Advertisement

ಡಿಜಿಟಲ್‌ ಗ್ರಂಥಾಲಯ ನಿರ್ಮಾಣಕ್ಕೆ ನೆರವು: ತಿಪ್ಪೇಸ್ವಾಮಿ 

06:15 PM Mar 13, 2018 | Team Udayavani |

ಮೊಳಕಾಲ್ಮೂರು: ಓದುಗರ ಜೀವನವನ್ನು ಬದಲಾಯಿಸುವ ಶಕ್ತಿ ಹೊಂದಿರುವ ಗ್ರಂಥಾಲಯ ದೇವಾಲಯವೂ ಆಗಿದೆ ಎಂದು 
ಶಾಸಕ ಎಸ್‌. ತಿಪ್ಪೇಸ್ವಾಮಿ ಹೇಳಿದರು. ಪಟ್ಟಣದ ತಾಲೂಕು ಪಂಚಾಯತ್‌ ಸಾಮರ್ಥ್ಯಸೌಧದ ಆವರಣದಲ್ಲಿ 30 ಲಕ್ಷ ರೂ.
ವೆಚ್ಚದಲ್ಲಿ ನಿರ್ಮಾಣಗೊಂಡ ಸಾರ್ವಜನಿಕ ಗ್ರಂಥಾಲಯ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಜೀವನವನ್ನು ಬದಲಾಯಿಸುವ ಗ್ರಂಥಗಳು ಗ್ರಂಥಾಲಯದಲ್ಲಿವೆ. ಗ್ರಾಮೀಣ ಬಡ ಓದುಗರು ಗ್ರಂಥಾಲಯಗಳಲ್ಲಿ ಅಗತ್ಯವಾದ ಪುಸ್ತಕಗಳನ್ನು
ಪಡೆದು ಶ್ರದ್ಧೆಯಿಂದ ಅಭ್ಯಾಸ ಮಾಡಿ ಜ್ಞಾನ ವೃದ್ಧಿಸಿಕೊಳ್ಳಬೇಕು. ಆಗ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಗಳಿಸಿ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬಹುದು ಎಂದರು.

Advertisement

ಬಸವಣ್ಣ, ಬುದ್ಧ, ಡಾ| ಬಿ.ಆರ್‌. ಅಂಬೇಡ್ಕರ್‌ ಕುರಿತ ಪುಸ್ತಕಗಳನ್ನು ಅಭ್ಯಾಸ ಮಾಡಿ ಅವರ ತತ್ವಗಳನ್ನು ಅಳವಡಿಸಿಕೊಳ್ಳಬೇಕು. ಒಳ್ಳೆಯ ಪುಸ್ತಕಗಳನ್ನು ಅಭ್ಯಾಸ ಮಾಡಿ ಸಮಾಜದಲ್ಲಿ ಜಾತಿ ವೈಷಮ್ಯ ಇಲ್ಲದಂತೆ ಮಾಡಬೇಕು. ಮುಂದಿನ ದಿನಗಳಲ್ಲಿ ಡಿಜಿಟಲ್‌ ಗ್ರಂಥಾಲಯ ನಿರ್ಮಾಣಕ್ಕೆ ಹೆಚ್ಚಿನ ನೆರವು ನೀಡುವುದಾಗಿ ಭರವಸೆ ನೀಡಿದರು. ಪಟ್ಟಣ ಪಂಚಾಯತ್‌ ಅಧ್ಯಕ್ಷ ಜಿ. ಪ್ರಕಾಶ್‌
ಮಾತನಾಡಿ, ಗ್ರಂಥಾಲಯಕ್ಕೆ ಇರುವ ಮಹತ್ವ ಬೇರೆ ಯಾವುದಕ್ಕೂ ಇರುವುದಿಲ್ಲ. ಒಂದು ಊರಿನಲ್ಲಿ ಜ್ಞಾನ ಭಂಡಾರವಾದ ಗ್ರಂಥಾಲಯ ಇಲ್ಲವೆಂದರೆ ಆ ಗ್ರಾಮ ಹಿಂದುಳಿದಿದೆ ಎಂತಲೇ ಅರ್ಥ. ಪುರಾತನ ಕಾಲದಲ್ಲಿ ಭಾರತ ವೈಜ್ಞಾನಿಕ, ತಂತ್ರಜ್ಞಾನ, ವೈದ್ಯಕೀಯ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಜ್ಞಾನ ಸಂಪತ್ತನ್ನು ಹೊಂದಿತ್ತು. ವಿದೇಶಿ ಆಕ್ರಮಣಕಾರರು ಮೊದಲು ಜ್ಞಾನ ಸಂಪತ್ತನ್ನು ನಾಶ ಮಾಡಿ ನಂತರ ಸಂಪತ್ತನ್ನು ದೋಚುತ್ತಿದ್ದರು. ಡಾ| ಬಿ.ಆರ್‌. ಅಂಬೇಡ್ಕರ್‌ ಸಂವಿಧಾನ ರಚಿಸಿ ಖ್ಯಾತಿಯಾಗಲು ಗ್ರಂಥಾಲಯಗಳೇ ಮೂಲ ಕಾರಣ. ಮಹಾನ್‌ ಸಾಧಕರೆಲ್ಲರಿಗೂ ಗ್ರಂಥಾಲಯಗಳೇ ಪ್ರೇರಣೆ ಎಂದರು. 

ವಕೀಲ ಎಂ.ಒ. ಮಂಜುನಾಥಸ್ವಾಮಿ ನಾಯಕ ಮಾತನಾಡಿದರು. ತಾಪಂ ಅಧ್ಯಕ್ಷೆ ಬಸಮ್ಮ, ಉಪಾಧ್ಯಕ್ಷ ಎ.ಕೆ. ಮಂಜುನಾಥ,
ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಜಿ. ಬಸಣ್ಣ, ಪಪಂ ಉಪಾಧ್ಯಕ್ಷ ಸಿ.ಬಸವರಾಜ, ಸದಸ್ಯ ಮಹಮ್ಮದ್‌ ಮೆಹಬೂಬ್‌, ಮಾಜಿ ಸದಸ್ಯ
ಕೆ.ಜಿ. ಪಾರ್ಥಸಾರಥಿ, ತಾಪಂ ಇಒ ಸಿ.ಎನ್‌. ಚಂದ್ರಶೇಖರಯ್ಯ, ಬಿಆರ್‌ಸಿ ಹನುಮಂತಪ್ಪ, ಎಇಇ ಬಾಲಕೃಷ್ಣಯ್ಯ, ಪಪಂ ಮುಖ್ಯಾಧಿಕಾರಿ ಎಸ್‌. ರುಕ್ಮಿಣಿ, ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಪಿ.ಆರ್‌. ತಿಪ್ಪೇಸ್ವಾಮಿ, ತಾಲೂಕು ಗ್ರಂಥಪಾಲಕ ನಾಗರಾಜ ಮತ್ತಿತರರು ಇದ್ದರು.

2.6 ಕೋಟಿ ರೂ. ಗ್ರಂಥಾಲಯ ಕರ ಬಾಕಿ ಈ ಗ್ರಂಥಾಲಯದಲ್ಲಿ 28 ಸಾವಿರಕ್ಕೂ ಹೆಚ್ಚು ಪುಸ್ತಕಗಳಿದ್ದು, 1400 ಸದಸ್ಯರನ್ನು ಹೊಂದಿದೆ. ರಾಜ್ಯದಲ್ಲಿ ಒಟ್ಟು 7 ಸಾವಿರ ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತಿವೆ. ಗ್ರಂಥಾಲಯ ಕರ ಒಟ್ಟು 2.6 ಕೋಟಿ ರೂ. ಬಾಕಿ ಇದ್ದು, ಕೂಡಲೇ ಗ್ರಂಥಾಲಯ ಇಲಾಖೆಗೆ ಪಾವತಿಸಬೇಕು ಎಂದು ಬೆಂಗಳೂರಿನ ಸಾರ್ವಜನಿಕ ಗ್ರಂಥಾಲಯ ಇಲಾಖೆ 
ನಿರ್ದೇಶಕ ಡಾ| ಸತೀಶಕುಮಾರ್‌ ಎಸ್‌. ಹೊಸಮನಿ ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next