Advertisement

ಟರ್ನಿಂಗ್ ಪಾಯಿಂಟ್: ಒಂಬತ್ತರಲ್ಲಿ ಫೇಲಾದ ನೋವು ತೊಂಬತ್ತಕ್ಕೇ ಪ್ರೇರೇಪಿಸಿತು

09:59 AM Jan 26, 2020 | Sriram |

ಪ್ರತಿಯೊಬ್ಬರ ಜೀವನದಲ್ಲಿಯೂ ಟರ್ನಿಂಗ್‌ ಪಾಯಿಂಟ್‌ಗಳಿದ್ದೇ ಇರುತ್ತವೆ. ಯಾಕೆಂದರೆ ಪ್ರೇರಣೆ ಎಲ್ಲಿಂದಲೂ ಸಿಗಬಹುದು, ಬದಲಾವಣೆ ಎಲ್ಲಿಂದಲೂ ಆಗಬಹುದು, ಯಾವ ವಯಸ್ಸಿನಲ್ಲೂ ಆಗಬಹುದು. ನನ್ನ ಜೀವನವೂ ಅದಕ್ಕೆ ಹೊರತಾಗಿಲ್ಲ. ಬದುಕಿನ ಪುಟಗಳನ್ನು ತೆರೆದರೆ ಕಣ್ಣಂಚು ಒದ್ದೆಯಾಗುತ್ತದೆ. ಒಂದಷ್ಟು ಮುಖಗಳು ಎದುರಿಗೆ ಸಾಗಿ ಹೋಗುತ್ತವೆ. ಪ್ರಾಥಮಿಕ ಶಿಕ್ಷಣವನ್ನು ಊರಿನ ಶಾಲೆಯಲ್ಲೇ ಮುಗಿಸಿದೆ. ಬಳಿಕ 5ರಿಂದ 7ನೆ ತರಗತಿವರೆಗೆ 2 ಕಿ.ಮೀ. ದೂರ, ಹೈಸ್ಕೂಲ್‌ ವಿದ್ಯಾಭ್ಯಾಸಕ್ಕೆ 6 ಕಿ.ಮೀ. ದೂರ ನಡೆಯಬೇಕಿತ್ತು. ನಿತ್ಯ 12 ಕಿ.ಮೀ. ದೂರ ಕ್ರಮಿಸುತ್ತಿದ್ದೆ.

Advertisement

ಒಂಬತ್ತನೇ ತರಗತಿಯಲ್ಲಿ ಹಿಂದಿ ವಿಷಯದಲ್ಲಿ ಫೇಲಾದೆ. ಮೂರೇ ಅಂಕಗಳು ಕೊರತೆಯಾದವು. ನನ್ನ ಜತೆ ವಿಜ್ಞಾನ ವಿಷಯದಲ್ಲಿ ಫೇಲ್‌ ಆದ ಗೆಳೆಯನನ್ನು ಮುಂದಿನ ತರಗತಿಗೆ ಉತ್ತೀರ್ಣಗೊಳಿಸಲಾಗಿತ್ತು. ಆದರೆ ನನಗೆ ಅನುಮತಿ ಇರಲಿಲ್ಲ.

ಒಂಬತ್ತನೇ ತರಗತಿಯಲ್ಲೇ ಮತ್ತೆ ಓದಬೇಕಾ ಯಿತು. ಹಿಂದಿಯ ಜತೆಗೆ ಮತ್ತೆ ಎಲ್ಲ ವಿಷಯ ಗಳನ್ನು ಓದುವ ಸ್ಥಿತಿ. ನನ್ನನ್ನು ತೇರ್ಗಡೆಗೊಳಿಸು ವಂತೆ ಹಲವು ಬಾರಿ ಶಾಲಾ ಮುಖ್ಯಶಿಕ್ಷಕರಲ್ಲಿ ಬಿನ್ನವಿಸಿದ್ದೆ. ನಾನು “ನನ್ನ ಜತೆ ಫೇಲ್‌ ಆಗಿದ್ದವ ರನ್ನು ಉತ್ತೀರ್ಣಗೊಳಿಸ ಲಾಗಿದೆ, ನನ್ನನ್ನು ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ್ದೆ. ಆದರೆ ಬಳಿಕ ನೈಜ ವಿಷಯದ ಅರಿವಾಯಿತು. ವಿಜ್ಞಾನ ವಿಷಯದಲ್ಲಿ ಫೇಲಾದ ಸಹಪಾಠಿಯನ್ನು ವಿಜ್ಞಾನ ಶಿಕ್ಷಕರು ಔದಾರ್ಯ ತೋರಿ 10ನೇ ತರಗತಿಗೆ ತೇರ್ಗಡೆಗೊಳಿಸಿದ್ದರು. ಆದರೆ ನನ್ನನ್ನು ತೇರ್ಗಡೆ ಗೊಳಿಸಲು ಹಿಂದಿ ಶಿಕ್ಷಕರು ಒಪ್ಪಿರಲಿಲ್ಲ. ಈ ನೋವು ಆಕ್ರೋಶವಾಗಿ ಬದಲಾಗಿತ್ತು.

ಮತ್ತೆ ಅದೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದಾಗ ಉಳಿದ ಎಲ್ಲಾ ಶಿಕ್ಷಕರು ನನಗೆ ಬೇಸರ ಆಗದೆ ರೀತಿ ನೋಡಿಕೊಂಡು ಪ್ರೋತ್ಸಾಹಿಸಿದ್ದರು. ಆದರೆ ಹಿಂದಿ ಶಿಕ್ಷಕರು ಬಂದು ತರಗತಿಯಲ್ಲಿ ನನ್ನ ಹೆಸರೆತ್ತಿ “ನಿನಗೆ ನೂರಕ್ಕೆ 100 ಅಂಕ ತೆಗೆಯಬಹುದು, ಹಿಂದಿನ ಅನುಭವ ಉಂಟಲ್ಲಾ’ ಎಂದು ಛೇಡಿಸುತ್ತಿದ್ದರು ನಾನು ಅತ್ತು ಸುಮ್ಮನಾಗುತ್ತಿದ್ದೆ. ಆದರೆ ನಾನು ಛಲದಿಂದ ನಿಭಾಯಿಸಿ 9ನೇ ತರಗತಿಯಲ್ಲಿ ತರಗತಿಗೆ ದ್ವಿತೀಯನಾಗಿ ತೇರ್ಗಡೆ ಹೊಂದಿದೆ.10ನೇ ತರಗತಿಯಲ್ಲಿಯೂ ಪ್ರಥಮ ಶ್ರೇಣಿಯಲ್ಲಿ ಪಾಸಾದೆ. ಪಿಯುಸಿಯಲ್ಲೂ ಶೇ. 88 ಅಂಕ ಪಡೆದಿದ್ದೆ.

ಅನುತ್ತೀರ್ಣನಾದ ಆ ನೋವು ನನ್ನನ್ನು ಪಿಯು ದಿನಗಳ ವರೆಗೆ ಕಾಡಿತ್ತು. ಪಿಯು ಅಂಕ ಬಂದ ಬಳಿಕ ಅದು ಬೇಸರವನ್ನು ಮರೆಸಿತು. ಇದು ನನ್ನ ಜೀವನ ಪ್ರಮುಖ ತಿರುವು. ಕಠಿನ ಪರಿಶ್ರಮ, ಹಂಬಲ, ನನ್ನ ಸಾಮರ್ಥ್ಯ ಏನು ಎಂಬುದನ್ನು ತೋರಿಸಿಕೊಟ್ಟದ್ದು ಆ ಹಿಂದಿ ಶಿಕ್ಷಕರೇ. ನನ್ನ ನೈಜ ಸಾಮರ್ಥ್ಯ ತಿಳಿದುಕೊಳ್ಳಲು ಸಹಾಯ ಮಾಡಿದ್ದು ಸುಳ್ಳಲ್ಲ.

Advertisement

-  ರಘುರಾಂ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next