ನವದೆಹಲಿ:ಲಡಾಖ್ ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ 2020ರ ಜೂನ್ 15ರಂದು ಭಾರತ ಮತ್ತು ಚೀನಾ ಸೇನೆ ನಡುವೆ ನಡೆದಿದ್ದ ಸಂಘರ್ಷದಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. ಆದರೆ ಸಂಘರ್ಷದಲ್ಲಿ ಸಾವನ್ನಪ್ಪಿರುವ ಚೀನಾ ಸೈನಿಕರ ಸಂಖ್ಯೆ ಅಧಿಕೃತ ಸಂಖ್ಯೆಗಿಂತಲೂ ಹೆಚ್ಚಳವಾಗಿರುವುದಾಗಿ ಆಸ್ಟ್ರೇಲಿಯಾದ ಪತ್ರಿಕೆಯೊಂದು ವರದಿ ಮಾಡಿದೆ.
ಇದನ್ನೂ ಓದಿ:ಕಾಡಾನೆ ದಾಳಿಗೆ ರೈತ ಸಾವು : ಚಿಕ್ಕಮ್ಮನ ತಿಥಿ ಕಾರ್ಯ ನೆಡೆಯಬೇಕಿದ್ದ ದಿನದಂದೇ ನಡೆಯಿತು ಘಟನೆ
ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ನಡೆದಿದ್ದ ಸಂಘರ್ಷದಲ್ಲಿ ನಾಲ್ವರು ಸೈನಿಕರು ಮಾತ್ರ ಸಾವನ್ನಪ್ಪಿರುವುದಾಗಿ 2021ರ ಫೆಬ್ರುವರಿಯಲ್ಲಿ ಚೀನಾ ಮೊದಲ ಬಾರಿಗೆ ಘೋಷಿಸಿತ್ತು. ಏತನ್ಮಧ್ಯೆ ಘಟನೆಯಲ್ಲಿ ಚೀನಾ ಅಧಿಕೃತವಾಗಿ ಘೋಷಿಸಿರುವ ಸಾವು, ನೋವಿನ ಅಂಕಿಅಂಶಕ್ಕಿಂತ ಅಧಿಕವಾಗಿದೆ ಎಂದು ವರದಿ ಹೇಳಿದೆ.
ಈ ಬಗ್ಗೆ ಆಸ್ಟ್ರೇಲಿಯಾದ ದಿ ಕ್ಲಾಕ್ಸನ್ ಪತ್ರಿಕೆ ತನಿಖಾ ವರದಿ ಪ್ರಕಟಿಸಿದ್ದು, ಗಾಲ್ವಾನ್ ಪ್ರದೇಶದಲ್ಲಿ ಸಂಘರ್ಷ ನಡೆದ ಸಂದರ್ಭದಲ್ಲಿ ಜೂನ್ 15-16ರಂದು ಚೀನಿ ಸೈನಿಕರು ನದಿ ದಾಟುವ ಭರದಲ್ಲಿ ಕನಿಷ್ಠ 38 ಮಂದಿ ಕೊಚ್ಚಿ ಹೋಗಿರುವುದಾಗಿ ತಿಳಿಸಿದೆ.
ಚೀನಾದ ಬ್ಲಾಗರ್ಸ್, ಸಂಶೋಧಕರು, ಚೀನಾ ನಾಗರಿಕರು ಮತ್ತು ಮಾಧ್ಯಮಗಳ ಮಾಹಿತಿಯನ್ನು ಆಧರಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದ್ದು, ಇವರೆಲ್ಲರ ಹೆಸರನ್ನು ಆಸ್ಟ್ರೇಲಿಯಾ ಪತ್ರಿಕೆ ಬಹಿರಂಗಪಡಿಸಿಲ್ಲ.
ಜೂನ್ 15ರಂದು ರಾತ್ರಿ ಭಾರತೀಯ ಸೈನ್ಯದ ಯೋಧರು ಚೀನಾ ಅತಿಕ್ರಮಿಸಿದ್ದ ಗಾಲ್ವಾನ್ ಕಣಿವೆ ಪ್ರದೇಶಕ್ಕೆ ರಾತ್ರಿ ವೇಳೆ ತೆರಳಿದ್ದರು. ಇಲ್ಲಿ ಚರ್ಚೆ ನಡೆಸುತ್ತಿದ್ದ ಸಂದರ್ಭದಲ್ಲಿ ಘರ್ಷಣೆ ಆರಂಭವಾಗಿದ್ದು, ಈ ವೇಳೆ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದ ಘಟನೆ ನಡೆದಿತ್ತು.
ಆದರೆ ಗಾಲ್ವಾನ್ ಕಣಿವೆ ಘರ್ಷಣೆಯಲ್ಲಿ ಎಷ್ಟು ಮಂದಿ ಸೈನಿಕರು ಸಾವನ್ನಪ್ಪಿದ್ದರು ಎಂಬುದನ್ನು ಚೀನಾ ಬಹಿರಂಗಪಡಿಸಿಲ್ಲವಾಗಿತ್ತು. ಬಳಿಕ 2021ರ ಫೆಬ್ರುವರಿಯಲ್ಲಿ ನಾಲ್ವರು ಸೈನಿಕರು ಸಾವನ್ನಪ್ಪಿರುವುದಾಗಿ ಒಪ್ಪಿಕೊಂಡಿತ್ತು. ಆದರೆ ಇದೀಗ ಆಸ್ಟ್ರೇಲಿಯಾದ ಕ್ಲಾಕ್ಸಿನ್ ಪತ್ರಿಕೆ ಚೀನಾದ ಸುಳ್ಳನ್ನು ಬಯಲು ಮಾಡಿದೆ.