Advertisement

ಭಿನ್ನಾಭಿಪ್ರಾಯ ಬಿಟ್ಟು ಹೋರಾಡೋಣ ; ದಿಲ್ಲಿ ಸರ್ವ ಪಕ್ಷಗಳ ಸಭೆಯಲ್ಲಿ ಗೃಹ ಸಚಿವ ಅಮಿತ್‌ ಶಾ

02:52 AM Jun 16, 2020 | Hari Prasad |

ಹೊಸದಿಲ್ಲಿ: ದಿಲ್ಲಿಯ ಎಲ್ಲ ರಾಜಕೀಯ ಪಕ್ಷಗಳೂ ತಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಕೋವಿಡ್ ವಿರುದ್ಧ ಒಗ್ಗಟ್ಟಿನ ಹೋರಾಟ ಮಾಡಬೇಕು ಎಂದು ಗೃಹ ಸಚಿವ ಅಮಿತ್‌ ಶಾ ಸಲಹೆ ನೀಡಿದ್ದಾರೆ.

Advertisement

ಹೊಸದಿಲ್ಲಿಯಲ್ಲಿ ಸೋಮವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಅವರು ಮಾತನಾಡಿದರು.

ರಾಷ್ಟ್ರರಾಜಧಾನಿಯಲ್ಲಿ ಪ್ರತಿಯೊಬ್ಬರನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸುವ ಕುರಿತು ವಿವಿಧ ರಾಜಕೀಯ ಪಕ್ಷಗಳ ನಾಯಕರು ಮಾಡಿದ ಮನವಿಯನ್ನೂ ಪುರಸ್ಕರಿಸಿದ್ದಾರೆ. ಮುಂದಿನ ಕೆಲವೇ ದಿನಗಳಲ್ಲಿ ದಿಲ್ಲಿಯಲ್ಲಿ ಪ್ರತಿ ದಿನ 18 ಸಾವಿರ ಕೋವಿಡ್ ಪರೀಕ್ಷೆಗಳು ನಡೆಯಲಿವೆ. ಸದ್ಯದಲ್ಲೇ ದಿಲ್ಲಿ ಸಹಜ ಸ್ಥಿತಿಗೆ ಬರಲಿದೆ ಎಂದೂ ಶಾ ಹೇಳಿದ್ದಾರೆ.

ಬಳಿಕ ಅಮಿತ್‌ ಶಾ ಅವರು ದಿಲ್ಲಿಯ ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಿಢೀರ್‌ ಭೇಟಿ ನೀಡಿ, ಅಲ್ಲಿನ ಸಿದ್ಧತೆ ಕುರಿತು ಪರಿಶೀಲಿಸಿದರು. ಹಿರಿಯ ವೈದ್ಯರೊಂದಿಗೆ ಸಮಾಲೋಚನೆ ನಡೆಸಿ, ಆಸ್ಪತ್ರೆಗೆ ಸಂಬಂಧಿಸಿದ ಮಾಹಿತಿಯನ್ನು ಪಡೆದರು.

ಸಿಸಿಟಿವಿ ಅಳವಡಿಸಿ: ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳ ವಾರ್ಡ್‌ಗಳಲ್ಲಿ ಸಿಸಿಟಿವಿ ಅಳವಡಿಸಬೇಕು. ಇದರ ಜತೆಗೆ ಸೋಂಕಿತರಿಗೆ ಪೌಷ್ಟಿಕಯುಕ್ತ ಆಹಾರ ನೀಡುವ ನಿಟ್ಟಿನಲ್ಲಿ ಪ್ರತ್ಯೇಕ ಕ್ಯಾಂಟೀನ್‌ಗಳನ್ನು ಶುರು ಮಾಡುವಂತೆ ಅಮಿತ್‌ ಶಾ ದಿಲ್ಲಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ. ಇದರ ಜತೆಗೆ ವೈದ್ಯರು, ದಾದಿಯರಿಗೆ ಮಾನಸಿಕ ದೃಢತೆ ಬರುವ ನಿಟ್ಟಿನಲ್ಲಿ ಆಪ್ತ ಸಮಾಲೋಚನೆಯ ವ್ಯವಸ್ಥೆ ಮಾಡಲೂ ಸೂಚಿಸಿದ್ದಾರೆ.

Advertisement

ನಿರ್ಬಂಧ ವಿಸ್ತರಣೆ ಇಲ್ಲ: ಇದೇ ವೇಳೆ, ದಿಲ್ಲಿಯಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ಮತ್ತೂಮ್ಮೆ ಲಾಕ್‌ಡೌನ್‌ ಘೋಷಿಸಲಾಗುತ್ತದೆಯೇ ಎಂಬ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಆದರೆ, ನಿರ್ಬಂಧ ವಿಸ್ತರಣೆ ಮಾಡುವ ಬಗ್ಗೆ ಯೋಚಿಸಿಲ್ಲ ಎಂದು ಕೇಜ್ರಿವಾಲ್‌ ಟ್ವೀಟ್‌ ಮೂಲಕ ಸ್ಪಷ್ಟಪಡಿಸಿದ್ದಾರೆ. ಜತೆಗೆ, ಸಮರೋಪಾದಿಯಲ್ಲಿ ಕೆಲಸ ಮಾಡುವಂತೆ ಸರಕಾರಿ ಹಾಗೂ ಖಾಸಗಿ ಪ್ರಯೋಗಾಲಯಗಳಿಗೆ ಸೂಚಿಸಿರುವ ಕೇಜ್ರಿವಾಲ್‌, 48 ಗಂಟೆಗಳೊಳಗೆ ಪರೀಕ್ಷಾ ವರದಿ ನೀಡುವಂತೆ ಖಾಸಗಿ ಲ್ಯಾಬ್‌ಗಳಿಗೆ ನಿರ್ದೇಶಿಸಿದ್ದಾರೆ.

ಮಾಸ್ಕ್ ಧರಿಸದಿದ್ರೆ 500 ರೂ.ದಂಡ
ದಿಲ್ಲಿಯಲ್ಲಿ ಈಗ ಮಾಸ್ಕ್ ಧರಿಸದಿದ್ದರೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು, ತಂಬಾಕು ಜಗಿದು ಉಗಿಯುವುದು ಮಾಡಿದರೆ ಅಂಥವರಿಗೆ 500 ರೂ. ದಂಡ ವಿಧಿಸಲಾಗುತ್ತದೆ. ಕ್ವಾರಂಟೈನ್‌ ನಿಯಮ ಉಲ್ಲಂಘಿಸುವವರು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಇರುವವರಿಗೂ ದಂಡ ವಿಧಿಸಲು ನಿರ್ಧರಿಸಲಾಗಿದೆ. ರವಿವಾರದಿಂದಲೇ ಈ ನಿಯಮ ಜಾರಿಗೆ ಬಂದಿದೆ. ಒಮ್ಮೆ ದಂಡ ಪಾವತಿಸಿ, ಮತ್ತೆ ಅದೇ ತಪ್ಪು ಮಾಡಿದರೆ ಅಂಥವರಿಗೆ ದುಪ್ಪಟ್ಟು ದಂಡ ವಿಧಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next