Advertisement

ಸಿಂಗಾಪುರದಲ್ಲಿ ಜ್ಯೋತಿಷ

12:30 AM Jan 20, 2019 | |

ಚೀನೀ ರಾಶಿ ಚಕ್ರದಲ್ಲಿ ಪ್ರತಿ ವರ್ಷವನ್ನು ಬೇರೆ ಬೇರೆ ಪ್ರಾಣಿಗಳ ಹೆಸರಿನಿಂದಗುರುತಿಸಲಾಗಿದೆ. ಅವುಗಳೆಂದರೆ, ಇಲಿ, ಎತ್ತು, ಹುಲಿ, ಮೊಲ, ಡ್ರಾಗನ್‌, ಹಾವು, ಕುದುರೆ, ಕುರಿ, ಮಂಗ, ಹುಂಜ, ನಾಯಿ ಮತ್ತು ಹಂದಿ. 2019- ಹಂದಿಯ ವರ್ಷ ! 

Advertisement

ಕಳೆದ ಕೆಲ ತಿಂಗಳುಗಳ ಹಿಂದೆ ಯಾಕೋ ತಲೆ ಖಾಲಿ ಖಾಲಿ ಅನ್ನಿಸಿ ಬಿಟ್ಟಿತ್ತು; ಕೆಲಸ ಇಲ್ಲ, ಪುರುಸೊತ್ತೂ ಇಲ್ಲ ಅನ್ನುವ ಹಾಗೆ! ಫೇಸ್‌ಬುಕ್‌, ವಾಟ್ಸಾಪ್‌, ಯೂಟ್ಯೂಬ್‌ಗಳಲ್ಲಿ ಕಾಲ ಕಳೆಯೋದೇ ಅಧಿಕವಾಯಿತು. ತಲೆ ಶೂನ್ಯವಾದಾಗ ಒಳ್ಳೆಯ ವಿಚಾರಗಳು ಪ್ರವೇಶ ಆಗೋದು ಅಪರೂಪವೇ ಸರಿ. ಈ ಸಂದರ್ಭದಲ್ಲಿ ಥಟ್‌ ಅಂತ ಹೊಳೆದಿದ್ದು ಜೋತಿಷ್ಯ! ನಂಬಿಕೆಗಿಂತಲೂ ಕುತೂಹಲಕ್ಕಾಗಿ ರಾಶಿಭವಿಷ್ಯಗಳನ್ನು ಓದುವ ವಾಡಿಕೆ ನನ್ನಲ್ಲಿದೆ. ಎಷ್ಟಾದರೂ ಭೂತಾರಾಧನೆ, ನಾಗಾರಾಧನೆ ಮಾಡುವ ಊರಿನವರು ನಾವು. ಚಿಕ್ಕಂದಿನಿಂದಲೇ ಜೋತಿಷ್ಯದ ಬಗ್ಗೆ ಕುತೂಹಲ ಪಡುವುದು, “ಪ್ರಶ್ನೆ’ ಕೇಳುವುದು, ಜಾತಕ ಇಡುವುದು- ಇವನ್ನೆಲ್ಲ ಅನುಸರಿಸುತ್ತ ಬಂದವರು. 

ಯೂಟ್ಯೂಬ್‌ನಲ್ಲಿ ಜ್ಯೋತಿಷ ವೀಡಿಯೋಗಳನ್ನೆಲ್ಲ ವೀಕ್ಷಿಸಿದೆ. ಸಾಮಾನ್ಯ ಜನರನ್ನು ಹೇಗೆಲ್ಲ ವಂಚಿಸುತ್ತಾರೆ ಎಂಬುದು ಗೊತ್ತಾಯಿತು. ಅಂದ ಹಾಗೆ, ನನ್ನ ರಾಶಿ ಪಂಚಮ ದೆಸೆ ಶನಿಯಿಂದ ನಲುಗುತ್ತಿತ್ತು ! ಇದರ ಪ್ರಭಾವವೇ ಇರಬೇಕು- ಅನಗತ್ಯ ಸಾಮಾಜಿಕ ಜಾಲತಾಣಗಳಲ್ಲಿ ನನ್ನನ್ನು ತೊಡಗಿಸಿಕೊಳ್ಳುವಂತಾದದ್ದು. ಆದರೆ, ಈ ಹೊಸ ವರ್ಷ ನನ್ನ ರಾಶಿಯಲ್ಲಿ ಗುರು ಸಂಚಾರ ನಡೆಯಲಿದೆಯಂತೆ. ಜೊತೆಗೆ ಉತ್ತಮ ಫ‌ಲಿತಾಂಶದ ನಿರೀಕ್ಷೆಯಿದೆ ಎಂದೂ ತಿಳಿಸಲಾಗಿದೆ !

ಜ್ಯೋತಿಷ ಶಾಸ್ತ್ರ ಅನ್ನೋದು ನಮ್ಮಲ್ಲಿ ದೊಡ್ಡ ವ್ಯವಹಾರ.  ಸತ್ಯ ನುಡಿಯುವುದಕ್ಕಿಂತಲೂ ಮೋಸ ಮಾಡುವವರೇ ಅಧಿಕ. ನಿಜವಾಗಿ ಶ್ರಮವಹಿಸಿ ಜ್ಯೋತಿಷ ಕಲಿತವರನ್ನು ಕೂಡ ಸಂಶಯದಿಂದ ನೋಡುವ ಕಾಲ ಇದಾಗಿದೆ.

ನಮ್ಮನ್ನೂ ಮೀರಿಸಬಲ್ಲರು ಚೀನಿಯರು !
ನಾನು ಈಗ ಇರುವ ಸಿಂಗಾಪುರ ಇದಕ್ಕಿಂತ ಭಿನ್ನ. ಜೋತಿಷ್ಯ ವಿಚಾರದಲ್ಲಿ ನಾವೇ ಹುಷಾರು ತಿಳಿದರೆ, ಈ ಚೀನೀಯರು ನಮ್ಮನ್ನೇ ಮೀರಿಸಬಲ್ಲರು. ಚೀನೀ ರಾಶಿಚಕ್ರವನ್ನು 12 ಭಾಗಗಳಾಗಿ ವಿಂಗಡಿಸಲಾಗಿದೆ. ಅಲ್ಲದೆ ಲೋಹ, ನೀರು, ಮರ, ಬೆಂಕಿ, ಮತ್ತು ಭೂಮಿ ಎಂಬುದಾಗಿ ಐದು ಅಂಶಗಳಿಂದ ಗುರುತಿಸಲಾಗುತ್ತದೆ. ಚೀನೀ ರಾಶಿ ಚಕ್ರದಲ್ಲಿ ಪ್ರತಿ ವರ್ಷವನ್ನು ಬೇರೆ ಬೇರೆ ಪ್ರಾಣಿಗಳ ಹೆಸರಿನಿಂದ ನಿಗದಿಪಡಿಸಲಾಗಿದೆ. ಅವುಗಳೆಂದರೆ ಇಲಿ, ಎತ್ತು, ಹುಲಿ, ಮೊಲ, ಡ್ರ್ಯಾಗನ್‌, ಹಾವು, ಕುದುರೆ, ಕುರಿ, ಮಂಗ, ಹುಂಜ, ನಾಯಿ ಮತ್ತು ಹಂದಿ. ಪ್ರತಿ ಪ್ರಾಣಿಗಳಿಗೆ ವಿವಿಧ ಗುಣಲಕ್ಷಣಗಳನ್ನು ನೀಡಲಾಗುತ್ತದೆ. 12 ರಾಶಿಗಳಿಗೆ ಐದು ಅಂಶಗಳನ್ನು ನಿಯೋಜಿಸುವ ಮೂಲಕ 60 ವರ್ಷಗಳ ಚಕ್ರದಲ್ಲಿ 60 ವಿವಿಧ ಸಂಯೋಜನೆಗಳನ್ನು ರೂಪಿಸಲಾಗಿದೆ. 

Advertisement

ನಮ್ಮಲ್ಲಿ ಮಗು ಹುಟ್ಟಿದ ದಿನ-ಗಳಿಗೆ ನೋಡಿ ರಾಶಿ- ನಕ್ಷತ್ರಗಳನ್ನು ಹೇಗೆ ಹೊಂದಾಣಿಕೆ ಮಾಡುತ್ತಾರೋ ಹಾಗೆ ಚೀನೀಯರು, ಈ ಪ್ರಾಣಿಗಳನ್ನು ಜನರ ಹುಟ್ಟಿದ ವರ್ಷಕ್ಕೆ ಹೋಲಿಸಿ ತುಲನೆ ಮಾಡುತ್ತಾರೆ. ಆಯಾ ಪ್ರಾಣಿಗಳ ಸ್ವಭಾವವನ್ನು ವಿವರಿಸುತ್ತ, ಅದನ್ನೇ ಮನುಷ್ಯನ ವ್ಯಕ್ತಿತ್ವಕ್ಕೂ ಬಣ್ಣಿಸುತ್ತಾರೆ. 
 
ಚೀನೀ ರಾಶಿಚಕ್ರದಲ್ಲಿ ಯಿನ್‌ ಮತ್ತು ಯಾಂಗ್‌ ಎಂಬ ಪರಿಕಲ್ಪನೆಗಳನ್ನು ಕಾಣಬಹುದು. ಪ್ರತಿಯೊಂದು ಪ್ರಾಣಿಗಳಿಗೆ ವಿರೋಧಿ ಶಕ್ತಿಗಳನ್ನು ತಿಳಿಸುವ ಹಾಗೂ ಬೆಸ ಸಂಖ್ಯೆಯ ವರ್ಷಗಳಿಗೆ ಯಿನ್‌ ಎಂದು ಕರೆಯಲಾಗುತ್ತದೆ. ಸಮ ಸಂಖ್ಯೆಯ ವರ್ಷಗಳನ್ನು ಯಾಂಗ್‌ ಎಂದು ತಿಳಿಸಲಾಗಿದೆ. ಯಿನ್‌ನಲ್ಲಿ ಭೂಮಿ, ಸ್ತ್ರೀ, ಕತ್ತಲೆ ಮತ್ತು ನಿಷ್ಕ್ರಿಯ ಎಂಬ ವಿಚಾರಗಳು ಒಳಗೊಂಡರೆ, ಯಾಂಗ್‌ ಅನ್ನು ಪುರುಷ, ಸ್ವರ್ಗ, ಬೆಳಕು ಮತ್ತು ಸಕ್ರಿಯ ಎಂದು ಗ್ರಹಿಸಲಾಗಿದೆ. 

ಚೀನೀ ಜ್ಯೋತಿಷ ಶಾಸ್ತ್ರದ ಇತಿಹಾಸದ ಬಗ್ಗೆ ಅನೇಕ ಕಥೆಗಳಿವೆ. ಅವುಗಳಲ್ಲಿ ಕುತೂಹಲ ಹುಟ್ಟಿಸುವ ಒಂದು ಕಥೆ ಹೀಗಿದೆ: ಚೀನಿ ಕ್ಯಾಲೆಂಡರ್‌ ನಲ್ಲಿ ಗುರುತಿಸಿಕೊಳ್ಳುವ ಸಲುವಾಗಿ ಈ 12 ಪ್ರಾಣಿಗಳ ನಡುವೆ ಪೈಪೋಟಿಯೇ ನಡೆದು ಹೋಯಿತಂತೆ. ಇದನ್ನು ಮನಗಂಡ ಚೀನಿ ದೇವರುಗಳು, ನದಿಯ ಬದಿಯುದ್ದಕ್ಕೂ ಓಟದ ಪಂದ್ಯವನ್ನು ಏರ್ಪಡಿಸಿದರಂತೆ. ಕೊನೆಗೆ ಈ ಕ್ಯಾಲೆಂಡರ್‌ನಲ್ಲಿ ನಿಯೋಜಿಸಲ್ಪಟ್ಟ ಕ್ರಮದಂತೆ, ಆ ಪ್ರಾಣಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಓಟವನ್ನು ಪೂರ್ಣಗೊಳಿಸಿದ್ದವಂತೆ. ಪರಿಣಾಮವಾಗಿ ಇಲಿ ಪ್ರಥಮ ಸ್ಥಾನ ಪಡೆದರೆ, ಹಂದಿಗೆ ಕೊನೆಯ ಸ್ಥಾನ ಲಭಿಸಿತಂತೆ!

ಇನ್ನೊಂದು ವಿಚಾರವಿದೆ. ಈ ಪ್ರಾಣಿಗಳ ಗುಣಲಕ್ಷಣಗಳಿಗೆ ಹಾಗೂ ವರ್ಷಗಳಿಗೆ ಸರಿಯಾಗಿ ಅನೇಕ ವಿವಾಹಿತ ಮಹಿಳೆಯರು, ತಾಯಂದಿರಾಗುವ ಹಾಗೂ ತಮ್ಮ ಮಗುವಿನ ಜನನದ ಬಗ್ಗೆ ಪೂರ್ವಯೋಜನೆಯನ್ನು ರೂಪಿಸುತ್ತಾರೆ. ಈ ರಾಶಿ ಚಕ್ರಗಳ ಅನ್ವಯ ಹುಟ್ಟಿದ ಮಗುವಿನ ಮೂಲಕ, ಕುಟುಂಬ ಸದಸ್ಯರ ಜೊತೆಗಿನ ಹೊಂದಾಣಿಕೆ ಹಾಗೂ ಭವಿಷ್ಯದ ಅಭಿವೃದ್ದಿಯನ್ನು ನಿರ್ಧರಿಸಲಾಗುತ್ತದೆ. ಚೀನೀಯರಲ್ಲಿ ಇದೇನು ಹೊಸದಲ್ಲ. ತಲಾತಲಾಂತರಗಳಿಂದ ನಡೆಯುತ್ತ ಬರುತ್ತಿರುವ ಪದ್ಧತಿ. ಈ 12 ಪ್ರಾಣಿಗಳಲ್ಲಿ ಡ್ರ್ಯಾಗನ್‌ ಅದೃಷ್ಟದ ಪ್ರಾಣಿಯೆಂದು ಗುರುತಿಸಲಾಗುತ್ತದೆ. ಹೀಗಾಗಿ, ಡ್ರ್ಯಾಗನ್‌ ಪ್ರಾಣಿಯ ವರ್ಷದಲ್ಲಿ ಸಿಸೇರಿಯನ್‌ ಡೆಲಿವರಿಗಳ ಸಂಖ್ಯೆ ಉತ್ತುಂಗದಲ್ಲಿ ಇರುತ್ತದೆ. ಹುಲಿಯ ವರ್ಷ ಹಾಗೂ ಅದರ ವ್ಯಕ್ತಿತ್ವದ ಬಗ್ಗೆ ಈ ಚೀನೀಯರಿಗೆ ಅಷ್ಟಕಷ್ಟೆ. ಶಾಂತ ಚಿತ್ತರು ಎಂದು ಕರೆಸಿಕೊಳ್ಳುವ ಇವರಿಗೆ, ಹುಲಿಯ ಕ್ರೋಧ ಸ್ವಭಾವ ಇಷ್ಟವಾಗುವುದಿಲ್ಲವಂತೆ. ಈ ವರ್ಷದಲ್ಲಿ ಜನನ ಪ್ರಮಾಣದಲ್ಲೂ ಇಳಿಕೆ ಇರುತ್ತದೆ. ವ್ಯಾಪಾರಿಗಳು ಕೂಡ ರಾಶಿ ಚಕ್ರ ಸೂಚ್ಯಂಕದ ಪ್ರಕಾರ ತಮ್ಮ ವ್ಯಾಪಾರವನ್ನು ಮುಂದುವರಿಸುತ್ತಾರೆ. ತಾವು ಕೈ ಹಾಕುವ ಯಾವುದೇ ಕ್ಷೇತ್ರಗಳಿರಲಿ, ಅವುಗಳಲ್ಲಿನ ಅಭಿವೃದ್ಧಿ ಹಾಗೂ ಯಶಸ್ಸು ಈ ರಾಶಿಚಕ್ರಗಳಿಗೆ ಅವಲಂಬಿತವಾಗಿರುತ್ತದೆ ಎಂಬುದು ಚೀನೀಯರ ನಂಬಿಕೆ. 
  
ಸಿಂಗಾಪುರದ ಕಟ್ಟಡಗಳ ನಿರ್ಮಾಣ ಮತ್ತು ವಾಸ್ತುವಿನ್ಯಾಸ ಕೂಡ ಇವಕ್ಕೆ ಹೊರತಾಗಿಲ್ಲ. ಸಿಂಗಾಪುರದ ಮರೀನಾ ಬೇ, ಚಾಂಗಿ ವಿಮಾನ ನಿಲ್ದಾಣ, ಸಿಂಹದ ಮುಖ ಇರುವ ಪ್ರತಿಮೆ, ಮೆರ್ಲಿಯನ್‌  ಮ್ಯೂಸಿಯಂಗಳು- ಹೀಗೆ ಅನೇಕ ಭೌತಿಕ ರಚನೆಗಳು ಚೀನಿಯರ ಫೆಂಗ್‌ ಶುಯಿ ಶಾಸ್ತ್ರದ ಪ್ರಕಾರವಾಗಿ ನಿರ್ಮಾಣಗೊಂಡಿವೆ. 

ಫೆಂಗ್‌ ಶುಯಿ ಅಕ್ಷರಶಃ ಗಾಳಿ ಮತ್ತು ನೀರು ಎಂದರ್ಥ. ಜ್ಯೋತಿಷ್ಯ, ಭೌಗೋಳಿಕತೆ, ಪರಿಸರ ವಿಜ್ಞಾನ, ಮನೋವಿಜ್ಞಾನ, ವಾಸ್ತುಶಿಲ್ಪ ಮತ್ತು ಸೌಂದರ್ಯಶಾಸ್ತ್ರದಂತಹ ವಿವಿಧ ಕ್ಷೇತ್ರಗಳನ್ನು ಸಮನ್ವಯವಾಗಿ ಗ್ರಹಿಸಿ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ. ಸಿಂಗಾಪುರದಲ್ಲಿ ಫೆಂಗ್‌ ಶುಯಿ-1 ಅನ್ನು ಅಭ್ಯಸಿಸುವ ವೃತ್ತಿಪರ ಜಿಯೋಮಾನ್ಸರ್ಸ್‌ಗಳ ಸಮುದಾಯವನ್ನು ಕಾಣಬಹುದು.
 
ಇಷ್ಟು ಬಲವಾಗಿರುವ ಜೋತಿಷ್ಯ ಶಾಸ್ತ್ರದ ಬಗ್ಗೆ ದೇಶದ ಮುಕ್ಕಾಲು ಪಾಲು ಚೀನೀಯರು ನಂಬಿಕೆ ಉಳ್ಳವರಾಗಿದ್ದಾರೆ. ಮೂಢನಂಬಿಕೆ ಅನ್ನುವವರು ಇಲ್ಲವೆಂದಿಲ್ಲ- ನಮ್ಮ ದೇಶದ ಹಾಗೆ.  
    
ಹುಟ್ಟಿದ ವರ್ಷವನ್ನು ಈ ಪ್ರಾಣಿಗಳ ವರ್ಷಗಳಲ್ಲಿ ಹೊಂದಿಸಿರುವ ಕಾರಣ ಚೀನಿ ರಾಶಿಯ ಮಾಹಿತಿಯನ್ನು ಅರಿಯಲು ಕಷ್ಟವೇನೂ ಆಗುವುದಿಲ್ಲ. ಮಾಹಿತಿಯನ್ನು ಕೆದಕಿದಾಗ ನನ್ನ ರಾಶಿಚಕ್ರದ ಪ್ರಾಣಿ ಹೆಸರು ಇಲಿ ಎಂದು ತಿಳಿಯಿತು ! ಇಲಿ ವಂಶದವರು ಸ್ಪರ್ಧೆಯಲ್ಲಿ ಗೆದ್ದವರು! ಅಂದ ಹಾಗೆ ಈ ವರ್ಷ 2019, ಚೀನೀಯರಿಗೆ ಯಿಯರ್‌ಆಫ್ ದ ಪಿಗ್‌: ಹಂದಿಯ ವರ್ಷ. ಇಲಿ ಹಾಗೂ ಹಂದಿ ತುಂಬಾ ಕ್ಲೋಸ್‌ ಫ್ರೆಂಡ್ಸ್‌! ಹಾಗಾಗಿ, ಇಲಿಗೆ ಈ ವರ್ಷ ಮುಟ್ಟಿದ್ದೆಲ್ಲ ಬಂಗಾರ. 

Advertisement

Udayavani is now on Telegram. Click here to join our channel and stay updated with the latest news.

Next