೋರ್ವ ಅಮ್ಮ ಸೆರೆನಾ ವಿಲಿಯಮ್ಸ್ ಗ್ರೀಸ್‌ನ ಮರಿಯಾ ಸಕ್ಕರಿ ವಿರುದ್ಧ 3 ಸೆಟ್‌ಗಳ ಹೋರಾಟ ನಡೆಸಿ 6-3, 6-7 (6-8), 6-3 ಅಂತರದಿಂದ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು. ಬುಧವಾರ ರಾತ್ರಿಯ ಕ್ವಾರ್ಟರ್ ಫೈನಲ್‌ನಲ್ಲಿ ಸೆರೆನಾ-ಪಿರೊಂಕೋವಾ ಮುಖಾಮುಖೀ ಆಗಲಿದ್ದಾರೆ. ಪಂದ್ಯದ ವೇಳೆ ಸೆರೆನಾ ಪುತ್ರಿ ಕೂಡ ಸ್ಟೇಡಿಯಂನಲ್ಲಿ ಸಂಬಂಧಿಕರೊಂದಿಗೆ ಕಂಡುಬಂದಳು.