Advertisement

ರಾಷ್ಟ್ರಪತಿ ಚುನಾವಣೆ ಸಲೀಸು, ಮುಂದೆ ಗುಜರಾತ್‌ ಟಾರ್ಗೆಟ್‌

09:26 PM Mar 10, 2022 | Team Udayavani |

ನವದೆಹಲಿ: ಪಂಚರಾಜ್ಯಗಳಲ್ಲಿ ನಾಲ್ಕನ್ನು ಗೆಲ್ಲುವ ಮೂಲಕ ತನ್ನ ಶಕ್ತಿಯನ್ನು ಹಾಗೆಯೇ ಉಳಿಸಿಕೊಂಡಿರುವ ಬಿಜೆಪಿ, ರಾಷ್ಟ್ರಪತಿ ಚುನಾವಣೆಯನ್ನು ಸಲೀಸು ಮಾಡಿಕೊಂಡಿದೆ.

Advertisement

ಒಂದು ವೇಳೆ, ಉತ್ತರ ಪ್ರದೇಶದಲ್ಲಿ ಹಿನ್ನಡೆಯಾಗಿದ್ದರೆ, ರಾಷ್ಟ್ರಪತಿ ಚುನಾವಣೆ ವೇಳೆ ಒಂದಷ್ಟು ಸಂಕಷ್ಟ ಎದುರಾಗುತ್ತಿತ್ತು ಎಂಬ ರಾಜಕೀಯ ವಿಶ್ಲೇಷಣೆಗಳಿದ್ದವು. ಇದಕ್ಕೆ ಕಾರಣ, ಉತ್ತರ ಪ್ರದೇಶದ ಮತಮೌಲ್ಯ ಇಡೀ ದೇಶದಲ್ಲೇ ಅತ್ಯಂತ ಹೆಚ್ಚಾಗಿದೆ ಎಂಬುದು.

ಈಗಿನ ಪರಿಸ್ಥಿತಿಯಲ್ಲಿ ರಾಷ್ಟ್ರಪತಿ ಚುನಾವಣೆಗೆ ಬೇಕಾದ ಶೇ.50 ಮತಗಳಿಗಿಂತ ಕೊಂಚ ಕಡಿಮೆ ಮತಗಳು ಎನ್‌ಡಿಎ ಬುಟ್ಟಿಯಲ್ಲಿವೆ. ಇದಕ್ಕಾಗಿ ಒಡಿಶಾದ ನವೀನ್‌ ಪಟ್ನಾಯಕ್‌, ಆಂಧ್ರದ ಜಗನ್‌ ಮೋಹನ್‌ ರೆಡ್ಡಿ ಅವರ ನೆರವು ಪಡೆಯಬಹುದು. ಅಲ್ಲದೆ, ಈಗ ಮೋದಿ ಮತ್ತು ಅಮಿತ್‌ ಶಾ ಜೋಡಿ, ಮುಂದಿನ ರಾಷ್ಟ್ರಪತಿ ಯಾರಾಗಬಹುದು ಎಂಬುದನ್ನು ಈಗ ಸಲೀಸಾಗಿ ನಿರ್ಧರಿಸ ಬಹುದಾಗಿದೆ.

ವಿಪಕ್ಷಗಳ ಲೆಕ್ಕಾಚಾರ ಕೆಳಗೆ
ಈಗಿನ ಫ‌ಲಿತಾಂಶ ಬಿಜೆಪಿಗೆ ಲಾಭ ತಂದುಕೊಟ್ಟಿದೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ, ಪ್ರತಿಪಕ್ಷಗಳ ಯೋಜನೆಗೆ ಶಾಕ್‌ ನೀಡಿದೆ. ಈಗಾಗಲೇ ಟಿಆರ್‌ಎಸ್‌ ನಾಯಕ ಮತ್ತು ತೆಲಂಗಾಣ ಸಿಎಂ ಕೆ.ಸಿ.ಚಂದ್ರಶೇಖರ ರಾವ್‌ ಅವರು, ಪ್ರತಿಪಕ್ಷ ನಾಯಕರ ಭೇಟಿ ಮಾಡಿ, ವಿಪಕ್ಷಗಳ ಕಡೆಯಿಂದ ಶರದ್‌ ಪವಾರ್‌ ಅವರನ್ನು ರಾಷ್ಟ್ರಪತಿ ಚುನಾವಣೆಯಲ್ಲಿ ಕಣಕ್ಕಿಳಿಸಲು ಪ್ಲ್ರಾನ್‌ ಮಾಡಿದ್ದರು. ಒಂದೊಮ್ಮೆ ಉತ್ತರ ಪ್ರದೇಶದಲ್ಲಿ ಅಖೀಲೇಶ್‌ ಕೈ ಮೇಲಾದರೆ, ಯತ್ನಿಸಬಹುದು ಎಂಬುದು ಅವರ ಲೆಕ್ಕಾಚಾರವಾಗಿತ್ತು. ಹಾಗೆಯೇ, ಜೆಡಿಯು ನಾಯಕ ನಿತೀಶ್‌ ಕುಮಾರ್‌ ಅವರನ್ನು ಎನ್‌ಡಿಎಯಿಂದ ಬೇರ್ಪಡಿಸಿ, ಚುನಾವಣೆಗೆ ನಿಲ್ಲಿಸುವ ಪ್ರಯತ್ನಗಳೂ ನಡೆದಿದ್ದವು. ಆದರೆ ನಿತೀಶ್‌ ಒಪ್ಪಿರಲಿಲ್ಲ.

ಹೇಗೆ ಲೆಕ್ಕಾಚಾರ?
ಇಡೀ ದೇಶದಲ್ಲಿ ಉತ್ತರ ಪ್ರದೇಶ ಅತ್ಯಂತ ದೊಡ್ಡ ರಾಜ್ಯ. ಹೀಗಾಗಿ ಇಲ್ಲಿನ ಪ್ರತಿಯೊಬ್ಬ ಶಾಸಕನ ಮತಮೌಲ್ಯ 208 ಇದೆ. ಪಂಜಾಬ್‌ನ ಮತಮೌಲ್ಯ 116, ಉತ್ತರಾಖಂಡ 64, ಗೋವಾ 20 ಮತ್ತು ಮಣಿಪುರದ್ದು 18 ಇದೆ. ಕಳೆದ ಬಾರಿ ಉತ್ತರ ಪ್ರದೇಶದಲ್ಲಿ 300ಕ್ಕೂ ಹೆಚ್ಚು ಶಾಸಕರನ್ನು ಹೊಂದಿದ್ದ ಬಿಜೆಪಿ, ಅತ್ಯಂತ ಸಲೀಸಾಗಿ ರಾಮನಾಥ್‌ ಕೋವಿಂದ್‌ ಅವರನ್ನು ರಾಷ್ಟ್ರಪತಿ ಹುದ್ದೆಗೆ ಆರಿಸಿತ್ತು. ಈ ಬಾರಿ ಉತ್ತರ ಪ್ರದೇಶದಲ್ಲಿ ಕೊಂಚ ಕಡಿಮೆಯಾಗಿದ್ದರೂ, ಬೇಕಾದ ಮತ ಪಡೆಯುವುದಕ್ಕೆ ತೊಂದರೆಗಳಾಗುವುದಿಲ್ಲ ಎಂದೇ ವಿಶ್ಲೇಷಿಸಲಾಗಿದೆ.

Advertisement

ಗುಜರಾತ್‌, ಹಿಮಾಚಲ ಪ್ರದೇಶ ಟಾರ್ಗೆಟ್‌
ಈ ವರ್ಷಾಂತ್ಯದಲ್ಲಿ ಬಿಜೆಪಿಯ ಅತ್ಯಂತ ಪ್ರಮುಖ ರಾಜ್ಯ ಹಾಗೂ ಪ್ರಧಾನಿ ಮೋದಿ ಅವರ ತವರು ರಾಜ್ಯ ಗುಜರಾತ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಕೊಂಚ ಹಿನ್ನಡೆಯಾಗಿತ್ತು. ಈಗ ಪ್ರಧಾನಿ ಮೋದಿ ಅವರು ಈಗಿನಿಂದಲೇ ತಯಾರಿ ಶುರು ಮಾಡಲಿದ್ದಾರೆ. ಈ ವಾರವೇ ಗುಜರಾತ್‌ಗೆ ತೆರಳಲಿರುವ ಪ್ರಧಾನಿ ಮೋದಿ ಅವರು, ಎರಡು ದಿನಗಳ ವಾಸ್ತವ್ಯ ಹೂಡಲಿದ್ದು, ಗುಜರಾತ್‌ ಚುನಾವಣಾ ಪ್ರಚಾರ ಆರಂಭ ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ. ಹಾಗೆಯೇ ಹಿಮಾಚಲ ಪ್ರದೇಶದ ಚುನಾವಣೆಗೂ ಸಿದ್ಧತೆ ಶುರುವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next