Advertisement

ಟೆನ್ನಿಸ್‌ ಕೋರ್ಟ್‌ ಪ್ರೇಕ್ಷಕರ ಗ್ಯಾಲರಿ ನಿರ್ಮಾಣಕ್ಕೆ ನೆರವು

04:28 PM Dec 08, 2018 | |

ದಾವಣಗೆರೆ: ನಗರದ ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿರುವ ಟೆನ್ನಿಸ್‌ ಕೋರ್ಟ್ ನಲ್ಲಿ ಪ್ರೇಕ್ಷಕರ ಗ್ಯಾಲರಿ ನಿರ್ಮಾಣಕ್ಕೆ ಅಗತ್ಯ ನೆರವು ನೀಡುವುದಾಗಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಭರವಸೆ ನೀಡಿದ್ದಾರೆ. ಶುಕ್ರವಾರ, ದಾವಣಗೆರೆ ಡಿಸ್ಟ್ರಿಕ್ಟ್ ಟೆನ್ನಿಸ್‌ ಅಸೋಸಿಯೇಷನ್‌ ವತಿಯಿಂದ ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿ ಏರ್ಪಡಿಸಿರುವ ರಾಜ್ಯ ಮಟ್ಟದ ಆಹ್ವಾನಿತ ಟೆನ್ನಿಸ್‌ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿರುವ ಟೆನ್ನಿಸ್‌ ಕೋರ್ಟ್‌ನಲ್ಲಿ ಪ್ರೇಕ್ಷಕರ ಗ್ಯಾಲರಿ ನಿರ್ಮಾಣಕ್ಕೆ 30 ಲಕ್ಷ ಖರ್ಚಾಗುತ್ತದೆ ಎಂಬುದಾಗಿ ಅಸೋಸಿಯೇಷನ್‌ ನವರು ಹೇಳಿದ್ದಾರೆ. ಶಾಮನೂರು ಶಿವಶಂಕರಪ್ಪ ಮಾತ್ರವೇ ಶ್ರೀಮಂತರಲ್ಲ. ದಾವಣಗೆರೆಯಲ್ಲಿ ಸಾಕಷ್ಟು ಜನರು ಶ್ರೀಮಂತರಿದ್ದಾರೆ. ಅವರು ಮತ್ತು ಅಸೋಸಿಯೇಷನ್‌ನವರು ಹಣ ಸಂಗ್ರಹಿಸಿದಲ್ಲಿ ಇನ್ನುಳಿದ ಹಣವನ್ನ ನಾನು ಕೊಡುತ್ತೇನೆ ಎಂದರು.

Advertisement

ದಾವಣಗೆರೆ ನಿಜವಾಗಿಯೂ ದಾನಿಗಳು ಊರು. ಯಾರೂ ಸಹ ಒಳ್ಳೆಯ ಕೆಲಸಕ್ಕೆ ಇಲ್ಲ ಎನ್ನುವುದೇ ಇಲ್ಲ. ಒಳ್ಳೆಯ ಕಾರ್ಯಕ್ಕೆ ಹಣ ನೀಡುವಂತಾಗಬೇಕೇ ಹೊರತು ಬರೀ ವಾಗ್ಧಾನ ಆಗಬಾರದು. ಹಿಂದೆ ಮಾತು ಕೊಟ್ಟು ಇನ್ನೂ ಹಣ ಕೊಟ್ಟಿಲ್ಲ ಎನ್ನುವಂತಾಗಬಾರದು. ದಾವಣಗೆರೆಯ ಜನರು ಅ ರೀತಿಯ ಮಾಡುವರಲ್ಲ. ದಾವಣಗೆರೆ ನಿಜವಾಗಿಯೂ ದಾನಿಗಳು ಊರು ಎಂದೇ ಹೆಸರುವಾಸಿ ಆಗಿದೆ ಎಂದು ಹೇಳಿದರು.

ದಾವಣಗೆರೆಯಲ್ಲಿ 1972ರಿಂದಲೂ ಟೆನ್ನಿಸ್‌ಗೆ ಹೆಚ್ಚಿನ ಪ್ರೋತ್ಸಾಹ, ಸಹಕಾರ ನೀಡಲಾಗುತ್ತಿತ್ತು. ಆಗಿನ ಸಮಯದಲ್ಲೇ ರಾಜ್ಯ, ರಾಷ್ಟ್ರ ಮಟ್ಟದ ಟೂರ್ನಿಗಳು ನಡೆಯುತ್ತಿದ್ದವು. ಈಗ ಟೆನ್ನಿಸ್‌ ಆಡುವರು ಕಡಿಮೆ ಆಗಿದ್ದಾರೆ. ಎಲ್ಲಿ ನೋಡಿದರೂ ಕ್ರಿಕೆಟ್‌ ಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಜನರು ಸಹ ಬಹಳ ಆಸಕ್ತಿಯಿಂದ ನೋಡುತ್ತಿದ್ದಾರೆ. ಅದರ ನಡುವೆಯೂ ಟೆನ್ನಿಸ್‌ ಟೂರ್ನಿಮೆಂಟ್‌ ನಡೆಸುತ್ತಿರುವುದು ಶ್ಲಾಘನೀಯ. ಟೆನ್ನಿಸ್‌ ಆಟ ಬಹಳ ಬುದ್ಧಿವಂತಿಕೆಯ ಆಟ. ದೇಹಕ್ಕೆ ಬಹಳ ವ್ಯಾಯಾಮ ಕೊಡುತ್ತದೆ ಎಂದರು. 

ದಾವಣಗೆರೆಯಲ್ಲಿ ಹಿಂದಿನಿಂದಲೂ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ, ನಾಟಕಕ್ಕೆ ಹೆಚ್ಚಿನ ಪ್ರೋತ್ಸಾಹ, ಸಹಕಾರ ನೀಡಲಾಗುತ್ತಿದೆ. ಬೇರೆ ಬೇರೆ ಕಡೆ ನಷ್ಟ ಅನುಭವಿಸಿದ್ದ ನಾಟಕ ಕಂಪನಿಗಳು ದಾವಣಗೆರೆಗೆ ಬಂದು ಹೆಚ್ಚಿನ ಲಾಭ ಮಾಡಿಕೊಂಡು ಹೋಗಿರುವ ಅನೇಕ ಉದಾಹರಣೆ ಇವೆ ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಸದಸ್ಯ ದಿನೇಶ್‌ ಕೆ. ಶೆಟ್ಟಿ ಮಾತನಾಡಿ, ಎಸ್‌.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿರುವ ಟೆನ್ನಿಸ್‌ ಕೋರ್ಟ್‌ ಪ್ರಾರಂಭಕ್ಕೆ ಮುಂದಾದಾಗ ಸಾಕಷ್ಟು ಹೋರಾಟ, ಪ್ರತಿಭಟನೆ ನಡೆದವು. ಊರ ಮಧ್ಯೆಯೇ ಟೆನ್ನಿಸ್‌ ಕೋರ್ಟ್‌
ಇದ್ದರೆ ಚೆನ್ನಾಗಿರುತ್ತದೆ ಎಂದು ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ದೃಡವಾಗಿ ನಿರ್ಧರಿಸಿದ್ದರಿಂದ ಸುಂದರ ಟೆನ್ನಿಸ್‌ ಕೋರ್ಟ್‌ ಆಗಿದೆ. ಇನ್ನೂ ಅಭಿವೃದ್ಧಿ ಆಗುವ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಟೆನ್ನಿಸ್‌ ಟೂರ್ನಿ ನಡೆಯುವಂತಾಗಬೇಕು. ದಾವಣಗೆರೆಯಲ್ಲಿ ಉತ್ತಮ ಟೆನ್ನಿಸ್‌ ಆಟಗಾರರು ಇದ್ದಾರೆ. ಯುವಜನ ಕ್ರೀಡಾ ಇಲಾಖೆಯಿಂದಲೇ ತರಬೇತುದಾರರು ಸಿಕ್ಕಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಟೆನ್ನಿಸ್‌ ಆಟಗಾರರು ಹೊರ ಹೊಮ್ಮುವರು ಎಂದು ಆಶಿಸಿದರು.

Advertisement

ಜಿಲ್ಲಾ ರಕ್ಷಣಾಧಿಕಾರಿ ಆರ್‌. ಚೇತನ್‌ ಮಾತನಾಡಿ, ಕ್ರೀಡೆ ಮತ್ತು ಸಾಂಸ್ಕೃತಿಕ ವಾತಾವರಣ ಸದಾ ಧನಾತ್ಮಕ ಚಿಂತನೆ ಮತ್ತು ಪರಿಸರಕ್ಕೆ ಕಾರಣವಾಗುತ್ತದೆ. ಸಾಕಷ್ಟು ತೊಂದರೆ ನಡುವೆಯೂ ಟೆನ್ನಿಸ್‌ ಟೂರ್ನಿ ನಡೆಸಲಾಗುತ್ತಿದೆ. ದಾವಣಗೆರೆಯಲ್ಲಿ ಒಂದಿಬ್ಬರು ಅಂತಾರಾಷ್ಟ್ರೀಯ ಮಟ್ಟದ ಟೆನ್ನಿಸ್‌ ಆಟಗಾರರು ಇದ್ದಾರೆ. ಮುಂದಿನ ದಿನಗಳಲ್ಲಿ ಅಂತಹವರ ಸಂಖ್ಯೆ 10-15ಕ್ಕೆ ಏರಲಿ ಎಂದು ಆಶಿಸಿದರು. ದಾವಣಗೆರೆ ಡಿಸ್ಟ್ರಿಕ್ಟ್ ಟೆನ್ನಿಸ್‌ ಅಸೋಸಿಯೇಷನ್‌ ಕಾರ್ಯಾಧ್ಯಕ್ಷ ಡಾ| ಎಸ್‌. ಎಂ. ಬ್ಯಾಡಗಿ, ರಾಜನಹಳ್ಳಿ ರವೀಂದ್ರನಾಥ್‌, ಆರ್‌.ಆರ್‌. ರಮೇಶ್‌ ಬಾಬು ಇತರರು ಇದ್ದರು. ಕೆ.ಪಿ. ಚಂದ್ರಪ್ಪ ಸ್ವಾಗತಿಸಿದರು. ನಂದಗೋಪಾಲ್‌ ವಂದಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next