Advertisement

 ಸಹಾಯಕ ಪ್ರಾಧ್ಯಾಪಕರ ಬಡ್ತಿ ಶೀಘ್ರ ಕ್ರಮ: ಸಚಿವ ಡಾ. ಎಂ.ಸಿ. ಸುಧಾಕರ್‌

12:53 AM Jul 18, 2023 | Team Udayavani |

ವಿಧಾನಪರಿಷತ್ತು: ಕರ್ನಾಟಕ ಲೋಕಸೇವಾ ಆಯೋಗದ ಮೂಲಕ 2011ನೇ ಸಾಲಿನಲ್ಲಿ ನೇಮಕಗೊಂಡ ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ವೃತ್ತಿ ಪದನ್ನೋತಿ ನೀಡುವ ವಿಚಾರದಲ್ಲಿ ಆರ್ಥಿಕ ಇಲಾಖೆಯಿಂದ ಆಗಿರುವ ಗೊಂದಲ ನಿವಾರಿಸಿ ಸಹಾಯಕ ಪ್ರಾಧ್ಯಾಪಕರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಆದ್ಯತೆ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್‌ ಹೇಳಿದ್ದಾರೆ.

Advertisement

ಸದನದಲ್ಲಿ ನಿಯಮ 330ರಡಿ ಜೆಡಿಎಸ್‌ನ ಮರಿತಿಬ್ಬೇಗೌಡ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಸಚಿವರು, ಇದರಲ್ಲಿ ಉನ್ನತ ಶಿಕ್ಷಣ ಇಲಾಖೆಯ ತಪ್ಪಿಲ್ಲ. ಎಐಸಿಟಿ ಮಾನದಂಡಗಳ ಪ್ರಕಾರವೇ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಕಳಿಸಿಕೊಡಲಾಗಿದೆ. ಆದರೆ, ಆರ್ಥಿಕ ಇಲಾಖೆಯು ಬೇರೆ ಇಲಾಖೆಗಳ ನಿಯಮಗಳಂತೆ ಪರಿಗಣಿಸಿ ಕಡತವನ್ನು ಪುನರ್‌ಪರಿಶೀಲನೆಗೆ ಕಳಿಸಿದ್ದಾರೆ. ಆಗಿರುವ ವಿಳಂಬ ಒಪ್ಪುವ ವಿಚಾರವೇ. ಆದ್ದರಿಂದ ಆರ್ಥಿಕ ಇಲಾಖೆಯಿಂದ ಆಗಿರುವ ಗೊಂದಲ ನಿವಾರಿಸಿ ಪ್ರಾಧ್ಯಾಪಕರಿಗೆ ನ್ಯಾಯ ಒದಗಿಸುವ ಕೆಲಸವನ್ನು ಆದ್ಯತೆಯ ಮೇರೆಗೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಈ ವಿಷಯದ ಬಗ್ಗೆ ಮಾತನಾಡಿದ ಜೆಡಿಎಸ್‌ನ ಎಸ್‌.ಎಲ್‌. ಭೋಜೇಗೌಡ, ಬಿಜೆಪಿಯ ವೈ.ಎ. ನಾರಾಯಣಸ್ವಾಮಿ ಮತ್ತಿತರು ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ವೃತ್ತಿ ಪದನ್ನೋತಿ ವಿಚಾರ ಕಳೆದ 12 ವರ್ಷಗಳಿಂದ ಬಾಕಿ ಉಳಿದಿದೆ. ಇದರಿಂದ ಪ್ರಾಧ್ಯಾಪಕರು ಮಾನಸಿಕ ಶೋಷಣೆ ಅನುಭವಿಸುತ್ತಿದ್ದಾರೆ. ಐಎಎಸ್‌ ಅಧಿಕಾರಿಗಳು ಬಡ್ತಿಗೆ ಒಂದು ದಿನ ವಿಳಂಬವಾದರೆ ಸಹಿಸುವುದಿಲ್ಲ. ಪ್ರಾಧ್ಯಾಪಕರ ವಿಚಾರದಲ್ಲಿ ಈ ಧೋರಣೆ ಏಕೆ?. ಸರ್ಕಾರ ವಿಳಂಬ ಮಾಡದೇ ಕಾಲಮಿತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next