ಬೆಂಗಳೂರು: ಮಳೆಯಿಂದ ತೊಂದರೆಗೆ ಸಿಲುಕಿರುವ ಕೊಡಗಿನ ಸಂತ್ರಸ್ತರ ನೆರವಿಗೆ ನಗರದ ವಿವಿಧ ಸಂಘ ಸಂಸ್ಥೆಗಳು ಹಾಗೂ ಸಂಘಟನೆಗಳು ಸ್ಪಂದಿಸಿದ್ದು, ಅಗತ್ಯವಿರುವ ವಸ್ತುಗಳನ್ನು ತಲುಪಿಸುವ ಕಾರ್ಯ ಮಾಡುತ್ತಿವೆ. ಖಾಸಗಿ ಕಂಪನಿಗಳು, ವಿವಿಧ ಸಂಘ ಸಂಸ್ಥೆಗಳು ಜತೆಗೂಡಿ ಹಾಲು, ಹಾಲಿನ ಪುಡಿ, ಬ್ಲಾಂಕೆಟ್, ಉಡುಪುಗಳು ಸೇರಿದಂತೆ ಹಲವು ವಸ್ತುಗಳನ್ನು ಕಳುಹಿಸುತ್ತಿದ್ದಾರೆ.
ಬೆಂಗಳೂರು ಪ್ರವಾಸಿ ವಾಹನ ಮಾಲೀಕರ ಸಂಘ ಸಂತ್ರಸ್ತರಿಗೆ ನೆರವು ಕೇಂದ್ರ ಸಹ ತೆರೆದಿದ್ದು ಬೆಳಗ್ಗೆಯಿಂದ ನೂರಾರು ಮಂದಿ ಅಗತ್ಯ ವಸ್ತುಗಳನ್ನು ನೀಡಿದ್ದಾರೆ. 300ಕ್ಕೂ ಅಧಿಕ ಅಕ್ಕಿ ಮೂಟೆ, 700ಕ್ಕೂ ಅಧಿಕ ಬ್ಲಾಂಕೆಟ್ ಮತ್ತು ಬಟ್ಟೆಗಳನ್ನು ಹಾಗೂ 700 ಲೀ. ಗುಡ್ ಲೈಫ್ ಹಾಲು ಮತ್ತು ಹಾಲಿನ ಪುಡಿ ಸಂಗ್ರಹಿಸಲಾಗಿದೆ. ಹಲವರು ಹಣ ದೇಣಿಗೆ ನೀಡಿದ್ದು, ಅದರಲ್ಲಿ ದಿನಸಿ ಪದಾರ್ಥ ಖರೀದಿಸಲಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು.
ನೆರವು ಕೇಂದ್ರದಲ್ಲಿ ಸಂಗ್ರಹವಾದ ವಸ್ತುಗಳನ್ನು ಸಂಘದ ವಾಹನಗಳ ಮೂಲಕ ಶನಿವಾರ ಸಂಜೆ ಕೊಡಗಿಗೆ ಕಳುಹಿಸಿ, ಜಿಲ್ಲಾಧಿಕಾರಿಗಳ ಕಚೇರಿ ಮೂಲಕ ಸಂತ್ರಸ್ತರಿಗೆ ತಲುಪಿಸಲಾಗುವುದು. ಕೊಡಗಿನ ವಾಹನ ಮಾಲೀಕರ ಸಂಘ ಸಹಾಯ ಬೇಕೆಂದು ನಮ್ಮನ್ನು ಸಂಪರ್ಕಿಸಿದರೆ ಅವರ ನೆರವಿಗೂ ನಾವು ಸಿದ್ಧರಿದ್ದೇವೆ ಎಂದು ಬೆಂಗಳೂರು ಪ್ರವಾಸಿ ವಾಹನ ಮಾಲೀಕರ ಸಂಘದ ಅಧ್ಯಕ್ಷ ಕೆ.ರಾಧಾಕೃಷ್ಣ ಹೊಳ್ಳ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದ ಮೂಲಕ ಸಂತ್ರಸ್ತರ ನೆರವಿಗೆ ಬನ್ನಿ ಎಂಬ ಮನವಿಗೆ ಸ್ಪಂದನೆ ದೊರೆತಿದ್ದು, ರಾಜೇಶ್ ರಾಜಘಟ್ಟ ಅವರು ತಮ್ಮ ಸ್ನೇಹಿತರ ಮೂಲಕ ಸ್ವೆಟರ್, ಜರ್ಕಿನ್, ಬ್ಲಾಂಕೆಟ್‌ಗಳನ್ನು ಸಂಗ್ರಹಿಸಿ ಕೊಡಗಿಗೆ ತಲುಪಿಸಲು ವ್ಯವಸ್ಥೆ ಮಾಡಿದಾರೆ. “ಕೊಡಗು ಮುಳುಗುತ್ತಿದೆ’ ಶೀರ್ಷಿಕೆಯಡಿ ಸಾಗರದಿಂದ ಗೆಳೆಯರ ಬಳಗ ಸಹ ಸಹಾಯಕ್ಕೆ ಮುಂದಾಗಿದೆ. ಔಷಧ, ಬಟ್ಟೆ, ಲೈಫ್ ಜಾಕೆಟ್, ಟೆಂಟ್‌ಗಳನ್ನು ನೀಡುತ್ತಿದೆ.
ತಲುಪಿಸುವುದೇ ಸಾಹಸ: ಮಡಿಕೇರಿ ಹಾಗೂ ಕೊಡಗಿನ ಸಂತ್ರಸ್ತರ ನೆರವಿಗೆ ಇಡೀ ಕರ್ನಾಟಕವೇ ಧಾವಿಸಿದೆ. ಆದರೆ ಸಂಪರ್ಕ ವ್ಯವಸ್ಥೆ ಕಡಿತಗೊಂಡಿರುವ ಕಾರಣ ಸಂತ್ರಸ್ತರು ಇರುವ ಸ್ಥಳಕ್ಕೆ ಪರಿಹಾರ ಸಾಮಗ್ರಿ ಕೊಂಡೊಯ್ಯಲು ಸಾಧ್ಯವಾಗುತ್ತಿಲ್ಲ.
ಶಿಬಿರ, ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವವರಿಗೆ ಕೊರತೆಯಾಗದಷ್ಟು ಅಗತ್ಯ ವಸ್ತುಗಳು ನಮ್ಮ ಬಳಿ ಇವೆ. ಆದರೆ ಪ್ರಾಣಾಪಾಯದಲ್ಲಿರುವ ಹಾಗೂ ನೆರವಿಗಾಗಿ ಮನವಿ ಮಾಡುತ್ತಿರುವ ಮಂದಿಗೆ ನಮ್ಮಿಂದ ಯಾವುದೇ ಸಹಾಯ ಮಾಡಲಾಗುತ್ತಿಲ್ಲ ಎಂದು ಮಡಿಕೇರಿ ಸೇವಾ ಭಾರತಿಯ ಮಹೇಶ್ ಬೇಸರ ವ್ಯಕ್ತಪಡಿಸಿದ್ದಾರೆ.