Advertisement

ಭದ್ರತೆ ನೀಡದೆ ಕೋವಿಡ್‌ ಕೆಲಸಕ್ಕೆ ನಿಯೋಜನೆ: ಶಿಕ್ಷಕರಲ್ಲಿ ಆತಂಕ

02:25 PM Aug 05, 2020 | mahesh |

ಉಡುಪಿ: ಜಿಲ್ಲೆಯ ಸರಕಾರಿ ಹಾಗೂ ಅನುದಾನಿತ ಶಾಲೆಗಳ ಶಿಕ್ಷಕರಿಗೆ ಯಾವುದೇ ರೀತಿಯಾದ ಆರೋಗ್ಯ ಭದ್ರತೆ ನೀಡದೆ ಜಿಲ್ಲಾಡಳಿತ ಕೋವಿಡ್‌-19 ಕೆಲಸಕ್ಕೆ ನಿಯೋಜಿಸಿರುವುದು ಶಿಕ್ಷಕರನ್ನು ಆತಂಕಕ್ಕೆ ಗುರಿ ಮಾಡಿದೆ. ಕೊರೊನಾ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ವಿಧಿಸಲಾದ ಅಂತರ್‌ ರಾಜ್ಯಗಳ ಸಂಚಾರದ ನಿಷೇಧಾಜ್ಞೆ ತೆರವುಗೊಂಡಿದೆ. ಹೊರ ರಾಜ್ಯದಿಂದ ಜಿಲ್ಲೆಗೆ ಬರುವವರನ್ನು ಕ್ವಾರಂಟೈನ್‌ ಮಾಡುವಂತೆ ಸರಕಾರ ಆದೇಶ ನೀಡಿದೆ. ರೈಲು ಹಾಗೂ ವಿಮಾನದ ಮೂಲಕ ಜಿಲ್ಲೆಗೆ ಆಗಮಿಸುವವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಅಗತ್ಯವಿರುವ ಮಾಹಿತಿಯನ್ನು ಪಡೆಯಲು ಜಿಲ್ಲೆಯ ಸರಕಾರಿ, ಅನುದಾನಿತ ಶಾಲೆ ಶಿಕ್ಷಕರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

Advertisement

ಕೋವಿಡ್‌ ಡ್ಯೂಟಿ ಹೊರೆ
ಜಿಲ್ಲೆಯಲ್ಲಿ ಸರಕಾರ ಹಾಗೂ ಅನುದಾನಿತ ಶಾಲೆಗಳ 750 ಮಂದಿ ಶಿಕ್ಷಕರನ್ನು ವಿವಿಧ ಕೋವಿಡ್‌ ಕರ್ತವ್ಯಕ್ಕೆ ಬಳಸಿಕೊಳ್ಳಲಾಗಿದೆ. ಪ್ರಸ್ತುತ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಟಿವಿ ಮೂಲಕ ತರಗತಿ ನಡೆಯುತ್ತಿದೆ. ಶಿಕ್ಷಕರು ದೂರದರ್ಶನದ ಸಂಪರ್ಕವಿಲ್ಲದ ವಿದ್ಯಾರ್ಥಿಗಳಿಗೆ ಮನೆಗೆ ತೆರಳಿ ಪಾಠ ಮಾಡಬೇಕಾಗಿದೆ. ಜತೆಗೆ ಅವರು ಕೋವಿಡ್‌- 19 ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶ ನೀಡಿರುವುದು ಶಿಕ್ಷಕರಿಗೆ ತಲೆ ನೋವು ಆಗಿ ಪರಿಣಮಿಸಿದೆ.

ಮೂರು ಪಾಳಿಯಲ್ಲಿ ಕೆಲಸ
ಇದುವರೆಗೆ ಜಿಲ್ಲೆಯ ಎಲ್ಲ ಶಿಕ್ಷಕರು ಈಗಾಗಲೇ ಕೋವಿಡ್‌ ಕೆಲಸವನ್ನು ಪೂರೈಸಿದ್ದಾರೆ. ಪ್ರಸ್ತುತ ಕೊರೊನಾ ಸೋಂಕು ಪ್ರಕರಣ ಹೆಚ್ಚಾದ ಹಿನ್ನೆಲೆ ಯಲ್ಲಿ ಶಿಕ್ಷಕರು ಆತಂಕಕ್ಕೀಡಾಗಿದ್ದಾರೆ. ಆರೋಗ್ಯ ಭದ್ರತೆ ನೀಡದೆ ತಾಲೂಕು ರಿಸೀವಿಂಗ್‌ ಸೆಂಟರ್‌ನಲ್ಲಿ ಕೋವಿಡ್‌-19 ಕೆಲಸ ನಿಯೋಜಿಸಿರುವುದಕ್ಕೆ ಆತಂಕ ವ್ಯಕ್ತಪಡಿಸಿದ್ದಾರೆ.

ವಾಹನ ವ್ಯವಸ್ಥೆ ಇಲ್ಲ!
ಶಿಕ್ಷಕರಿಗೆ ಮೂರು ಶಿಫ್ಟ್ನಲ್ಲಿ ಕೆಲಸ ಮಾಡಬೇಕಾಗಿದೆ. ಮೊದಲ ಶಿಫ್ಟ್ ಬೆಳಗ್ಗೆ 6ರಿಂದ ಅಪರಾಹ್ನ 2, ಎರಡನೇ ಶಿಫ್ಟ್ 2ರಿಂದ ರಾತ್ರಿ 10, ಮೂರನೇ ಶಿಫ್ಟ್ 10ರಿಂದ ಬೆಳಗ್ಗೆ 6 ವರೆಗೆ ಕರ್ತವ್ಯ ನಿರ್ವಹಿಸಬೇಕಾಗಿದೆ. ರಾತ್ರಿ ಹಾಗೂ ಮುಂಜಾನೆ ಶಿಫ್ಟ್ ಮಾಡುವ ಶಿಕ್ಷಕರಿಗೆ ಪಿಕ್‌ ಆ್ಯಂಡ್‌ ಡ್ರಾಪ್‌ ವ್ಯವಸ್ಥೆ ಇಲ್ಲದೆ ಕೋವಿಡ್‌ ರಿಸೀವ್‌ ಕೇರ್‌ ಸೆಂಟರ್‌ಗೆ ಹೋಗಲು ಪರದಾಡುತ್ತಿದ್ದಾರೆ.

ಶಿಕ್ಷಕರ ಬೇಡಿಕೆಗಳು?
ಕೋವಿಡ್‌-19 ಕರ್ತವ್ಯ ನಿರ್ವಹಿಸುವ ಶಿಕ್ಷಕರಿಗೆ ವಾಹನದ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವಾದರೆ ಭತ್ತೆ ನೀಡಬೇಕು. ಆರೋಗ್ಯ ಭದ್ರತೆ ನೀಡಬೇಕು. ವಿವಿಧ ರಾಜ್ಯದಿಂದ ರೈಲು ಮೂಲಕ ಬರುವವರು ಮೊದಲು ಶಿಕ್ಷಕರ ಸಂಪರ್ಕಕ್ಕೆ ಬರುತ್ತಾರೆ. ಮಾಸ್ಕ್ ಹಾಗೂ ಸ್ಯಾನಿಟೈಸರ್‌ ನೀಡಲಾಗಿದೆ. ಅದರ ಹೊರತಾಗಿ ಇತರ ಯಾವುದೇ ಆರೋಗ್ಯ ಭದ್ರತೆಯನ್ನು ನೀಡಿಲ್ಲ. ಸೆಂಟರ್‌ನಲ್ಲಿ ಕರ್ತವ್ಯ ಮುಗಿಸಿದವರು ನೇರವಾಗಿ ಮನೆಗೆ ತೆರಳಬೇಕಾಗಿದೆ. ಮನೆಯಲ್ಲಿ ಚಿಕ್ಕ ಮಕ್ಕಳು, ಹಿರಿಯರು ಇದ್ದಾರೆ. ಒಂದು ವೇಳೆ ನಾವು ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದರೆ ಇಡೀ ಕುಟುಂಬ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಶಿಕ್ಷಕರು ತಿಳಿಸಿದ್ದಾರೆ.

Advertisement

ಶಿಕ್ಷಕರು ದೂರು ನೀಡಿಲ್ಲ
ಆರೋಗ್ಯ ಭದ್ರತೆ ನೀಡದೆ ಜಿಲ್ಲಾಡಳಿತ ಕೋವಿಡ್‌-19 ಕೆಲಸ ನಿಯೋಜಿಸುತ್ತಿದ್ದಾರೆಂದು ಶಿಕ್ಷಕರು ದೂರು ನೀಡಿಲ್ಲ. ಕೋವಿಡ್‌ -19ರ ಕರ್ತವ್ಯ ನೇಮಕಾತಿ ಜಿಲ್ಲಾಡಳಿದಿಂದ ನಡೆಯುತ್ತದೆ.
-ಶೇಷಶಯನ ಕಾರಿಂಜ, ಡಿಡಿಪಿಐ ಉಡುಪಿ ಜಿಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next