ಢಾಕಾ: ದುರ್ಗಾ ಪೂಜೆ ನಡೆಯುತ್ತಿದ್ದ ಮಂಟಪಗಳ ಮೇಲೆ ದಾಳಿ ನಡೆಸಿ, ಮೂರ್ತಿಗಳನ್ನು ಒಡೆದು ಹಾಕಿರುವ ಘಟನೆ ಬಾಂಗ್ಲಾದೇಶದಲ್ಲಿ ನಡೆದಿರುವುದಾಗಿ ಸ್ಥಳೀಯ ಮಾಧ್ಯಮಗಳ ವರದಿ ತಿಳಿಸಿದೆ.
ಇದನ್ನೂ ಓದಿ:13 ಅಂತಸ್ತಿನ ಕಟ್ಟಡದಲ್ಲಿ ಭಾರಿ ಬೆಂಕಿ : 46 ಮಂದಿ ಸಜೀವ ದಹನ
ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಕೊಮಿಲ್ಲಾದ ಪೂಜಾ ಸ್ಥಳದಲ್ಲಿ ಕುರಾನ್ ಅನ್ನು ಅಪವಿತ್ರಗೊಳಿಸಲಾಗಿದೆ ಎಂಬ ಕೆಲವು ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಹಿಂಸಾಚಾರ ಭುಗಿಲೆದ್ದಿದ್ದು, ಉದ್ರಿಕ್ತ ಗುಂಪನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿರುವುದಾಗಿ ವಿವರಿಸಿದೆ.
ದುರ್ಗಾ ಪೂಜೆ ನಡೆಯುತ್ತಿದ್ದ ಪೆಂಡಾಲ್ ಮೇಲೆ ದಾಳಿ ನಡೆದ ಘಟನೆಯಲ್ಲಿ ಮೂವರು ಸಾವನ್ನಪ್ಪಿರುವುದಾಗಿ ವರದಿ ಹೇಳಿದೆ.ಕೊಮಿಲ್ಲಾ ಹಿಂಸಾಚಾರದ ನಂತರ ಚಾಂದ್ ಪುರದ ಹಾಜಿಗಂಜ್, ಚಟ್ಟೋಗ್ರಾಮ್ ನ ಬಾನ್ಸಾಖಾಲಿ ಮತ್ತು ಕಾಕ್ಸ್ ಬಜಾರ್ ನ ಪೆಕುವಾದಲ್ಲಿನ ದೇವಸ್ಥಾನಗಳಲ್ಲಿ ವಿಧ್ವಂಸಕ ಘಟನೆಗಳು ನಡೆದ ಬಗ್ಗೆ ವರದಿಯಾಗಿದೆ.
ಹಿಂಸಾಚಾರ ನಡೆದ ಪ್ರದೇಶಗಳಿಗೆ ಬಾಂಗ್ಲಾ ಸರ್ಕಾರ ಅರೆಸೇನಾಪಡೆಗಳನ್ನು ನಿಯೋಜಿಸಿರುವುದಾಗಿ ವರದಿ ತಿಳಿಸಿದೆ. ದುರ್ಗಾ ಪೂಜೆ ನಡೆಸುತ್ತಿದ್ದ ಸ್ಥಳಗಳ ಮೇಲೆ ನಡೆದ ದಾಳಿ, ಮೂರ್ತಿಗಳನ್ನು ಭಗ್ನಗೊಳಿಸಿರುವ ಫೋಟೋಗಳನ್ನು ಬಾಂಗ್ಲಾದೇಶ್ ಹಿಂದೂ ಯೂನಿಟಿ ಕೌನ್ಸಿಲ್ ತಮ್ಮ ಜಾಲತಾಣದಲ್ಲಿ ಪೋಸ್ಟ್ ಮಾಡಿರುವುದಾಗಿ ವರದಿ ತಿಳಿಸಿದೆ.