Advertisement

ಹುಟ್ಟಿನಿಂದ ಸಾವಿನವರೆಗೆ ಜ್ಯೋತಿಷ್ಯಶಾಸ್ತ್ರ ಅವಶ್ಯಕ

06:04 AM Jan 07, 2019 | |

ಮೈಸೂರು: ಹುಟ್ಟಿನಿಂದ ಸಾವಿನವರೆಗೆ ಜ್ಯೋತಿಷ್ಯಶಾಸ್ತ್ರ ಅವಶ್ಯಕವಾಗಿದ್ದು, ಇದರ ವಿಷಯ ಅರಿತು ನಡೆದರೆ, ಜೀವನದ ಅನೇಕ ಸಮಸ್ಯೆಗಳಿಗೆ ಪರಿಹಾರ ಮಾರ್ಗ ಸಿಗಲಿದೆ. ಪ್ರಾಚೀನ ಕಾಲದಲ್ಲಿ ಮನುಷ್ಯನು ಕಾನನದಿಂದ ಬದುಕನ್ನು ಕಟ್ಟಿಕೊಳ್ಳಲು ಆರಂಭಿಸಿದಾಗಿನಿಂದ ಜ್ಯೋತಿಷ್ಯ ಶಾಸ್ತ್ರವು ಆರಂಭವಾಗಿದೆ ಎಂದು ಕರ್ನಾಟಕ ಸಂಸ್ಕೃತ ವಿವಿ ಉಪಕುಲಸಚಿವ ವಿದ್ವಾನ್‌ ಪ್ರಕಾಶ್‌ ಪಾಗೋಜಿ ಹೇಳಿದರು.

Advertisement

ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕಾವೇರಿ ಸಭಾಂಗಣದಲ್ಲಿ ಮಾಯಕಾರ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ಭಾನುವಾರ ಆಯೋಜಿಸಿದ್ದ 2ನೇ ವೇದಾಂಗ ಜ್ಯೋತಿಷ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ತಪ್ಪು ಕಲ್ಪನೆ ಬೇಡ: ಜ್ಯೋತಿಷ್ಯಶಾಸ್ತ್ರದ ಮಹತ್ವವನ್ನು ಇಂದಿನ ಸಮಾಜಕ್ಕೆ ಸರಿಯಾದ ರೀತಿಯಲ್ಲಿ ಅರ್ಥಮಾಡಿಸುವ ಕಾರ್ಯವಾಗಬೇಕಿದೆ. ಸಮಾಜದಲ್ಲಿ ಜ್ಯೋತಿಷ್ಯದ ಬಗ್ಗೆ ತಪ್ಪು ಕಲ್ಪನೆಯಿದ್ದು, ಅದನ್ನು ಹೋಗಲಾಡಿಸಬೇಕು. ಕೆಲವರು ಜ್ಯೋತಿಷ್ಯ ಶಾಸ್ತ್ರವೆಂದರೆ ಮೂಗು ಮುರಿಯುತ್ತಾರೆ. ಅಂಥವರು ಜ್ಯೋತಿಷ್ಯದ ಬಗ್ಗೆ ಸರಿಯಾಗಿ ಮನನ ಮಾಡಿದರೆ ಅರಿವು ಮೂಡಲಿದೆ ಎಂದರು.

ವಾಸ್ತು, ವೃಕ್ಷ, ಆಯುರ್ವೇದಶಾಸ್ತ್ರ ಸೇರಿದಂತೆ ಅನೇಕ ಶಾಸ್ತ್ರಗಳನ್ನು ಕಾಣಬಹುದಾಗಿದೆ. ಸಂಸ್ಕೃತ ವಿವಿಯಿಂದ ಜ್ಯೋತಿಷ್ಯಶಾಸ್ತ್ರದಲ್ಲಿ 4 ಸಾವಿರ ಮಂದಿ ಶಿಕ್ಷಣ ಪಡೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಸ್ನಾತಕೋತ್ತರ ಅಧ್ಯಯನಕ್ಕೂ ಪೂರಕವಾದ ವಾತಾವರಣವನ್ನು ಸೃಷ್ಟಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು. 

ಜ್ಯೋತಿಷ್ಯಶಾಸ್ತ್ರವು ಅಗಾಧವಾಗಿದ್ದು, ಸತ್ಯದ ಬೆಳಕಾಗಿದೆ. ಪ್ರತಿಯೊಬ್ಬರಿಗೂ ತಮ್ಮ ಪೂರ್ವ ಜನ್ಮದ ಪಾಪ, ಪುಣ್ಯದ ಆಧಾರದ ಮೇಲೆ ಕರ್ಮಫ‌ಲ ದೊರೆತಿರುತ್ತದೆ. ಪಾಪ,ಪುಣ್ಯಗಳು, ಗ್ರಹಗತಿಗಳನ್ನು ಗಮನಿಸಿ ಸರಿದೂಗಿಸುವ ಕಾರ್ಯವನ್ನು ಜ್ಯೊತಿಷಿಗಳು ಮಾಡಬೇಕಿದೆ ಎಂದು ಪಾಗೋಜಿ ಹೇಳಿದರು.

Advertisement

ಜ್ಯೋತಿಷ್ಯಶಾಸ್ತ್ರಕ್ಕೆ ರಾಜರ ಕೊಡುಗೆ: ಶಾಶ್ವತಿ ಧಾರ್ಮಿಕ ಸೇವಾ ಸಮಿತಿ ಅಧ್ಯಕ್ಷ ಡಾ.ಭಾನುಪ್ರಕಾಶ್‌ ಶರ್ಮ ಮಾತನಾಡಿ, ಜ್ಯೋತಿಷ್ಯ ಬೆಳಕಿನ ರಹಸ್ಯವಾಗಿದೆ. ಸಮಸ್ಯೆಗಳು ಇದ್ದವರು ಮಾತ್ರವೇ ನಮ್ಮ ಬಳಿ ಬರುವುದು. ಹಾಗಾಗಿ ಎಲ್ಲರನ್ನೂ ನಮ್ಮವರೆಂದೆ ಭಾವಿಸಬೇಕು. ಅವರಿಗೆ ಒಳಿತಾಗುವಂತೆ ಮಾಡಬೇಕು. ಜ್ಯೋತಿಷ್ಯಶಾಸ್ತ್ರಕ್ಕೆ ಮಹಾರಾಜರ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು.

ವೇದಿಕೆ ಕಾರ್ಯಕ್ರಮದ ಬಳಿಕ ಸಂಜೆವರೆಗೂ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಣ ಕುರಿತು ಅಭೀಂದ್ರ ಜೈನ್‌, ಉದ್ಯೋಗ ಮತ್ತು ವೃತ್ತಿ ಕುರಿತು ರಾಮನ್‌ ಸುಪ್ರಜಾರಾಮ, ವಿವಾಹ ಕುರಿತು ಆಚಾರ್ಯ ಗುರುಪ್ರಕಾಶ್‌, ಸಂತಾನದ ಕುರಿತು ಡಾ.ವಿ.ಸುರೇಶ್‌, ಆರೋಗ್ಯದ ಕುರಿತು ಡಾ.ಪವನ್‌.ವಿ.ಜೋಶಿ, ಪರಿಹಾರ ಕುರಿತು ಮೂಗೂರು ಮಧು ದೀಕ್ಷಿತ್‌ ಮಾತನಾಡಿದರು.

ಸುತ್ತೂರು ಶಿವರಾತ್ರೀಶ್ವರ ಪಂಚಾಂಗ ಕರ್ತರಾದ ಡಾ.ಕೆ.ವಿ.ಪುಟ್ಟಹೊನ್ನಯ್ಯ, ಮಾಯಕಾರ ಗುರುಕುಲ ಸಂಸ್ಥಾಪಕ ಮೂಗೂರು ಮಧುದೀಕ್ಷಿತ್‌, ಕೆಎಸ್‌ಎಫ್ಎಎಐ ಪ್ರಧಾನ ಕಾರ್ಯದರ್ಶಿ ಬಿ.ಗಜೇಂದ್ರ ಇನ್ನಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next