ವಾಷಿಂಗ್ಟನ್: ಅಮೆರಿಕದ ಉತ್ತರ ಕ್ಯಾಲಿಫೋರ್ನಿಯಾದ ಸುಮಾರು 80 ಸಾವಿರ ಎಕರೆ ಅರಣ್ಯ ಪ್ರದೇಶದಲ್ಲಿ ಹೊತ್ತಿಕೊಂಡ ಬೆಂಕಿಯಿಂದಾಗಿ ನೂರಾರು ಮನೆಗಳು ಭಸ್ಮವಾಗಿದ್ದು, ಸಾವಿರಾರು ಪ್ರಾಣಿಗಳು ಸಜೀವವಾಗಿ ದಹನವಾಗಿರುವ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ.
2,15,000 ಎಕರೆ ಕಾಡು ಪ್ರದೇಶಕ್ಕೆ ಕಾಳ್ಗಿಚ್ಚು ವ್ಯಾಪಿಸತೊಡಗಿದ್ದು, ಬೆಂಕಿಯ ಕೆನ್ನಾಲಗೆಗೆ 4,50 ಮನೆಗಳು ಭಸ್ಮವಾಗಿ ಹೋಗಿದೆ. ಮುಂಜಾಗ್ರತಾ ಕ್ರಮವಾಗಿ 62 ಸಾವಿರ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಅಲ್ಲದೇ ಒಂದು ಲಕ್ಷಕ್ಕೂ ಅಧಿಕ ಜನರಿಗೆ ಬೇರೆ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ.
ವಾಯುಪಡೆ ನೆಲೆಯನ್ನು ಸ್ಥಳಾಂತರಿಸಿದ್ದು, ಬೆಂಕಿ ದೊಡ್ಡ ಪ್ರಮಾಣದಲ್ಲಿ ಎಲ್ಲೆಡೆ ಆವರಿಸತೊಡಗಿದೆ. ಅಷ್ಟೇ ಅಲಲ ಸ್ಯಾನ್ ಫ್ರಾನ್ಸಿಸ್ಕೋ ಕರಾವಳಿ ಪ್ರದೇಶದಲ್ಲಿ ಭಾರೀ ಪ್ರಮಾಣದ ಹೊಗೆ ಕಾಣಿಸಿಕೊಂಡಿರುವುದಾಗಿ ವರದಿ ತಿಳಿಸಿದೆ. ಕಾಳ್ಗಿಚ್ಚಿನಲ್ಲಿ ಪ್ರಾಥಮಿಕ ಮಾಹಿತಿ ಪ್ರಕಾರ ಐದು ಮಂದಿ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
ಇಂತಹ ದೊಡ್ಡ ಭೀಕರ ಅಗ್ನಿ ದುರಂತ ಇದೇ ಮೊದಲ ಬಾರಿಗೆ ನಮ್ಮ ಅರಿವಿಗೆ ಬಂದಿದೆ ಎಂದು ಗಾವಿನ್ ಸುದ್ದಿ ಗೋಷ್ಠಿಯಲ್ಲಿ ಮಾತನಾಡುತ್ತ ವಿವರಿಸಿದರು. ಈಗಾಗಲೇ ಸುಮಾರು 367 ಅಗ್ನಿ ದುರಂತ ಸಂಭವಿಸಿದ್ದು, ಇದರಲ್ಲಿ 23 ದೊಡ್ಡ ಪ್ರಮಾಣದ ಕಾಳ್ಗಿಚ್ಚು ಎಂದು ವರದಿ ತಿಳಿಸಿದೆ.
ಕಳೆದ ನಾಲ್ಕು ದಿನದ ಅವಧಿಯಲ್ಲಿ ಸುಮಾರು 11ಸಾವಿರಕ್ಕೂ ಅಧಿಕ ಮಿಂಚಿನ ಹೊಡೆತ ಕಾಣಿಸಿಕೊಂಡಿದ್ದರಿಂದ ಕ್ಯಾಲಿಫೋರ್ನಿಯಾದ ಈ ಕಾಡಿನಲ್ಲಿ ಕಾಳ್ಗಿಚ್ಚು ಗಂಭೀರ ಸ್ವರೂಪ ತಾಳಲು ಕಾರಣವಾಗಿತ್ತು. ಅಷ್ಟೇ ಅಲ್ಲ ಬಿಸಿ ಗಾಳಿಯು ಎಲ್ಲೆಡೆ ಹರಡತೊಡಗಿದೆ ಎಂದು ವರದಿ ವಿವರಿಸಿದೆ.
ಕ್ಯಾಲಿಫೋರ್ನಿಯಾದ್ಯಂತ ಸುಮಾರು 367ಕ್ಕೂ ಅಧಿಕ ಕಾಳ್ಗಿಚ್ಚು ಸಂಭವಿಸಿದೆ. ಉತ್ತರ ಕ್ಯಾಲಿಫೋರ್ನಿಯಾದ ಐದು ಕೌಂಟಿಗಳಲ್ಲಿ ಭಾರೀ ಪ್ರಮಾಣದ ಸಿಡಿಲು, ಮಿಂಚು ಹೊಡೆದಿದೆ. ನಾಪಾ, ಸೋನೊಮಾ, ಲೇಕ್, ಯೊಲೋ ಹಾಗೂ ಸೊಲಾನೊ ಕೌಂಟಿಯಲ್ಲಿ ಸಿಡಿಲು ತನ್ನ ಪ್ರತಾಪ ತೋರಿಸಿದೆ.
ಹತ್ತು ಸಾವಿರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಸುಮಾರು 33 ಸಾವಿರ ಮಂದಿ ಪ್ರಾಣಾಪಾಯದಲ್ಲಿದ್ದಾರೆ. ಘಟನೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳೂ ಗಾಯಗೊಂಡಿರುವುದಾಗಿ ವರದಿ ತಿಳಿಸಿದೆ.