Advertisement

ಪೋಷಕರನ್ನು ಕಳೆದುಕೊಂಡ ಮಕ್ಕಳ ಶಿಕ್ಷಣಕ್ಕೆ ನೆರವು

06:52 PM May 22, 2021 | Team Udayavani |

ಕಲಬುರಗಿ: ಕೊರೊನಾ ಹಾವಳಿಯಿಂದಾಗಿ ಸಾವಿರಾರು ಖಾಸಗಿ ಶಾಲೆಗಳು ಸಂಕಷ್ಟಕ್ಕೆ ಸಿಲುಕಿವೆ. ಇದರ ನಡುವೆಯೂ ನಗರದ ಖಾಸಗಿ ಶಾಲೆಯೊಂದು ಕೊರೊನಾ ಸೋಂಕಿ ನಿಂದ ಪೋಷಕರನ್ನು ಕಳೆದುಕೊಂಡ 50 ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಸಂಕಲ್ಪ ಮಾಡಿದೆ.

Advertisement

ಕಳೆದ ಒಂದು ವರ್ಷದಿಂದ ಕೊರೊನಾ ಸೋಂಕಿಗೆ ಕುಟುಂಬದ ಆಧಾರ ಸ್ತಂಬ ದಂತಿದ್ದ ಅನೇಕರು ಬಲಿಯಾಗಿದ್ದಾರೆ. ಬಡ ಮತ್ತು ಕಡು ಬಡತನದಿಂದ ಜೀವನ ಸಾಗಿಸುವ ಕುಟುಂಬಗಳಲ್ಲಿ ದುಡಿಯುವ ಸದಸ್ಯರೇ ಕೊರೊನಾದಿಂದ ಮೃತಪಟ್ಟಿದ್ದಾರೆ. ಇದರಿಂದ ಹಲವು ಕುಟುಂಬಗಳು ಆರ್ಥಿಕ ವಾಗಿ ಜರ್ಜಿರಿತವಾಗಿವೆ. ಅಪ್ಪ, ಅಮ್ಮನನ್ನು ಕಳೆದುಕೊಂಡು ಸಣ್ಣ ಮಕ್ಕಳು ಅನಾಥರಾಗಿ ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ. ಇಂತಹ ಮಕ್ಕಳ ನೆರವಿಗೆ ಬರಲು ಇಲ್ಲಿನ ಇನ್ನೊವೇಟಿವ್‌ ಇಂಟರ್‌ನ್ಯಾಶನಲ್‌ ಸ್ಕೂಲ್‌ ಮುಂದಾಗಿದೆ.

ಕೊರೊನಾ ಸೋಂಕಿಗೆ ಮನೆಯ ಯಜಮಾನನಾದ ತಂದೆ ಅಥವಾ ತಾಯಿ, ಇಲ್ಲವೇ ಆ ಕುಟುಂಬಕ್ಕೆ ಆರ್ಥಿಕ ಶಕ್ತಿಯಾಗಿದ್ದ ಮನೆಯ ಸದಸ್ಯ ಮೃತಪಟ್ಟಿದ್ದರೆ, ಅಂತಹ ಕುಟುಂಬಗಳ 50 ಮಕ್ಕಳಿಗೆ ಎಲ್‌ಕೆಜಿಯಿಂದ ಎಸ್ಸೆಸ್ಸೆಲ್ಸಿ ವರೆಗೆ ಯಾವುದೇ ಡೋನೆಷನ್‌, ಶುಲ್ಕ ಪಡೆಯದೇ ಶಿಕ್ಷಣ ಕೊಡಲು ನಿರ್ಧರಿಸಲಾಗಿದೆ ಎನ್ನುತ್ತಾರೆ ಶಾಲೆಯ ಸಂಸ್ಥಾಪಕ ಮುಖ್ಯಸ್ಥ ಜಮೀರ್‌ ಅಹ್ಮದ್‌.

ಮೊದಲ ಅಲೆಗಿಂತ ಕೊರೊನಾ ಎರಡನೇ ಅಲೆ ಭೀಕರವಾಗಿದೆ. ಕೆಲ ಮಕ್ಕಳು ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದಾರೆ. ಅವರ ಶಿಕ್ಷಣಕ್ಕೆ ಆಸರೆಯಾಗಿದ್ದವರೂ ಮೃತಪಟ್ಟಿದ್ದಾರೆ. ಇದರಿಂದ ಮಕ್ಕಳ ಭವಿಷ್ಯದ ಮೇಲೆ ಕರಿ ನೆರಳು ಬಿದ್ದಂತೆ ಆಗಿದೆ. ಇಂತಹ ಮಕ್ಕಳು ಈಗಾಗಲೇ ಯಾವುದೇ ಶಾಲೆಯಲ್ಲಿ ಓದುತ್ತಿದ್ದರೂ, ಅವರನ್ನು ದಾಖಲು ಮಾಡಿ ಕೊಳ್ಳಲಾಗುತ್ತದೆ. ಅವರು ಎಲ್‌ಕೆಜಿಯಿಂದ ಎಸ್ಸೆಸ್ಸೆಲ್ಸಿಯವರೆಗೆ ಯಾವುದೇ ತರಗತಿಗೂ
ಬಂದು ದಾಖಲಾಗಬಹುದು. ಇದಕ್ಕೆ ಜೂನ್‌ 15 ಕೊನೆಯ ದಿನಾಂಕ ನಿಗದಿ ಮಾಡಲಾಗಿದೆ ಎಂದು “ಉದಯವಾಣಿ’ಗೆ ತಿಳಿಸಿದ್ದಾರೆ.

ಎನ್‌ಜಿಒಗೆ ಪರಿಶೀಲನೆ ಹೊಣೆ: ಈ ಸೌಲಭ್ಯ ಅರ್ಹ ಮಕ್ಕಳಿಗೆ ತಲುಪಬೇಕು. ದುರುಪಯೋಗ ಆಗಬಾರದು ಎನ್ನುವ ಉದ್ದೇಶದಿಂದ ಮಕ್ಕಳ ಮತ್ತು ಅವರ ಕುಟುಂಬದ ಪೂರ್ವ ಪರಿಶೀಲನೆ ಹೊಣೆ ಯನ್ನು ಗುಲಬರ್ಗಾ ಎನ್‌ಜಿಒಗಳ ಫೆಡರೇಷನ್‌ ಹೊತ್ತುಕೊಂಡಿದೆ. ಕೊರೊನಾದಿಂದ ನಿಜವಾಗಿಯೂ ಸಂಕಷ್ಟಕ್ಕೆ ಸಿಲುಕಿರುವ ಮಕ್ಕಳು ಈ ಫೆಡರೇಷನ್‌ ಮೂಲಕ ಶಾಲೆಗೆ ದಾಖಲಾಗಬೇಕು.ಕೊರೊನಾ ಎರಡನೇ ಅಲೆಗೆ ಮೃತ ಪಟ್ಟವರ ಮರಣ ಪ್ರಮಾಣಪತ್ರ ಕಡ್ಡಾಯ.

Advertisement

ಅಲ್ಲದೇ ಮೃತರು ಆ ಕುಟುಂಬದ ಆಧಾರ ಸ್ತಂಬವಾಗಿರಬೇಕು. ಇಂತಹ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ದೇಶವನ್ನು ಗಮನದಲ್ಲಿ ಇಟ್ಟುಕೊಂಡು ಮಕ್ಕಳನ್ನು ಗುರುತಿಸಲು ತೀರ್ಮಾನಿಸ ಲಾಗಿದೆ ಎಂದು ಎನ್‌ಜಿಒ ಫೆಡರೇಶನ್‌ನ ಪ್ರಮುಖ ಮತ್ತು ಮಾನವ ಹಕ್ಕುಗಳ ಹೋರಾಟಗಾರ ರಿಯಾಜ್‌ ಖತೀಬ್‌ ತಿಳಿಸಿದ್ದಾರೆ.

ಓದುತ್ತಿದ್ದಾರೆ 200 ಅನಾಥ ಮಕ್ಕಳು
2009ರಿಂದ ಈ ಇನ್ನೊವೇಟಿವ್‌ ಇಂಟರ್‌ನ್ಯಾಶನಲ್‌ ಸ್ಕೂಲ್‌ ಆರಂಭವಾಗಿದೆ. ಎಲ್‌ಕೆಜಿಯಿಂದ ಎಸ್ಸೆಸ್ಸೆಲ್ಸಿಯವರೆಗೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತದೆ. ಪ್ರತಿ ವರ್ಷ ಅಂದಾಜು 350 ಹೊಸ ಮಕ್ಕಳು ದಾಖಲಾಗುತ್ತಾರೆ. ಸದ್ಯ ಒಟ್ಟಾರೆ 1,400 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಶಾಲೆ ಆರಂಭದಿಂದಲೂ ಅನಾಥ ಮಕ್ಕಳ ಬಗ್ಗೆ ಆಡಳಿತ ಮಂಡಳಿ ಕಾಳಜಿ ಹೊಂದಿದ್ದು, ಈಗಾಗಲೇ 200 ಅನಾಥ ಮಕ್ಕಳು ಶಾಲೆಯಲ್ಲಿ ಓದುತ್ತಿದ್ದಾರೆ. ಇವರಿಗೆ ಅರ್ಧದಷ್ಟು ಶುಲ್ಕ ಮಾತ್ರ ಪಡೆಯುತ್ತಿದ್ದೇವೆ ಎಂದು ಜಮೀರ್‌ ಅಹ್ಮದ್‌ ತಿಳಿಸಿದ್ದಾರೆ. ಶಾಲೆಯಲ್ಲಿ 52 ಮಂದಿ ಶಿಕ್ಷಕರು, ಎಂಟು ಜನ ಶಿಕ್ಷಕೇತರು, 10 ಜನ ವಾಹನ ಚಾಲಕರು ಇದ್ದಾರೆ. ಕೊರೊನಾ ಸಂಕಷ್ಟದಲ್ಲೂ ಎಲ್ಲರಿಗೂ ವೇತನ ಪಾವತಿಸಲಾಗುತ್ತಿದೆ. ಆನ್‌ಲೈನ್‌ ತರಗತಿ ಸೇರಿ ಇತರ ಕರ್ತವ್ಯದಲ್ಲಿದ್ದವರಿಗೆ ಶೇ.70ರಷ್ಟು ಮತ್ತು ಉಳಿದವರಿಗೆ ಶೇ.50ರಷ್ಟು ಸಂಬಳ ಪಾವತಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಕೊರೊನಾದಿಂದ ಪಾಲಕರನ್ನು ಕಳೆದಕೊಂಡ 50 ಮಕ್ಕಳು ನಮ್ಮ ಶಾಲೆಯ ಯಾವುದೇ ತರಗತಿಗೂ ದಾಖಲಾಗಬಹುದು. ಎಲ್‌ಕೆಜಿಯಿಂದ ದಾಖಲಾದರೂ ಎಸ್ಸೆಸ್ಸೆಲ್ಸಿಯವರೆಗೆ ಯಾವುದೇ ಶುಲ್ಕ ಪಡೆಯುವುದಿಲ್ಲ. ಎಲ್ಲರಿಗೂ ಶಿಕ್ಷಣದ ಮೌಲ್ಯ ಗೊತ್ತಾಗಬೇಕೆಂಬ ಕಾರಣ ಪಠ್ಯ-ಪುಸ್ತಕದ ವೆಚ್ಚ ಮಾತ್ರ ಪಡೆಯಲು ನಿರ್ಧರಿಸಲಾಗಿದೆ.
ಜಮೀರ್‌ ಅಹ್ಮದ್‌,
ಸಂಸ್ಥಾಪಕ ಮುಖ್ಯಸ್ಥ

*ರಂಗಪ್ಪ ಗಧಾರ

Advertisement

Udayavani is now on Telegram. Click here to join our channel and stay updated with the latest news.

Next