ಪಾಣಿಪತ್ : ಅಗ್ನಿಪಥ್ ಯೋಜನೆ ಮತ್ತು ಜಿಎಸ್‌ಟಿ ಸೇರಿದಂತೆ ಹಲವು ವಿಷಯಗಳ ಕುರಿತು ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಎರಡು ಭಾರತಗಳಿವೆ ರೈತರು, ಕಾರ್ಮಿಕರು, ಸಣ್ಣ ಅಂಗಡಿಯವರು ಮತ್ತು ನಿರುದ್ಯೋಗಿ ಯುವಕರದ್ದು ಒಂದು ಮತ್ತು ದೇಶದ ಸಂಪತ್ತನ್ನು ಹೊಂದಿರುವ 200-300 ಜನರದ್ದು ಎರಡನೆಯದು ಎಂದು ಹೇಳಿದರು.
ಗಾಂಧಿ ನೇತೃತ್ವದ ಯಾತ್ರೆ ಗುರುವಾರ ಸಂಜೆ ಉತ್ತರ ಪ್ರದೇಶದಿಂದ ಪಾಣಿಪತ್ ಗೆ ತಲುಪಿತು. ರಾಜ್ಯದ ಹೆಚ್ಚಿನ ನಿರುದ್ಯೋಗ ದರದ ಬಗ್ಗೆ ಮಾಜಿ ಕಾಂಗ್ರೆಸ್ ಅಧ್ಯಕ್ಷರು ಬಿಜೆಪಿ ನೇತೃತ್ವದ ಹರಿಯಾಣ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
“21 ನೇ ಶತಮಾನದಲ್ಲಿ, ಹರಿಯಾಣ ನಿರುದ್ಯೋಗದಲ್ಲಿ ಚಾಂಪಿಯನ್ ಆಗಿದೆ, ನೀವು ಎಲ್ಲರನ್ನು ಹಿಂದೆ ಬಿಟ್ಟಿದ್ದೀರಿ” ಎಂದು ಗುಂಪಿನಲ್ಲಿದ್ದ ಯಾರೋ ಹೇಳಿದಾಗ ಗಾಂಧಿ , ರಾಜ್ಯದಲ್ಲಿ ನಿರುದ್ಯೋಗ ದರವು ಶೇಕಡಾ 38 ರಷ್ಟಿದೆ ಎಂದು ಹೇಳಿದರು.
ನೋಟು ಅಮಾನ್ಯೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ನೀತಿಗಳಲ್ಲ, ಆದರೆ ಸಣ್ಣ ಮತ್ತು ಮಧ್ಯಮ ವ್ಯವಹಾರಗಳನ್ನು ನಾಶಮಾಡುವ ಅಸ್ತ್ರಗಳಾಗಿವೆ ಎಂದು ಗಾಂಧಿ ಹೇಳಿದರು.
ಅಗ್ನಿಪಥ್ ಯೋಜನೆ ಕುರಿತು ಸರ್ಕಾರವನ್ನು ಗುರಿಯಾಗಿಸಿಕೊಂಡು, ”ಮೊದಲು ಅಗ್ನಿಪಥ್ ಯೋಜನೆ ಏನೆಂದು ನನಗೆ ಅರ್ಥ ಮಾಡಿಸಿ. ಬಿಜೆಪಿಯವರು ದೇಶಪ್ರೇಮಿಗಳು ಎಂದು ಹೇಳುತ್ತಾರೆ, ಅವರ ದೇಶಪ್ರೇಮವನ್ನು ನನಗೆ ಅರ್ಥಮಾಡಿಸಿ ಎಂದರು.