ತುಮಕೂರು: ನಗರದ ಅತ್ಯಂತ ಪುರಾತನ ದೇವತೆಯಾಗಿರುವ ಕೋಟೆ ಗ್ರಾಮದೇವತೆಗೆ ಸುಮಾರು 400 ವರ್ಷಗಳ ಇತಿಹಾಸವಿದ್ದು, ತುಮಕೂರು ಗ್ರಾಮ ರಕ್ಷಿಸುತ್ತಿರುವ ಗ್ರಾಮ ದೇವತೆ ದೇವಾಲಯದ ರಾಜಗೋಪುರ ನಿರ್ಮಾಣಕ್ಕೆ ನೆರವು ನೀಡುವುದಾಗಿ ಸಂಸದ ಜಿ.ಎಸ್. ಬಸವರಾಜ್ ತಿಳಿಸಿದರು.
ನಗರದ ಪುರಾತನ ಕಾಲದ ಎಮ್ಮೆಕೇರಿ, ಪಾಂಡುರಂಗ ನಗರದ ಕೋಟೆ ಗ್ರಾಮದೇವತೆ ದೇವಾಲಯದಲ್ಲಿ ಕಾರ್ತೀಕ ಮಾಸದ ಅಂಗವಾಗಿ ಏರ್ಪಡಿಸಿದ್ದ ವಿಶೇಷ ಪೂಜೆಯಲ್ಲಿ ಮಾತನಾಡಿದರು. ನಮ್ಮನ್ನು ಈ ದೇವತೆ ರಕ್ಷಣೆ ಮಾಡುತ್ತಿದೆ ಎಂಬ ನಂಬಿಕೆ ಜನರಲ್ಲಿ ಇಂದಿಗೂ ಇದೆ. ಗ್ರಾಮದ 18 ಕೋಮುಗಳ ಜನರು ಈ ದೇವತೆ ಮೇಲೆ ನಂಬಿಕೆ ಇಟ್ಟುಕೊಂಡಿದ್ದು, ಜೀರ್ಣೋದ್ಧಾರಗೊಂಡಿರುವ ದೇವಾಲಯದ ರಾಜಗೋಪುರ ಮತ್ತು ವಿಮಾನಗೋಪುರ ನಿರ್ಮಾಣಕ್ಕೆ ನೆರವು ಮಾಡುವುದಾಗಿ ಭರವಸೆ ನೀಡಿದರು.
ಗ್ರಾಮದ ರಕ್ಷಣೆ: ದೇವಸ್ಥಾನದ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಾವಿಕಟ್ಟೆ ವಿಶ್ವನಾಥ್ ಮಾತನಾಡಿ, ಸುಮಾರು 400 ವರ್ಷಗಳ ಹಿಂದೆ ಕೇವಲ ಒಂದು ನೂರು ಮನೆ ಹೊಂದಿದ್ದ ತುಮಕೂರು ಗ್ರಾಮದಲ್ಲಿ ವಾಸವಾಗಿದ್ದ ಜನರು ಸುತ್ತಮುತ್ತಲ ಕಾಡುಗಳಿಂದ ಸೌಧೆ ಕಡಿದು ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ಗ್ರಾಮಕ್ಕೆ ಕಾಲರಾ ಮತ್ತು ಪ್ಲೇಗ್ ಬಂದು ಸಾವು, ನೋವು ಉಂಟಾಗಿತ್ತು. ಈ ವೇಳೆ ಗ್ರಾಮದ ಜನರು ರಕ್ಷಿಸುವಂತೆ ಕೋಟೆ ಗ್ರಾಮದೇವತೆಯನ್ನು ಬೇಡಿ ದೇವಾಲಯದಲ್ಲಿ ರಕ್ಷಣೆ ಪಡೆದರು. ಅಂದಿ ನಿಂದ ಇಂದಿನವರೆಗೆ ತುಮಕೂರು ಗ್ರಾಮವನ್ನು ದೇವತೆ ಕಾಯುತ್ತಿದ್ದಾಳೆ ಎಂಬ ನಂಬಿಕೆ ಇದೆ ಎಂದರು.
ಮಹಾದ್ವಾರ ನಿರ್ಮಿಸುವ ಉದ್ದೇಶ: ಶಿಥಿಲಗೊಂಡ ದೇವಾಲಯವನ್ನು 2008ರಲ್ಲಿ ಪಟೇಲರು, ಯಜಮಾನರು, ಮಡಿವಾಳರು, ತಳವಾರಿಕೆ ಹಾಗೂ ಎನ್.ಆರ್. ಕಾಲೋನಿ ಕುಟುಂಬಗಳು, ಭಕ್ತರ ಸಹಕಾರದೊಂದಿಗೆ ಜೀರ್ಣೋದ್ಧಾರಗೊಳಿಸಲಾಗಿದೆ. ಪ್ರಸ್ತುತ ದೇವಾಲಯದ ವಿಮಾನಗೋಪುರ ಮತ್ತು ರಾಜಗೋಪುರ ನಿರ್ಮಾಣ ಪ್ರಗತಿಯಲ್ಲಿದೆ. ಅಲ್ಲದೆ ಎಮ್ಮೆಕೇರಿಗೆ ಪ್ರವೇಶ ಪಡೆಯುವ ಅಶೋಕರಸ್ತೆ ಮತ್ತು ಚಿಕ್ಕಪೇಟೆಯ ವಾಸವಿ ದೇವಾಲಯದ ಎದುರಿನ ರಸ್ತೆ ಆರಂಭದಲ್ಲಿ ಮಹಾದ್ವಾರ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಮುಂದಿನ ಎರಡು ತಿಂಗಳಲ್ಲಿ ಜಾತ್ರೆ ಇದ್ದು, ಭಕ್ತರು ಕೈಲಾದ ಸಹಾಯ ಮಾಡುವ ಮೂಲಕ ಗೋಪುರ ನಿರ್ಮಾಣ ಪೂರ್ಣಗೊಳ್ಳಲು ಸಹಕಾರ ನೀಡುವಂತೆ ಮನವಿ ಮಾಡಿದರು.
ಪಟೇಲ್ ವಂಶಸ್ಥರಾದ ವಿಶ್ವನಾಥ್, ಶಾನು ಭೋಗರ ವಂಶಸ್ಥರಾದ ಹರಿದಾಸ್, ಮಾಜಿ ನಗರಸಭಾ ಸದಸ್ಯರಾದ ಟಿ.ಬಿ.ಹನುಮಂತಯ್ಯ ಕುಟುಂಬ ಟಿ.ಬಿ.ಮಲ್ಲೇಶ್, ಎಂ.ಪಿ.ಕುಮಾರಸ್ವಾಮಿ, ಯಜಮಾನರ ವಂಶಸ್ಥರಾದ ರಾಜಕುಮಾರ್, ದೇವಾಲಯ ಅಭಿವೃದ್ಧಿª ಸಮಿತಿ ಸದಸ್ಯರಾದ ಪ್ರಭುರಾಮ್ ಸೇs…, ಟಿ.ಬಿ.ಸುರೇಶ ಬಾಬು, ನಗರಸಭೆ ಮಾಜಿ ಸದಸ್ಯ ಟಿ.ಜಿ.ಬಾಲಕೃಷ್ಣ, ಕರಾಟೆ ಕೃಷ್ಣಪ್ಪ, ಅರ್ಚಕರು ಭಾಗವಹಿಸಿದ್ದರು.