Advertisement

Assembly: ಸುರತ್ಕಲ್‌ ಮಾರುಕಟ್ಟೆ ಕಾಮಗಾರಿಗೆ ಶೀಘ್ರ ಕಾರ್ಯಾದೇಶ: ಸಚಿವ ಬೈರತಿ ಸುರೇಶ್‌

11:19 PM Jul 23, 2024 | Team Udayavani |

ಬೆಂಗಳೂರು: ಸುರತ್ಕಲ್‌ ಮಾರುಕಟ್ಟೆ ಕಾಮಗಾರಿಗೆ ಶೀಘ್ರವೇ ಕಾರ್ಯಾದೇಶ ನೀಡುವುದಾಗಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಭರವಸೆ ನೀಡಿದರು.

Advertisement

ವಿಧಾನಸಭೆಯಲ್ಲಿ ಗಮನ ಸೆಳೆದ ಬಿಜೆಪಿಯ ಡಾ. ಭರತ್‌ ಶೆಟ್ಟಿ, ಸುರತ್ಕಲ್‌ ಮಾರುಕಟ್ಟೆ ಕಾಮಗಾರಿಯ ಟೆಂಡರ್‌ ಆಗಿ ನಾಲ್ಕೈದು ವರ್ಷಗಳಾದರೂ ಕಾರ್ಯಾದೇಶ ಸಿಗದೆ ಕಾಮಗಾರಿ ಆರಂಭಿಸಿಲ್ಲ. ಆ ಜಾಗವೀಗ ಭೂತ ಬಂಗಲೆಯಂತಾಗಿದ್ದು, ಕಾರ್ಯಾದೇಶ ನೀಡಿ ಕಾಮಗಾರಿ ಆರಂಭಿಸಿ ಎಂದು ಆಗ್ರಹಿಸಿದರು.

ಉತ್ತರಿಸಿದ ಸಚಿವರು, 2018ರಲ್ಲಿ ಟೆಂಡರ್‌ ಪ್ರಕ್ರಿಯೆ ಆರಂಭವಾಗಿದ್ದು, ತಾಂತ್ರಿಕ ಸಮಸ್ಯೆ ಹಾಗೂ ಜಾಗದ ಸಮಸ್ಯೆಯಿಂದಾಗಿ ವಿಳಂಬವಾಗಿತ್ತು. ಅನಂತರ ಚುನಾವಣೆ ನೀತಿಸಂಹಿತೆಯಿಂದಾಗಿ ಕಾರ್ಯಾದೇಶ ಕೊಟ್ಟಿರಲಿಲ್ಲ. ಈಗ ಸಮಸ್ಯೆಗಳೆಲ್ಲವೂ ಬಗೆಹರಿದಿದ್ದು, 54.66 ಕೋಟಿ ರೂ.ಗಳ ಕಾಮಗಾರಿಗೆ ಮಂಜೂರಾತಿ ನೀಡಲಾಗಿದೆ. ಶೀಘ್ರವೇ ಕಾರ್ಯಾದೇಶ ಸಹ ಕೊಡುತ್ತೇವೆ ಎಂದರು.

ಮಂಗಳೂರು ಆರ್‌ಟಿಒದಲ್ಲೇ ಆಟೋ ಮೀಟರ್‌
ಆಟೋ ರಿಕ್ಷಾ ಮೀಟರ್‌ ಮುದ್ರೆಗಾಗಿ ಕುಲಶೇಖರಕ್ಕೆ ಹೋಗುವ ಬದಲು ವಾರದಲ್ಲಿ ಎರಡು ದಿನ ಮಂಗಳೂರಿನ ಆರ್‌ಟಿಒ ಕಚೇರಿಯಲ್ಲೇ ಅವಕಾಶ ಮಾಡಿಕೊಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಭರವಸೆ ಕೊಟ್ಟರು. ರಿಕ್ಷಾ ಚಾಲಕರು ಮೀಟರ್‌ ಮುದ್ರೆಗಾಗಿ 15 ಕಿ.ಮೀ. ದೂರದ ಕುಲಶೇಖರಕ್ಕೆ ಹೋಗಬೇಕಿದೆ. ನಗರದಲ್ಲಿ 8 ಸಾವಿರ ರಿಕ್ಷಾಗಳಿದ್ದು, ಪ್ರತೀ ದಿನ ಮೀಟರ್‌ ಮುದ್ರೆ ನೀಡುವುದಿಲ್ಲ. ಸರದಿಯಲ್ಲಿ ನಿಂತು ಮೀಟರ್‌ ಮುದ್ರೆ ಸಿಗದೆ ಮರಳುತ್ತಿದ್ದಾರೆ. ಹೀಗಾಗಿ ಮಂಗಳೂರು ಆರ್‌ಟಿಒ ಕಚೇರಿಯಲ್ಲೇ ಮೀಟರ್‌ ಮುದ್ರೆ ನೀಡುವ ವ್ಯವಸ್ಥೆ ಮಾಡಿಕೊಡುವಂತೆ ವೇದವ್ಯಾಸ ಕಾಮತ್‌ ಮನವಿ ಮಾಡಿದರು.

ಉಡುಪಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪಿಸಿ
ಉಡುಪಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ಮಾಡುವಂತೆ ಬಿಜೆಪಿಯ ಯಶಪಾಲ್‌ ಸುವರ್ಣ ಆಗ್ರಹಿಸಿದರು. ಕಾನೂನು ಸಚಿವ ಎಚ್‌.ಕೆ. ಪಾಟೀಲ್‌ ಅವರು ಸದನದಲ್ಲಿ ಇಲ್ಲದ ಕಾರಣ ಅನಂತರ ಉತ್ತರ ಕೊಡಿಸುವುದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next