Advertisement

ಟರ್ಕಿ ಸರಕು ವಿಮಾನ ಕಿರ್ಗಿಸ್ಥಾನದಲ್ಲಿ ಮನೆಗಳ ಮೇಲೆ ಪತನ: 37 ಸಾವು

11:22 AM Jan 16, 2017 | Team Udayavani |

ಬಿಷೆಕ್‌: ದಟ್ಟನೆಯ ಮಂಜು ಮುಸಕಿದ ವಾತಾವರಣದಲ್ಲಿ ಲ್ಯಾಂಡ್‌ ಆಗಲು ಯತ್ನಿಸುತ್ತಿದ್ದ  ಸರಕು ಸಾಗಣೆ ವಿಮಾನವೊಂದು ಇಂದು ಸೋಮವಾರ ಕಿರ್ಗಿಸ್ಥಾನದ ಮುಖ್ಯ ವಿಮಾನ ನಿಲ್ದಾಣಕ್ಕೆ ಸಮೀಪ ಹಲವಾರು ಮನೆಗಳು ಇರುವ ಪ್ರದೇಶದಲ್ಲಿ ಪತನಗೊಂಡ ಪರಿಣಾಮವಾಗಿ 37 ಜನರು ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ.

Advertisement

ಪತನಗೊಂಡ ವಿಮಾನವು ಟರ್ಕಿ ಏರ್‌ಲೈನ್ಸ್‌ಗೆ ಸೇರಿದ್ದಾಗಿದೆ. ಇದು ಹಾಂಕಾಂಗ್‌ನಿಂದ ಇಸ್ತಾಂಬುಲ್‌ಗೆ ಕಿರ್ಗಿಸ್ಥಾನದ ರಾಜಧಾನಿ ಬಿಷೆಕ್‌ ಮೂಲಕವಾಗಿ ತೆರಳುತ್ತಿತ್ತು. ಈ ವಿಮಾನವು ಕಿರ್ಗಿಸ್ಥಾನದ ಡಾಚಾ ಸೂ ಎಂಬ ಗ್ರಾಮದಲ್ಲಿ ಹಲವಾರು ಮನೆಗಳ ಸಮೂಹವಿದ್ದ ಸ್ಥಳದ ಮೇಲೆಯೇ ಇಂದು ಬೆಳಗ್ಗೆ 7.30ರ ಸುಮಾರಿಗೆ (ಸ್ಥಳೀಯ ಕಾಲಮಾನ) ಪತನ ಗೊಂಡಿತು. ಹಾಗಾಗಿ ಈ ದುರ್ಘ‌ಟನೆಯಲ್ಲಿ ಮೃತಪಟ್ಟ ಹೆಚ್ಚಿನವರು ಗ್ರಾಮಸ್ಥರೇ ಆಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ವಿಮಾನ ನಿಲ್ದಾಣದ ಆಡಳಿತಾಧಿಕಾರಿಗಳ ಪ್ರಕಾರ ಈ ನತದೃಷ್ಟ ವಿಮಾನವು ರಾಜಧಾನಿ ಬಿಷೆಕ್‌ ಸಮೀಪದ ಮನಾಸ್‌ ವಿಮಾನ ನಿಲ್ದಾಣದಲ್ಲಿ ಇಳಿಯುವುದಿತ್ತು.  ವಿಮಾನ ನಿಲ್ದಾಣದಲ್ಲಿ ದಟ್ಟನೆಯ ಮಂಜು ಮುಸುಕಿತ್ತು. ಹಾಗಿದ್ದರೂ ಲ್ಯಾಂಡಿಂಗ್‌ ಗಾಗಿ ವಿಮಾನ ಯತ್ನಿಸಿತು. ಆದರೆ ದುರದೃಷ್ಟವಶಾತ್‌ ನಿಖರತೆಯನ್ನು ಸಾಧಿಸಲಾರದೆ ಅದು ವಿಮಾನ ನಿಲ್ದಾಣಕ್ಕೆ ಸಮೀಪದ ಗ್ರಾಮದ ಮೇಲೆ ಪತನಗೊಂಡಿತು ಎಂದು ಎಎಫ್ಪಿ ಸುದ್ದಿ ಸಂಸ್ಥೆ ತಿಳಿಸಿದೆ.

ವಿಮಾನದ ಈ ಹಠಾತ್‌ ಪತನದಿಂದಾಗಿ ಸುಮಾರು 15 ಕಟ್ಟಡಗಳು ಧ್ವಂಸಗೊಂಡವು ಎಂದು ವಿಪತ್ತು ನಿರ್ವಹಣಾ  ಕೇಂದ್ರದ ಮುಖ್ಯಸ್ಥ ಮುಖಮ್ಮದ್‌ ಸರೋವ್‌ ತಿಳಿಸಿದ್ದಾರೆ. ವಿಮಾನದಲ್ಲಿ ಒಟ್ಟು ಐವರು ಇದ್ದರೆಂದು ಅಧಿಕಾರಿಗಳು ತಿಳಿಸಿದ್ದಾರೆ. ಪೈಲಟ್‌ ಹಾಗೂ ಗ್ರಾಮದ 15 ಮಂದಿಯ ಶವಗಳು ಈ ತನಕ ಸಿಕ್ಕಿವೆ ಎಂದು ಆರೋಗ್ಯ ಸೇವೆಗಳ ಸಚಿವಾಲಯ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next