Advertisement

ವರ್ಷಾಂತ್ಯಕ್ಕೆ ಭದ್ರಾ ಮೇಲ್ದಂಡೆ ಕಾಮಗಾರಿ ಪೂರ್ಣ

03:05 PM Sep 28, 2018 | |

ತರೀಕೆರೆ/ ಅಜ್ಜಂಪುರ: ಹಲವು ವರ್ಷಗಳಿಂದ ಬಯಲು ಸೀಮೆಯ ರೈತರು ನಿರೀಕ್ಷಿಸುತ್ತಿರುವ ಭದ್ರಾ ಮೇಲ್ದಂಡೆ ಯೋಜನೆ, ಈ ವರ್ಷಾಂತ್ಯಕ್ಕೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಕಾರ್ಯರಾಂಭವಾಗುವ ವಿಶ್ವಾಸವಿದೆ ಎಂದು ಚಿತ್ರದುರ್ಗ ಮರುಘಾ ಮಠದ ಡಾ| ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.

Advertisement

ಅವರು ಗುರುವಾರ ಭದ್ರಾ ಮೇಲ್ದಂಡೆ ಕಾಮಗಾರಿ ವೀಕ್ಷಣೆ ಮಾಡಿದ ಬಳಿಕ ಪಟ್ಟಣದ ಎಸ್‌ಜೆಎಂ ಕಾಲೇಜಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಚಿತ್ರದುರ್ಗದಲ್ಲಿ ನಡೆಸಲು ಉದ್ದೇಶಿಸಿರುವ ಶರಣ ಸಂಸ್ಕೃತಿ ಮತ್ತು ಕೃಷಿ ಮೇಳದ ಹಿನ್ನೆಲೆಯಲ್ಲಿ ರೈತರ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ರೈತರು ಭದ್ರಾ ಮೇಲ್ದಂಡೆ ಯೋಜನೆ ಅವೈಜ್ಞಾನಿಕವಾಗಿದ್ದು ಭದ್ರೆಯ ನೀರು ಹರಿದು ಬರುವು ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಈ ಕಾರಣದಿಂದ ರೈತರ ಸಂದೇಹ ನಿವಾರಣೆಗಾಗಿ ರೈತರ ಜೊತೆಗೆ ಚಿತ್ರದುರ್ಗದಿಂದ ಶಿವಮೊಗ್ಗದ ಗಾಜನೂರು ಜಲಾಶಯದ ತನಕ ಭೇಟಿ ನೀಡಿದ್ದೇವೆ ಎಂದರು.

ಭದ್ರಾ ಮೇಲ್ದಂಡೆ ಯೋಜನೆ ಆರಂಭವಾದಾಗ ಹಲವಾರು ಅಡೆತಡೆಗಳು ಇದ್ದವು. ಈಗ ಅವುಗಳ ನಿವಾರಣೆಯಾಗಿದೆ,
ರೈತರ ಅನುಮಾನಗಳನ್ನು ನಿವಾರಣೆ ಮಾಡುವ ಸಲುವಾಗಿ ರೈತರನ್ನು ಕಾಮಗಾರಿ ಪ್ರಾರಂಭವಾದ ಸ್ಥಳದಿಂದ ಮುಕ್ತಾಯಗೊಳ್ಳುವ ಸ್ಥಳದವರೆಗೂ ಕರೆತಂದು ತೋರಿಸಲಾಗಿದೆ. ಕಾಮಗಾರಿ ಪ್ರಗತಿಯನ್ನು ಕಣ್ಣಾರೆ ಕಂಡಿರುವ ರೈತರಲ್ಲಿ ವಿಶ್ವಾಸ ಮೂಡಿದೆ ಎಂದು ಹೇಳಿದರು.

ಭದ್ರಾ ಮೇಲ್ದಂಡೆ ನಾಲೆಯ ಮೂಲಕ ವಾಣಿವಿಲಾಸ ಸಾಗರಕ್ಕೆ ನೀರು ಹರಿಯಲಿದೆ ಅಲ್ಲಿಂದ ಹೊಸದುರ್ಗ ಮತ್ತು ಹೊಳಲ್ಕೆರೆಗೆ ಮತ್ತು ಪಾವಗಡ, ಮೊಳಕಾಲ್ಮೂರು ಹಾಗೂ ಚಿತ್ರದುರ್ಗ ತಾಲೂಕಿನ ಹಲವು ಭಾಗಗಳಿಗೆ ಪೈಪ್‌ಲೈನ್‌ ಮೂಲಕ ನೀರು ಹರಿಸಲಾಗುತ್ತದೆ ಎಂದು ಹೇಳಿದರು. 

ವಿಶ್ವೇಶ್ವರಯ್ಯ ಜಲ ನಿಗಮದ ಕಾರ್ಯನಿರ್ವಾಹಕ ಅಭಿಯಂತರ ಬಸವರಾಜ್‌ ಸಂಶಿಮಠ ಮಾತನಾಡಿ, ಯೋಜನೆಗೆ ಅಗತ್ಯವಿರುವ ವಿದ್ಯುತ್‌ ಶಕ್ತಿ ಒದಗಿಸುವ ಸಲುವಾಗಿ ಕೆಪಿಟಿಸಿಎಲ್‌ ಒಡನೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಯೋಜನೆಗೆ 220ಕೆ.ವಿ. ಮೆಗಾವ್ಯಾಟ್‌
ವಿದ್ಯುತ್‌ ಅಗತ್ಯವಿದೆ. ಏತ ನೀರಾವರಿ ಮೂಲಕ ನೀರು ಹರಿಯುವುದರಿಂದ 18,400 ಎಚ್‌.ಪಿ ಮೋಟಾರ್‌ ಬಳಕೆ ಮಾಡಲಾಗುವುದು ಎಂದು ತಿಳಿಸಿದರು.

Advertisement

ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಶಾಸಕರಾದ ಡಿ.ಎಸ್‌.ಸುರೇಶ್‌, ಗೂಳಿಹಟ್ಟಿ ಶೇಖರ್‌, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಕೆ.ಆರ್‌.ಆನಂದಪ್ಪ, ಚಿತ್ರದುರ್ಗ ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಅನಂತ್‌, ಚೇತನಾಪ್ರಸಾದ್‌, ವಿಶಾಲಾಕ್ಷಿ ನಟರಾಜ್‌, ಮಮತಾ ಕುಮಾರಸ್ವಾಮಿ, ಪ್ರಾಚಾರ್ಯ ಡಾ| ಜಿ.ಇ.ವಿಜಯಕುಮಾರ್‌, ಬಿಜೆಪಿ ಮಂಡಲ ಅಧ್ಯಕ್ಷ ಎಸ್‌.ಬಿ.ಆನಂದಪ್ಪ, ಎಪಿಎಂಸಿ ನಿರ್ದೇಶಕ ಶ್ರೀಧರ್‌, ರೋಟರಿ ಮಾಜಿ ಅಧ್ಯಕ್ಷ ಗೋವರ್ಧನ್‌ ಇನ್ನಿತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next