ವಿಧಾನ ಪರಿಷತ್ತು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ತಿದ್ದುಪಡಿ) ವಿಧೇಯಕ-2022 ಸೇರಿದಂತೆ ಮೇಲ್ಮನೆಯಲ್ಲಿ ಬುಧವಾರ ಐದು ವಿಧೇಯಕಗಳು ಅಂಗೀಕಾರಗೊಂಡವು.
ವಿಧಾನಸಭೆಯಿಂದ ಅಂಗೀಕಾರಗೊಂಡ ರೂಪದಲ್ಲಿರುವ ಐದೂ ವಿಧೇಯಕಗಳನ್ನು ಸಚಿವರಾದ ಜೆ.ಸಿ. ಮಾಧುಸ್ವಾಮಿ ಮತ್ತು ನಾರಾಯಣಗೌಡ ಮಂಡಿಸಿದರು. ಇದಕ್ಕೆ ಪಕ್ಷಾತೀತವಾಗಿ ಸದಸ್ಯರೆಲ್ಲರೂ ಬೆಂಬಲ ಸೂಚಿಸಿದರು. ಜತೆಗೆ ಪರಿಣಾಮಕಾರಿ ಅನುಷ್ಠಾನಕ್ಕೆ ಕೆಲವು ಸಲಹೆಗಳನ್ನೂ ನೀಡಿದರು.
ಈ ಸಂದರ್ಭದಲ್ಲಿ “ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ತಿದ್ದುಪಡಿ) ವಿಧೇಯಕ- 2022′ ಮಂಡಿಸಿ ಮಾತನಾಡಿದ ಸಚಿವ ಜೆ.ಸಿ. ಮಾಧುಸ್ವಾಮಿ, ಪ.ಜಾತಿ ಮತ್ತು ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಪಾಲಿಕೆಯಲ್ಲಿನ ಒಟ್ಟು ಸ್ಥಾನಗಳ ಸಂಖ್ಯೆಯ ಮೂರನೇ ಒಂದರಷ್ಟು ನೀಡಲಾಗುತ್ತಿತ್ತು. ತಿದ್ದುಪಡಿ ವಿಧೇಯಕದಿಂದ ಒಟ್ಟು ಸ್ಥಾನಗಳ ಸಂಖ್ಯೆ ಶೇ. 50ಕ್ಕೆ ಏರಿಕೆಯಾಗಲಿದೆ. ಅದರಲ್ಲೂ ನಿರೀಕ್ಷಿತ ಪ್ರಮಾಣದಲ್ಲಿ ಪ.ಜಾತಿ ಮತ್ತು ಪಂಗಡ ಇಲ್ಲದಿರುವುದರಿಂದ ಹಿಂದುಳಿದ ವರ್ಗಕ್ಕೆ ಇದರಿಂದ ಅನುಕೂಲ ಆಗಲಿದೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, “ವಾರ್ಡ್‌ಗಳ ಮೀಸಲಾತಿ ವೇಳೆ ಕಾಂಗ್ರೆಸ್ ಸದಸ್ಯರಿರುವ ಕಡೆಗಳಲ್ಲಿ ಮಹಿಳೆ ಅಥವಾ ದಲಿತರಿಗೆ ಮೀಸಲಿಡುವುದು ಸೇರಿದಂತೆ ಅನುಕೂಲಕ್ಕೆ ತಕ್ಕಂತೆ ಮಾಡುವುದು ಸರಿ ಅಲ್ಲ. ಆಗ, ಈ ವಿಧೇಯಕದ ಮೂಲ ಉದ್ದೇಶ ಸಾಕಾರಗೊಳ್ಳುವುದಿಲ್ಲ’ ಎಂದರು.
ಜೆಡಿಎಸ್‌ನ ತಿಪ್ಪೇಸ್ವಾಮಿ ಮಾತನಾಡಿ, ಬಿಬಿಎಂಪಿ ಚುನಾವಣೆಗೆ ಸರ್ಕಾರ ಸಿದ್ಧವಿದೆಯೇ? ಚುನಾವಣೆ ಮಾಡುವುದಾದರೆ, ಯಾವಾಗ ಮಾಡುತ್ತೀರಿ ಎಂದು ಕೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮಾಧುಸ್ವಾಮಿ, “ಮೀಸಲಾತಿ ಸೇರಿದಂತೆ ಎಲ್ಲ ಪ್ರಕ್ರಿಯೆಗಳು ಮುಗಿಯುತ್ತಿದ್ದಂತೆ ಆದಷ್ಟು ಬೇಗ ಚುನಾವಣೆ ನಡೆಸಲಾಗುವುದು’ ಎಂದರು.
ತದನಂತರ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ (ಎರಡನೇ ತಿದ್ದುಪಡಿ) ವಿಧೇಯಕ- 2022, ಕರ್ನಾಟಕ ಮುನಿಸಿಪಾಲಿಟಿಗಳ (ತಿದ್ದುಪಡಿ) ವಿಧೇಯಕ- 2022, ಕರ್ನಾಟಕ ರೇಷ್ಮೆಹುಳು ಬಿತ್ತನೆ, ರೇಷ್ಮೆಗೂಡು ಮತ್ತು ರೇಷ್ಮೆನೂಲು (ಉತ್ಪಾದನೆ, ಸರಬರಾಜು, ವಿತರಣೆ ಮತ್ತು ಮಾರಾಟ ನಿಯಮ) (ತಿದ್ದುಪಡಿ) ವಿಧೇಯಕ- 2022 ಹಾಗೂ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ವಿಧೇಯಕ- 2022ಕ್ಕೆ ಅಂಗೀಕಾರ ನೀಡಲಾಯಿತು.