ಧಾರವಾಡ: ಪ್ರಾದೇಶಿಕ ವಿಜ್ಞಾನ ಕೇಂದ್ರ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಧಾರವಾಡ ಜಿಲ್ಲೆಯ ಪ್ರೌಢಶಾಲಾ ಶಿಕ್ಷಕರಿಗಾಗಿ ಸೋಮವಾರ ಖಗೋಳ ವಿದ್ಯಮಾನ ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಾಗಾರ ಉದ್ಘಾಟಿಸಿದ ಎಸ್‌ಡಿಎಂ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ|ಕೆ.ಗೋಪಿನಾಥ ಮಾತನಾಡಿ, ವಿಜ್ಞಾನದ ಸಂಶೋಧನೆಗಳು, ಆವಿಷ್ಕಾರಗಳನ್ನು ಇಂಜನಿಯರ್‌ಗಳು ತಂತ್ರಜ್ಞಾನದ ಮೂಲಕ ಜನರ ಉಪಯೋಗಕ್ಕೆ ಬರುವಂತಹ ಬದಲಾವಣೆಗಳನ್ನು ಮಾಡಿ ಉಪಯೋಗಿಸುವಂತೆ ಮಾಡುತ್ತಾರೆ. ವಿಜ್ಞಾನ-ತಂತ್ರಜ್ಞಾನಗಳು ಒಂದಕ್ಕೊಂದು ಬೆಸೆದ ಕೊಂಡಿಯಾಗಿವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉತ್ತಮ ಸಂಶೋಧನೆ ಮತ್ತು ಉತ್ತಮ ತಂತ್ರಜ್ಞಾನ ಕಲಿಕೆಯ ಕಡೆ ಗಮನ ಹರಿಸಿದರೆ ದೇಶಕ್ಕೆ ಉತ್ತಮ ಕೊಡುಗೆ ನೀಡಬಹುದಾಗಿದೆ ಎಂದರು.
ಧಾರವಾಡದ ಹಿಂದಿ ಪ್ರಚಾರ ಸಭಾದ ವಿಶೇಷ ಕಾರ್ಯದರ್ಶಿ ಡಾ|ಎಸ್.ಬಿ.ಹಿಂಚಿಗೇರಿ ಮಾತನಾಡಿ, ಶಿಕ್ಷಕರು ಮೋಜಿನ ಮೂಲಕ ಲವಲವಿಕೆಯಿಂದ ವಿದ್ಯಾರ್ಥಿಗಳಿಗೆ ವಿಜ್ಞಾನ ತಿಳಿಸಿ ಕೊಡುವುದರ ಜತೆಗೆ ಹೊಸ ಹೊಸ ಅವಿಷ್ಕಾರಗಳ ಬಗ್ಗೆ ಅವರಿಗೆ ಜ್ಞಾನ ನೀಡಿದರೆ ಅವರಿಗೆ ಶಾಲಾ ಮಟ್ಟದಲ್ಲಿಯೇ ವೈಜ್ಞಾನಿಕ ಮನೋಭಾವ ಹಾಗೂ ಸಂಶೋಧನೆ ಮಾಡಲು ಪ್ರೇರಣೆ ದೊರಕುತ್ತದೆ. ವಿಜ್ಞಾನ ಕೇಂದ್ರವು ಉತ್ತಮ ಪ್ರದರ್ಶಿಕೆಗಳು, ಚಟುವಟಿಕೆಗಳನ್ನು ಹೊಂದಿದ್ದು, ಶಿಕ್ಷಕರು ಇದರ ಸದುಪಯೋಗ ಪಡೆದು ಮಕ್ಕಳಿಗೆ ಉತ್ತಮ ಜ್ಞಾನ ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ|ವೀರಣ್ಣ ಡಿ. ಬೋಳಿಶೆಟ್ಟಿ ಮಾತನಾಡಿ, ಗಣಿತ ಮತ್ತು ವಿಜ್ಞಾನ ವಿಷಯಗಳು ತಂತ್ರಜ್ಞಾನ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ಹೊಂದಿರುವಂಥ ವಿಷಯಗಳು. ಅದರಲ್ಲೂ ತಂತ್ರಜ್ಞಾನದಲ್ಲಿ ರೇಖಾ ಗಣಿತದ ಮಹತ್ವ ಹೆಚ್ಚಿನದಾಗಿದ್ದು, ವಿಜ್ಞಾನ ಕೇಂದ್ರವು ಮೂಲ ಗಣಿತವನ್ನು ಮಕ್ಕಳಿಗೆ ಅರ್ಥ ಮಾಡಿಸುವ ನಿಟ್ಟಿನಲ್ಲಿ ಗಣಿತ ಪ್ರಯೋಗಾಲಯ ಸ್ಥಾಪಿಸುತ್ತಿದೆ ಎಂದರು.
ಸುರೇಶ ಅಂಗಡಿ, ಅತುಲ್ ಭಟ್ ಸೇರಿದಂತೆ ಹಲವರು ಇದ್ದರು. ವಿಶಾಲಾಕ್ಷಿ ಎಸ್.ಜೆ. ನಿರೂಪಿಸಿದರು. ಸಿ.ಎಫ್.ಚಂಡೂರ ವಂದಿಸಿದರು.