Advertisement
ಲಢಾಕ್ ನ ಗಲ್ವಾನ್ ಕಣಿವೆ ಪ್ರದೇಶದಲ್ಲಿರುವ ನೈಜ ನಿಯಂತ್ರಣ ರೇಖೆಯ ಬಳಿ ಎರಡೂ ದೇಶಗಳ ಸೈನಿಕರ ನಡುವೆ ಪರಸ್ಪರ ಮೇಲಾಟ ನಡೆದು ಕನಿಷ್ಟ 20 ಜನ ಭಾರತೀಯ ಯೋಧರನ್ನು ಚೀನಾ ಸೈನಿಕರು ಕೊಂದಿದ್ದಾರೆ ಎಂಬ ಮಾಹಿತಿಯನ್ನು ಸರಕಾರದ ಮೂಲಗಳನ್ನುದ್ದೇಶಿಸಿ ಎ.ಎನ್.ಐ. ಸುದ್ದಿ ಸಂಸ್ಥೆ ವರದಿ ಮಾಡಿದೆ.
Related Articles
Advertisement
ಇದಕ್ಕೂ ಮೊದಲು ಇಂದು ಬೆಳಿಗ್ಗೆ ಹೇಳಿಕೆ ನೀಡಿದ್ದ ಭಾರತೀಯ ಸೇನೆಯ ಅಧಿಕಾರಿಗಳು ಚೀನಾ ಸೈನಿಕರೊಂದಿಗೆ ಲಢಾಕ್ ಪ್ರದೇಶದಲ್ಲಿ ನಡೆದ ಘರ್ಷಣೆಯಲ್ಲಿ ಸೇನೆಯ ಓರ್ವ ಅಧಿಕಾರಿ ಹಾಗೂ ಇಬ್ಬರು ಯೋಧರು ಸಾವಿಗೀಡಾಗಿದ್ದಾರೆ ಎಂದು ಮಾಹಿತಿಯನ್ನು ನೀಡಿತ್ತು.
ನೈಜ ಗಡಿ ನಿಯಂತ್ರಣ ರೆಖೆಯ ಪ್ರದೇಶದಲ್ಲಿ ‘ಯಥಾ ಸ್ಥಿತಿ’ಯನ್ನು ಬದಲಿಸುವ ಚೀನಾದ ದು:ಸ್ಸಾಹಸದಿಂದ ಈ ಘರ್ಷಣೆ ಉಂಟಾಗಿದೆ ಎಂದು ಭಾರತೀಯ ವಿದೇಶಾಂಗ ಇಲಾಖೆಯ ಮೂಲಗಳು ಆರೋಪಿಸಿವೆ.
ಆದರೆ ಭಾರತೀಯ ಸೈನಿಕರೇ ಪದೇ ಪದೇ ಗಡಿ ಪ್ರದೇಶದ ಉಲ್ಲಂಘನೆ ಮಾಡುತ್ತಿದ್ದಾರೆಂದು ಚೀನಾ ಆರೋಪಿಸುತ್ತಿದೆ.
1975ರ ಬಳಿಕ ಭಾರತ ಹಾಗೂ ಚೀನಾ ನಡುವೆ ಗಡಿಭಾಗದಲ್ಲಿ ಉಂಟಾಗುತ್ತಿರುವ ಪ್ರಥಮ ಘರ್ಷಣೆ ಇದಾಗಿದೆ. ಆ ಕಾಲಕ್ಕೂ ಇಂದಿಗೂ ಎರಡೂ ದೇಶಗಳ ಸೇನಾ ಸಾಮರ್ಥ್ಯದಲ್ಲಿ ಗಣನೀಯ ವೃದ್ಧಿಯಾಗಿದ್ದು ಜಾಗತಿಕ ಮಟ್ಟದಲ್ಲೂ ಚೀನಾ ಹಾಗೂ ಭಾರತ ನಿರ್ಣಾಯಕ ಸ್ಥಾನದಲ್ಲಿರುವುದರಿಂದ ಈ ಎರಡೂ ನೆರೆ ರಾಷ್ಟ್ರಗಳ ನಡುವಿನ ಗಡಿ ಗಲಾಟೆ ಇದೀಗ ವಿಶ್ವದ ಕಳವಳಕ್ಕೆ ಕಾರಣವಾಗಿದೆ.