ಬೆಂಗಳೂರು: ಖಾಸಗಿ ಶಾಲೆಗಳಲ್ಲಿ ಕಡ್ಡಾಯವಾಗಿ ನಾಡಗೀತೆ ಹಾಡುವುದಕ್ಕೆ ವಿನಾಯಿತಿ ನೀಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೊರಡಿಸಿದ್ದ ಸುತ್ತೋಲೆಯು ವಿಧಾನಸಭೆಯಲ್ಲಿ ತೀವ್ರ ಗದ್ದಲ ಸೃಷ್ಟಿಸಿತು.
ವಿಪಕ್ಷಗಳ ವಾಗ್ಧಾಳಿಯಿಂದ ಬುಧವಾರ ಸರಕಾರ ಇಕ್ಕಟ್ಟಿಗೆ ಸಿಲುಕಿತು. ಮುದ್ರಣ ದೋಷ ನೆಪ ನೀಡಿ ಪಾರಾಗಲು ಸಚಿವ ಶಿವರಾಜ ತಂಗಡಗಿ ಮಾಡಿದ ಪ್ರಯತ್ನ ವಿಫಲವಾಯಿತು. ಕೊನೆಗೆ ಪರಿಷ್ಕೃತ ಆದೇಶವನ್ನು ಸದನದಲ್ಲಿ ಪ್ರಸ್ತುತಪಡಿಸಲಾಯಿತು.
ಈ ವಿಷಯವನ್ನು ಪ್ರಸ್ತಾವಿಸಿದ ವಿಪಕ್ಷ ನಾಯಕ ಆರ್. ಅಶೋಕ್ ತಿದ್ದುಪಡಿ ಆದೇಶ ಮುಂದಿಟ್ಟುಕೊಂಡು ಸರಕಾರದ ವಿರುದ್ಧ ಏರಿ ಹೋದರು. ಇಲ್ಲೇನು ಹುಚ್ಚಾಟ ನಡೆಯುತ್ತಿದೆಯೇ? ವಸತಿ ಶಾಲೆಯಲ್ಲಿ ಕುವೆಂಪು ಘೋಷವಾಕ್ಯ ಕಿತ್ತುಹಾಕಿದ ಬೆನ್ನಲ್ಲೇ ನಾಡಗೀತೆಯನ್ನು ಕಿತ್ತುಹಾಕುವ ಮೂಲಕ ರಾಷ್ಟ್ರಕವಿಗೆ ಅವಮಾನ ಮಾಡಲಾಗಿದೆ. ಇಲ್ಲಿ ಬಾಲವೇ ನಾಯಿಯನ್ನು ಅಲ್ಲಾಡಿಸು ವಂತಾಗಿದೆ ಎಂದು ಆರೋಪಿಸಿದರು.
ಅಧಿಕಾರಿಗಳು-ಸಚಿವರ ನಡುವೆ ಸಂಪರ್ಕವೇ ಇಲ್ಲವಾಗಿದೆ ಎಂದು ಹಿರಿಯ ಶಾಸಕ ಆರಗ ಜ್ಞಾನೇಂದ್ರ ಆರೋಪಿಸಿದರು. ಕನ್ನಡವೂ ಇಲ್ಲ, ಸಂಸ್ಕೃತಿಯೂ ಇಲ್ಲ ಎಂದು ಸುರೇಶ್ ಕುಮಾರ್ ಕುಟುಕಿದರು.
ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಅಧಿಕಾರಿಗಳಿಗೆ ಲಂಗು ಲಗಾಮು ಇಲ್ಲದಂತಾಗಿದೆ. ಇದು ಗಂಭೀರ ವಿಚಾರ, ಸರಕಾರ ನಾಡಿನ ಕ್ಷಮೆ ಕೋರಬೇಕು. ಹತ್ತು ದಿನಗಳಲ್ಲಿ ಇಂಥ ಹಲವು ಪ್ರಕರಣಗಳು ನಡೆದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬಳಿಕ ಸಚಿವ ಶಿವರಾಜ ತಂಗಡಗಿ ನೀಡಿದ ಸ್ಪಷ್ಟನೆ, ಸಮರ್ಥನೆ ವಿಪಕ್ಷವನ್ನು ಇನ್ನಷ್ಟು ಕೆರಳಿಸಿತು. ಫೆ. 16ರಂದು ತಿದ್ದುಪಡಿ ಆದೇಶ ಹೊರಟಿದೆ. ವಿಷಯ ಗಂಭೀರ ವಾಗುತ್ತಿದ್ದಂತೆ ಬುಧವಾರ ಮತ್ತೂಂದು ಆದೇಶ ಹೊರಡಿಸಿ, ಖಾಸಗಿ ಶಾಲೆಗಳನ್ನು ಕಡ್ಡಾಯದ ವ್ಯಾಪ್ತಿಗೆ ತರಲಾಗಿದೆ ಎಂದು ವಿಪಕ್ಷ ಸದಸ್ಯರು ಕುಟುಕಿದರು.
ಸಚಿವ ತಂಗಡಗಿ ಅವರನ್ನು ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂ ರಾವ್ ಸಮರ್ಥನೆ ಮಾಡಿ ಕೊಳ್ಳುತ್ತ, ಜನ ನಮ್ಮ ಪರ ಇದ್ದಾರೆ. ವಿಪಕ್ಷದವರು ಹೊಟ್ಟೆ ಉರಿಗೆ ಸಣ್ಣ ವಿಚಾರವನ್ನೂ ದೊಡ್ಡದು ಮಾಡುತ್ತಿದ್ದಾರೆ. ಸರಕಾರ ಏಕೆ ಕ್ಷಮೆ ಕೇಳಬೇಕು, ಸರಿಪಡಿಸಿ ಆದೇಶ ಹೊರಡಿಸಲಾಗಿದೆ ಎಂದು ವಾದಿಸಿದರು.
ಆದರೆ ಕಾನೂನು ಸಚಿವ ಎಚ್.ಕೆ. ಪಾಟೀಲ್ ಉತ್ತರಿಸಿ, ದೊಡ್ಡ ತಪ್ಪಾಗಿದೆ. ತಪ್ಪನ್ನು ಸರಿಪಡಿಸಿ ಆದೇಶ ಹೊರಡಿಸಿದ್ದಾರೆ. ಅಚಾತುರ್ಯ ಆಗಿದೆ. ಸರಕಾರ ಬಿಗಿ ಕ್ರಮ ಕೈಗೊಳ್ಳಲಿದೆ ಎಂದು ಸ್ಪಷ್ಟ ಪಡಿಸಿದ ಬಳಿಕ ವಿಪಕ್ಷ ಸದಸ್ಯರು ಚರ್ಚೆ ಕೈಬಿಟ್ಟರು.