Advertisement

ಚರ್ಚೆಗೆಡೆಯಾದ “ಕಾಂಗ್ರೆಸ್‌ ಕಸ’

11:07 AM Jun 08, 2017 | |

ವಿಧಾನ ಪರಿಷತ್ತು: ಕ್ರೀಡಾಂಗಣ ವೊಂದರಲ್ಲಿ ಕಾಂಗ್ರೆಸ್‌ ಕಸ ಬೆಳೆದು ನಿರ್ವಹಣೆಯಿಲ್ಲದೆ ಸೊರಗಿದೆ ಎಂಬ ವಿಚಾರ ಮೇಲ್ಮನೆಯಲ್ಲಿ ಬುಧವಾರ ಸ್ವಾರಸ್ಯಕರ ಚರ್ಚೆಗೆ ನಾಂದಿ ಹಾಡಿತು.

Advertisement

ಬಿಜೆಪಿಯ ಎಸ್‌.ವಿ. ಸಂಕನೂರ ಅವರು ಹಾವೇರಿ ಜಿಲ್ಲೆಯ ಹಿರೇಕೆರೂರ ಪಟ್ಟಣದ ಕ್ರೀಡಾಂಗಣದಲ್ಲಿ ಜಾಲಿಗಿಡ, ಕಾಂಗ್ರೆಸ್‌ ಕಸ ಹಾಗೂ ವಿವಿಧ ಗಿಡಗಂಟಿ ಬೆಳೆದು ಕಿಡಿಗೇಡಿಗಳ ಜೂಜಾಟ, ಅನೈತಿಕ ಚಟುವಟಿಕೆ ತಾಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.ಆಗ ಜೆಡಿಎಸ್‌ನ ಬಸವರಾಜ ಹೊರಟ್ಟಿ, “ನೋಡ್ರೀ ಅದೇನೋ ಕಾಂಗ್ರೆಸ್‌ ಕಸ ಎನ್ನುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಸದಸ್ಯರನ್ನು ಪ್ರಚೋದಿಸಿದರು.

ತಕ್ಷಣವೇ ಎದ್ದುನಿಂತ ಕಾಂಗ್ರೆಸ್‌ನ ನಾರಾಯಣಸ್ವಾಮಿ, “ಕಾಂಗ್ರೆಸ್‌ ಕಸ ಎನ್ನುವುದು ಸರಿಯಲ್ಲ. ಕಾಂಗ್ರೆಸ್‌ ಗಿಡ ಎಂದು ಹೇಳಿ’ ಎಂದು ತಾಕೀತು ಮಾಡಿದರು. ಇದಕ್ಕೆ ದನಿಗೂಡಿಸಿದ ಕಾಂಗ್ರೆಸ್‌ನ ಎಚ್‌.ಎಂ.ರೇವಣ್ಣ, “ಕಾಂಗ್ರೆಸ್‌ ಕಸವಲ್ಲ, ಕಾಂಗ್ರೆಸ್‌ ಗಿಡ ಎಂಬುದಾಗಿ ಬಳಕೆಯಲ್ಲಿರುವ ಪದ ಪ್ರಯೋಗಿಸಿ’ ಎಂದರು.
 
ಅದಕ್ಕೆ ಬಸವರಾಜ ಹೊರಟ್ಟಿ, “ನಮ್ಮ ಕಡೆ ಕಾಂಗ್ರೆಸ್‌ ಕಸ ಎಂದೇ ಕರೆಯುತ್ತಾರೆ’ ಎಂದು ನಗಲಾರಂಭಿಸಿದರು. ಕಾಲೆಳೆದ ಪುಟ್ಟಸ್ವಾಮಿ: ಬಳಿಕ ಕಾಂಗ್ರೆ ಸ್‌ನ ವಿ.ಎಸ್‌.ಉಗ್ರಪ್ಪ, “ಕಾಂಗ್ರೆಸ್‌ ಪಕ್ಷ ಹೇಗೋ ಹಾಗೆ ಕಾಂಗ್ರೆಸ್‌ ಗಿಡ. ಯಾರೂ ಅದನ್ನು ತೆಗೆದು ಹಾಕಲು ಸಾಧ್ಯವಿಲ್ಲ. ಕಸ ಏನಿದ್ದರೂ ಬಿಜೆಪಿ ಪಕ್ಷದ ಕಚೇರಿಯಲ್ಲಿ’ ಎಂದರು.

ಆಗ ಬಿಜೆಪಿಯ ಬಿ.ಜೆ.ಪುಟ್ಟಸ್ವಾಮಿ,”ಆ ಕಾರಣಕ್ಕೆ ಜನರೇ ಕಾಂಗ್ರೆಸ್‌ ಗಿಡ ಕಿತ್ತು ಬೆಂಕಿ ಹಾಕುತ್ತಿದ್ದಾರೆ’ ಎಂದು ಕಾಲೆಳೆದರು. ಇದಕ್ಕೆ ಸಚಿವ ಪ್ರಮೋದ್‌ ಮಧ್ವರಾಜ್‌, ಬೆಂಕಿ ಹಾಕುವವರು ಬಿಜೆಪಿಯವರು ಎಂದು ಕಿಚಾಯಿಸಿದರು. ನಂತರ ಸಭಾಪತಿ ಡಿ.ಎಚ್‌.ಶಂಕರಮೂರ್ತಿ ಅವರು ಸದಸ್ಯರನ್ನು ಸಮಾಧಾನ ಪಡಿಸಿದ್ದರಿಂದ ಮತ್ತೆ ಪ್ರಶ್ನೋತ್ತರ ಚರ್ಚೆಗೆ ಸದನ ಮರಳಿತು.

Advertisement

Udayavani is now on Telegram. Click here to join our channel and stay updated with the latest news.

Next