ನವದೆಹಲಿ:ರಾಷ್ಟ್ರರಾಜಧಾನಿ ದೆಹಲಿಯ ಜನರಿಗೆ ಹೊಸ ವರ್ಷದ ದಿನದಂದೇ(2021, ಜನವರಿ 01) ದಟ್ಟ ಮಂಜು ಮತ್ತು ತೀವ್ರ ಚಳಿ ಅನುಭವಿಸುವಂತಾಗಿದೆ. ಕಳೆದ 15 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 1.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿರುವುದಾಗಿ ವರದಿ ತಿಳಿಸಿದೆ.
ಸಫ್ದರ್ ಜಂಗ್ ವೀಕ್ಷಣಾಲಯದಲ್ಲಿ ದಾಖಲೆಯ 1.1 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ನಗರದ ತಾಪಮಾನದ ಅಂಕಿ-ಅಂಶ ನೀಡುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 2006ರ ಜನವರಿ 8ರಂದು ದೆಹಲಿಯಲ್ಲಿ 0.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿತ್ತು.
2020ರ ಜನವರಿಯಲ್ಲಿ 2.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿರುವುದಾಗಿ ಭಾರತೀಯ ಹವಾಮಾನ ಇಲಾಖೆ ವಿವರಿಸಿದೆ. ಈ ವರ್ಷವೂ ರಕ್ತ ಹೆಪ್ಪುಗಟ್ಟಿಸುವ ಚಳಿಗೆ ದೆಹಲಿ ಜನರು ತತ್ತರಿಸಿ ಹೋಗಿರುವುದಾಗಿ ವರದಿ ತಿಳಿಸಿದೆ.
ಹವಾಮಾನ ಇಲಾಖೆಯ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥ ಕುಲ್ ದೀಪ್ ಶ್ರೀವಾಸ್ತವ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಬೆಳಗ್ಗೆ 6ಗಂಟೆಗೆ ಸಫ್ದರ್ ಜಂಗ್ ಮತ್ತು ಪಾಲಂನಲ್ಲಿ ದಟ್ಟ ಮಂಜು ಮುಸುಕಿದ ವಾತಾವರಣದಿಂದಾಗಿ ವಾಹನ ಸವಾರರಿಗೆ ಅಡಚಣೆಯಾಗಿತ್ತು.
ಜನವರಿ 2ರಿಂದ 6ರವರೆಗೆ ಕನಿಷ್ಠ ತಾಪಮಾನದಲ್ಲಿ ಏರಿಕೆಯಾಗಲಿದೆ. ಜನವರಿ 4 ಮತ್ತು 5ರಂದು 8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ.