Advertisement

ಕಪ್ಪುರಂಧ್ರದ 500ನೇ ಮರುಹುಟ್ಟನ್ನು ಸೆರೆಹಿಡಿದ ಆಸ್ಟ್ರೋಸ್ಯಾಟ್‌

08:21 PM May 21, 2022 | Team Udayavani |

ನವದೆಹಲಿ:ರೇಡಿಯೋ ಟೆಲಿಸ್ಕೋಪ್‌ನ ಜಾಗತಿಕ ಜಾಲವಾದ ಇವೆಂಟ್‌ ಹಾರಿಜಾನ್‌ ಟೆಲಿಸ್ಕೋಪ್‌(ಇಎಚ್‌ಟಿ) ಕ್ಷೀರಪಥದ ತಾರಾಪುಂಜದಲ್ಲಿ ಕಪ್ಪುರಂಧ್ರದ ಮೊದಲ ಚಿತ್ರವನ್ನು ಸೆರೆಹಿಡಿಯುವುದಕ್ಕೂ ಮುನ್ನವೇ, ಭಾರತದ ಆಸ್ಟ್ರೋಸ್ಯಾಟ್‌ ಬಾಹ್ಯಾಕಾಶ ದೂರದರ್ಶಕವು ಕಪ್ಪುರಂಧ್ರದ 500ನೇ ಮರುಸೃಷ್ಟಿಗೆ ಸಾಕ್ಷಿಯಾಗಿತ್ತು.

Advertisement

ಕಪ್ಪುರಂಧ್ರಗಳ ಹುಟ್ಟಿನ ಬಗೆಗಿನ ಅಧ್ಯಯನದಲ್ಲಿ ಭಾರತವು ಮುನ್ನಡೆ ಸಾಧಿಸುತ್ತಿದೆ ಎಂದು ಸ್ವತಃ ಇಂಟರ್‌-ಯುನಿವರ್ಸಿಟಿ ಸೆಂಟರ್‌ ಫಾರ್‌ ಆಸ್ಟ್ರಾನಮಿ ಆ್ಯಂಡ್‌ ಆಸ್ಟ್ರೋಫಿಸಿಕ್ಸ್‌(ಐಯುಸಿಎಎ) ಹೇಳಿದೆ. ಭಾರತದ ಬಾಹ್ಯಾಕಾಶನೌಕೆಯು 6.5 ವರ್ಷಗಳ ಹಿಂದೆ ಮೊದಲು ಕಣ್ಣುಬಿಟ್ಟಾಗಿನಿಂದಲೂ ಗಾಮಾ-ಕಿರಣಗಳ ಸ್ಫೋಟದ ಕುರಿತು ಅಧ್ಯಯನ ನಡೆಸುತ್ತಿದೆ. ಆಸ್ಟ್ರೋಸ್ಯಾಟ್‌ನಲ್ಲಿ ಅಳವಡಿಸಲಾಗಿರುವ ಕ್ಯಾಡ್ಮಿಯಂ ಝಿಂಕ್‌ ಟೆಲ್ಲುರೈಡ್‌ ಇಮೇಜರ್‌ ಸತತ 500ನೇ ಬಾರಿಗೆ ಕಪ್ಪುರಂಧ್ರಗಳ ಮರುಸೃಷ್ಟಿಯನ್ನು ಸೆರೆಹಿಡಿದಿದೆ. ಇದೊಂದು ಐತಿಹಾಸಿಕ ಸಾಧನೆಯಾಗಿದೆ ಎಂದಿದ್ದಾರೆ ಪ್ರೊಫೆಸರ್‌ ವರುಣ್‌ ಭಾಲೇರಾವ್‌.

ಬಾಹ್ಯಾಕಾಶದಲ್ಲಿ ಕಪ್ಪುರಂಧ್ರವಿರುವ ವಲಯದಲ್ಲಿ ಗುರುತ್ವ ಬಲವು ಎಷ್ಟು ಬಲಿಷ್ಠವಾಗಿರುತ್ತದೆಂದರೆ, ಬೆಳಕಿಗೆ ಕೂಡ ಗುರುತ್ವ ಬಲದ ಸೆಳೆತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇಲ್ಲಿ ನಕ್ಷತ್ರಗಳು ಸಾಯುವ ಸಮಯದಲ್ಲಿ ಗಾಮಾ ಕಿರಣಗಳು ಸ್ಫೋಟಗೊಳ್ಳುವುದನ್ನು ಆಸ್ಟ್ರೋಸ್ಯಾಟ್‌ 2015ರಿಂದಲೂ ಅವಲೋಕಿಸುತ್ತಾ ಬಂದಿದೆ.

ಈ ಸ್ಫೋಟಗಳು ಎಷ್ಟು ಪ್ರಬಲವಾಗಿರುತ್ತವೆ ಎಂದರೆ ಇದನ್ನು ಮಿನಿ ಬಿಗ್‌ ಬ್ಯಾಂಗ್‌ಗಳು ಎಂದು ಕರೆಯಲಾಗುತ್ತದೆ. ಭಾರತದ ಬಾಹ್ಯಾಕಾಶ ನೌಕೆಯು ನಮ್ಮೆಲ್ಲರ ನಿರೀಕ್ಷೆಗೂ ಮೀರಿ ಕಾರ್ಯನಿರ್ವಹಿಸುತ್ತಿದೆ ಎಂದೂ ಭಾಲೇರಾವ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next