ದೇವನಹಳ್ಳಿ : 7 ನೇ ಆರ್ಥಿಕ ಗಣತಿ ಕಾರ್ಯಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಈಗಾಗಲೇ ಚಾಲನೆ ದೊರೆತಿದ್ದು, ಈ ಹಿನ್ನಲೆಯಲ್ಲಿ ಆರ್ಥಿಕ ಗಣತಿ ಕಾರ್ಯವು ಯಶಸ್ವಿಗೊಳ್ಳಲು ಸಾರ್ವ ಜನಿಕರು ಸಮೀಕ್ಷಕರಿಗೆ ಮಾಹಿತಿ ನೀಡಿ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಹೇಳಿದರು.
ತಾಲೂಕಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ 7 ನೇ ಆರ್ಥಿಕ ಜನಗಣತಿಯ ಜಿಲ್ಲಾ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಆರ್ಥಿಕ ಗಣತಿಯು ದೇಶದ ಭೌಗೋಳಿಕನೆಲೆಗೊಂಡು ಸ್ವಂತ ಉಪಯೋಗಕಲ್ಲದ ಸರಕುಗಳ ವಿತರಣೆ ಮತ್ತು ಮಾರಾಟ ಸೇವೆ ಸೇರಿದಂತೆ ಇತ್ಯಾದಿ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿರುವ ಉದ್ಯಮಗಳ ಘಟಕಗಳ ಪೂರ್ಣ ಎಣಿಕೆಯಾಗಿದೆ. ಈ ಗಣತಿಯಲ್ಲಿಸಂಘಟಿತ ಮತ್ತು ಅಸಂಘಟಿತ ವಲಯಗಳ ಎಲ್ಲಾ ಉದ್ಯಮಗಳ ಗಣತಿಯನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.
ಗಣತಿಯ ಮುಖ್ಯ ಉದ್ದೇಶ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಹಾಗೂ ಖಾಸಗಿ ವಲಯದಲ್ಲಿನ ಸಂಘಟಿತ ಹಾಗೂ ಅಸಂಘಟಿತ ವಿಭಾಗಗಳ ವಿವಿಧ ಆರ್ಥಿಕ ಚಟುವಟಿಕೆಗಳ ಪಟ್ಟಿಯನ್ನು ತಯಾರಿಸುವುದಾಗಿದ್ದು, ಇದರಿಂದ ಅಸಂಘಟಿತ ವಲಯದ ಜನರ ಆರ್ಥಿಕ ಸ್ಥಿತಿಗತಿಗಳನ್ನು ತಿಳಿಯಲು ಅನುಕೂಲವಾಗಲಿದೆ. ಇದರ ಅನ್ವಯ ಸಾರ್ವಜನಿಕರಿಗೆ ಸರ್ಕಾರದ ವಿವಿಧ ಯೋಜನೆಗಳು ರೂಪಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಜಿಲ್ಲೆಯ ತೋಟದ ಮನೆಗಳನ್ನು ಹೊರತು ಪಡಿಸಿ ಗ್ರಾಮ ಮತ್ತು ನಗರ ವಾಸ್ತವ್ಯ ಹೊಂದಿರುವ ತಾಲೂಕುವಾರು ಮತ್ತು ಗ್ರಾಮ ಪಂಚಾಯತಿ ಹಂತದಲ್ಲಿನ ಜನಪ್ರತಿನಿಧಿಗಳ ಗಮನಕ್ಕೆ ತಂದು ಸಭೆಗಳನ್ನು ನಡೆಸುವುದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.ಪ್ರಸ್ತುತ ಆರ್ಥಿಕ ಗಣತಿಯು ಕಾಗದ ರಹಿತವಾಗಿ ಆನ್‌ಲೈನ್ ಮೂಲಕಸಂಗ್ರಹಿಸಲಾಗುತ್ತಿದ್ದು, ಆರ್ಥಿಕ ಗಣತಿಯಲ್ಲಿ ಮನೆ ಮಾಲೀಕರಿಂದ ಮೊದಲುಗೊಂಡು ಕುಟುಂಬದವರ ಸಂಖ್ಯೆ, ಮಕ್ಕಳ ಸಂಖ್ಯೆ, ಮನೆ ಮಾಲೀಕರ ಮೊಬೈಲ್ ಸಂಖ್ಯೆ, ಸ್ವಂತ ಮನೆ, ಉದ್ಯೋಗ, ಜಾತಿಧರ್ಮ ಸೇರಿದಂತೆ
ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಆದ್ದರಿಂದ ಶಾಲಾ ಮತ್ತು ಕಾಲೇಜಿನ ಶಿಕ್ಷಕರು ಆರ್ಥಿಕ ಗಣತಿಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಮಾಹಿತಿ ನೀಡಬೇಕು ಹಾಗೂ ಮನೆಗಳಿಗೆಗಣತಿದಾರರು ಬಂದಾಗ ಪೋಷಕರು ಮಾಹಿತಿ ನೀಡುವ ಮೂಲಕ ಗಣತಿ ಕಾರ್ಯಕ್ಕೆ ಸ್ಪಂದಿಸುವಂತೆ ತಿಳಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಪೊಲೀಸ್ ಅಧಿಕಾರಿಗಳು, ಸಾಮಾನ್ಯ ಸೇವಾ ಕೇಂದ್ರಗಳ ಜಿಲ್ಲಾ ಮೇಲ್ವಿಚಾರಕ ವಿ. ಎಸ್.ಮಹೇಶ್,ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು