ಬೆಂಗಳೂರು:ಬಿಜೆಪಿಯವರಿಗೆ ಸದನ ನಡೆಸಲು ಇಷ್ಟವಿಲ್ಲ, ಬಜೆಟ್ ಮೇಲಿನ ಚರ್ಚೆ ನಡೆಯುವುದೂ ಬೇಕಿಲ್ಲ. ವಿನಾಕಾರಣ ತಂಟೆ ತೆಗೆದು ಗದ್ದಲ ಎಬ್ಬಿಸಲಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ
ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸದನ ಮುಂದೂಡಿಕೆ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಹಕ್ಕುಚ್ಯುತಿ ಪ್ರಸ್ತಾಪದ ಮೇಲೆ ಸ್ಪೀಕರ್ ನನಗೆ ಮಾತನಾಡಲು ಅವಕಾಶ ಕೊಟ್ಟರೂ ಇವರು ಬಿಡುವುದಿಲ್ಲ ಎಂದರೆ ಏನು ಅರ್ಥ ಎಂದು ಪ್ರಶ್ನಿಸಿದರು.
ಸಚಿವ ಡಾ.ಕೆ.ಸುಧಾಕರ್ ಮಾತನಾಡಿದ್ದು ರೆಕಾರ್ಡ್ ಇದೆ. ನಾವು ಹಕ್ಕಚ್ಯುತಿ ಪ್ರಸ್ತಾಪ ನೀಡಿದ್ದೇವೆ. ಅದರ ಬಗ್ಗೆ ಚರ್ಚೆಗೆ ಅವಕಾಶ ಕೊಡಲೇಬೇಕು ಎಂದು ಹೇಳಿದರು.
ಬಜೆಟ್‌ನಲ್ಲಿ ಯಾವುದೇ ಇಲಾಖೆಗೆ ದುಡ್ಡು ಇಟ್ಟಿಲ್ಲ, ಚರ್ಚೆ ಸಂದರ್ಭದಲ್ಲಿ ಆಕ್ರೋಶ ಎದುರಿಸಬೇಕು ಎಂಬ ಕಾರಣಕ್ಕೆ ಹೀಗೆ ಗಲಾಟೆ ಎಬ್ಬಿಸಲಾಗುತ್ತಿದೆ ಎಂದು ದೂರಿದರು.
ಕೊರೊನಾ ವೈರಸ್ ಬಗ್ಗೆ ರಾಜ್ಯದಲ್ಲಿ ಆತಂಕ ಸ್ಥಿತಿ ಇದೆ. ಕಲಬುರಗಿಯಲ್ಲಿ ಒಬ್ಬರು ಶಂಕಿತ ರೋಗಿ ಮೃತಪಟ್ಟ ಬಗ್ಗೆ ವರದಿಯಿದೆ. ಅಧಿವೇಶನ ನಡೆಯುವಾಗ ಸರ್ಕಾರ ಈ ಬಗ್ಗೆ ಸದನದಲ್ಲಿ ಮಾಹಿತಿ ನೀಡಬೇಕಿತ್ತು. ಅದ್ಯಾವುದೂ ನಡೆಯುತ್ತಿಲ್ಲ. ಜನರಲ್ಲಿ ಅನಗತ್ಯ ಆತಂಕ ಸೃಷ್ಟಿಸುವ ಕೆಲಸ ಮಾಡಲಾಗುತ್ತಿದೆ. ಸಚಿವರಲ್ಲೇ ಗೊಂ ದಲ ಇದೆ ಎಂದು ಆರೋಪಿಸಿದರು.