ಮೆರೊನ್(ಇಸ್ರೇಲ್):ಯಹೂದಿಯರ ಧಾರ್ಮಿಕ ಸ್ಥಳದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ 44 ಮಂದಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ಉತ್ತರ ಇಸ್ರೇಲ್ ನಲ್ಲಿ ನಡೆದಿದ್ದು, ಭಾರೀ ಜನಸ್ತೋಮದಿಂದಾಗಿ ಗಾಯಗೊಂಡವರನ್ನು ರಕ್ಷಿಸಲು ರಕ್ಷಣಾ ತಂಡಗಳು ಹರಸಾಹಸಪಡುತ್ತಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ನಿವೃತ್ತ ನ್ಯಾಯಮೂರ್ತಿಯೊಬ್ಬರು ರಾಜ್ಯಪಾಲರ ಹುದ್ದೆಗಾಗಿ ಲಂಚ ನೀಡಿರುವುದು ದುರದೃಷ್ಟಕರ!
ಎರಡನೇ ಶತಮಾನದ ಟಾಲ್ಮುಡಿಕ್ ಸಂತ ರಬ್ಬಿ ಶಿಮೊನ್ ಬಾರ್ ಯೋಚೈ ಅವರ ಸಮಾಧಿ ಸ್ಥಳವಾದ ಮೆರಾನ್ನಲ್ಲಿ ಸಂಪ್ರದಾಯವಾದಿ ಯಹೂದಿಗಳ ಜನಸ್ತೋಮ ಸೇರಿದ ವೇಳೆ ಈ ಕಾಲ್ತುಳಿತ ಸಂಭವಿಸಿದೆ ಎಂದು ವರದಿ ವಿವರಿಸಿದೆ.
ಕಳೆದ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ನಿರ್ಬಂಧ ವಿಧಿಸಿದ್ದರಿಂದ ಸಾಮೂಹಿಕ ಧಾರ್ಮಿಕ ಕಾರ್ಯಕ್ರಮ ನಡೆದಿರಲಿಲ್ಲವಾಗಿತ್ತು. ಈ ವರ್ಷ ಯಾತ್ರಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಆಗಮಿಸಿ ಸಂಭ್ರಮಾಚರಣೆಯನ್ನು ಯಶಸ್ವಿಗೊಳಿಸಲು ಶ್ರಮಿಸಿದ ಸಂದರ್ಭದಲ್ಲಿ ಈ ದುರಂತ ನಡೆದಿದೆ ಎಂದು ವರದಿ ತಿಳಿಸಿದೆ.
ಈ ಬಾರಿಯೂ ಕೋವಿಡ್ ಭೀತಿಯ ನಡುವೆಯೂ ಸಾವಿರಾರು ಸಂಖ್ಯೆಯಲ್ಲಿ ಯಹೂದಿಗಳು ಸೇರಿದ್ದರು. ಪ್ರಾಥಮಿಕ ಮಾಹಿತಿ ಪ್ರಕಾರ, ಆರೋಗ್ಯ ಅಧಿಕಾರಿಗಳು ವಿಧಿಸಿದ್ದ ಕೋವಿಡ್ ನಿಯಮ ಉಲ್ಲಂಘಿಸಿ ಜನಸಮೂಹ ನೆರೆದಿದ್ದು, ಈ ವೇಳೆ ಕುಳಿತುಕೊಳ್ಳಲು ನಿರ್ಮಿಸಿದ್ದ ಸ್ಟೇಡಿಯಂ ಕುಸಿದು ಬಿದ್ದಿದ್ದರಿಂದ ಗಾಬರಿಗೊಂಡ ಜನರು ದಿಕ್ಕಾಪಾಲಾಗಿ ಓಡಲು ಆರಂಭಿಸಿದ್ದು, ಕಾಲ್ತುಳಿತ ಸಂಭವಿಸಲು ಕಾರಣವಾಗಿದೆ ಎಂದು ಹೇಳಿದೆ.