Advertisement
90 ಸ್ಥಾನಗಳ ವಿಧಾನಸಭೆಗೆ ಒಟ್ಟು 3 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಸೆ.18ರಂದು ಮೊದಲ ಹಂತ, ಸೆ.25ರಂದು 2ನೇ ಹಂತ ಹಾಗೂ ಅಕ್ಟೋಬರ್ 1ರಂದು 3ನೇ ಹಂತದ ಚುನಾವಣೆ ನಡೆಯಲಿದೆ. ಈ ಬಾರಿ ಬರೋಬ್ಬರಿ 908 ಮಂದಿ ಸ್ಪರ್ಧಿಗಳು ಕಣದಲ್ಲಿದ್ದಾರೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಈ ಚುನಾವಣೆಯಲ್ಲಿ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದರೆ, ಪ್ರಾದೇಶಿಕ ಪಕ್ಷಗಳು ತಮ್ಮದೇ ಸರಕಾರ ರಚಿಸಿ ಹಕ್ಕುಗಳಿಗೆ ಹೋರಾಟ ನಡೆಸಲು ಸಿದ್ಧತೆ ನಡೆಸಿವೆ.
ಜಮ್ಮು-ಕಾಶ್ಮೀರ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಜಮ್ಮು ಪ್ರಾಂತ್ಯದಲ್ಲೇ ಹೆಚ್ಚಿನ ಸ್ಪರ್ಧಿಗಳನ್ನು ಕಣಕ್ಕಿಳಿಸಿವೆ. ನ್ಯಾಶನಲ್ ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಒಟ್ಟು 38 ಸ್ಥಾನಗಳಲ್ಲಿ ಸ್ಪರ್ಧೆ ಮಾಡುತ್ತಿದ್ದು, ಜಮ್ಮು ವಲಯದಲ್ಲಿ 29 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕಾಶ್ಮೀರ ವಲಯದಲ್ಲಿ 9 ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸಿದೆ. ಬಿಜೆಪಿ ಒಟ್ಟು 62 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದು, ಜಮ್ಮು ವಲಯದಲ್ಲಿ 43 ಸ್ಥಾನಗಳಲ್ಲಿ ಸ್ಪರ್ಧಿಗಳನ್ನು ಕಣಕ್ಕಿಳಿಸಿದೆ. ಕಾಶ್ಮೀರದಲ್ಲಿ 19 ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸಿದೆ. ಹೀಗಾಗಿ ಜಮ್ಮು ವಲಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರಸ್ಪರ್ಧೆ ಏರ್ಪಡುವ ಸಾಧ್ಯತೆಗಳಿವೆ. ಕಾಶ್ಮೀರದಲ್ಲಿ ಸ್ಥಳೀಯ ಪಕ್ಷಗಳ ಹವಾ
ಕಾಶ್ಮೀರ ವಲಯದಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಕಾರುಬಾರು. ಪಿಡಿಪಿ, ನ್ಯಾಶನಲ್ ಕಾಂಗ್ರೆಸ್, ಅಪ್ನಿ ಪಕ್ಷ, ಡೆಮಾಕ್ರಟಿಕ್ ಪ್ರೊಗ್ರೆಸಿವ್ ಆಜಾದ್ ಪಕ್ಷ, ಕಾಶ್ಮೀರ್ ಪೀಪಲ್ಸ್ ಮೂವ್‌ಮೆಂಟ್, ಕಾಶ್ಮೀರ್ ಅವಾಮಿ ನ್ಯಾಶನಲ್ ಕಾಂಗ್ರೆಸ್ ಪಕ್ಷಗಳದ್ದೇ ಈ ವಲಯದಲ್ಲಿ ಹೆಚ್ಚಿನ ಪ್ರಭಾವವಿದೆ. ಇಲ್ಲಿನ ಸ್ಪರ್ಧೆಯನ್ನು ಪಿಡಿಪಿ ಹಾಗೂ ಎನ್‌ಸಿ ನಡುವಿನ ನೇರ ಹಣಾಹಣಿ ಎಂದು ಗುರುತಿಸಲಾಗಿದೆ. ಅಲ್ಲದೇ ಈ ಪ್ರಾದೇಶಿಕ ಪಕ್ಷಗಳೇ ಸರಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾದೇ ಶಿಕ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಚುನಾವಣ ಪೂರ್ವ ಮೈತ್ರಿಗಳು ನಡೆಯದ ಕಾರಣ, ಫಲಿತಾಂಶದ ಬಳಿಕ ಈ ಪಕ್ಷಗಳು ಯಾರೊಂದಿಗೆ ಸೇರಿಕೊಳ್ಳಲಿವೆ ಎಂಬುದು ನಿಗೂಢವಾ ಗಿಯೇ ಉಳಿದಿವೆ. 370ನೇ ವಿಧಿ ರದ್ದಾದ ಬಳಿಕ ಈ ಪಕ್ಷಗಳು ಕೇಂದ್ರ ಸರಕಾರದ ವಿರುದ್ಧ ಮಾತಾನಾಡಿದ್ದು, ರಾಷ್ಟ್ರೀಯ ಪಕ್ಷಗ ಳನ್ನು ಧಿಕ್ಕರಿಸಿದ್ದು, ದಿಲ್ಲಿಯಲ್ಲಿ ತಲೆನೋವನ್ನು ಹೆಚ್ಚು ಮಾಡಿದೆ.
Related Articles
ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಮತ್ತು ನ್ಯಾಶನಲ್ ಕಾನ್ಫರೆನ್ಸ್ ಪಕ್ಷಗಳು ಮಾತ್ರ ಮೈತ್ರಿ ಮಾಡಿಕೊಂಡಿವೆ. ಇದು ಕಾಂಗ್ರೆಸ್‌ಗೆ ಲಾಭವಾಗುವ ಸಾಧ್ಯತೆಯನ್ನು ತೋರಿದೆ. ಫಾರೂಕ್ ಅಬ್ದುಲ್ಲಾ ನೇತೃತ್ವದ ಎನ್‌ಸಿ ಈ ಬಾರಿ 56 ಸ್ಥಾನಗಳಲ್ಲಿ ಸ್ಪರ್ಧೆ ಮಾಡುತ್ತಿದೆ. ಕಾಶ್ಮೀರದಲ್ಲಿ ಕಾಂಗ್ರೆಸ್‌ಗೆ 9 ಸ್ಥಾನಗಳನ್ನು ಬಿಟ್ಟುಕೊಟ್ಟಿದ್ದರೆ, ಜಮ್ಮುವಿನಲ್ಲಿ 29 ಸ್ಥಾನಗಳನ್ನು ಬಿಟ್ಟುಕೊಟ್ಟಿದೆ. ಈ 2 ಪಕ್ಷಗಳು ಹೆಚ್ಚಿನ ಸಂಖ್ಯೆಯಲ್ಲಿ ಜಯ ಸಾಧಿಸಿದರೆ ಇತರ ಸ್ಥಳೀಯ ನಾಯಕರನ್ನು ಸೆಳೆಯಲು ಚಿಂತನೆಗಳನ್ನು ನಡೆಸಿವೆ.
Advertisement
ಪ್ರತ್ಯೇಕತಾವಾದಿಗಳ ಪ್ರಭಾವಕಾಶ್ಮೀರ ಚುನಾವಣೆಯ ಮೇಲೆ ಪ್ರತ್ಯೇಕತಾವಾದಿಗಳ ಪ್ರಭಾವ ಇರುವುದನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಭಾರತ ಸ್ವಾತಂತ್ರ್ಯ ಪಡೆದುಕೊಂಡಾಗಿನಿಂದಲೂ ಜಮ್ಮು-ಕಾಶ್ಮೀರದಲ್ಲಿ ತೊಂದರೆ ನೀಡುತ್ತಿರುವುದು ಇದೇ ಪ್ರತ್ಯೇಕತಾವಾದಿಗಳು. ಪ್ರತೀ ಬಾರಿ ಚುನಾವಣೆಯ ಸಮಯದಲ್ಲಿ ಹಿಂಸಾಚಾರವನ್ನು ನಡೆಸಿ, ಜನರ ಮನಃಸ್ಥಿತಿಯನ್ನು ಬದಲು ಮಾಡುವಲ್ಲಿ ಇವರ ಪಾತ್ರವಿದೆ. ಆದರೆ 35 ವರ್ಷಗಳಲ್ಲೇ ಮೊದಲ ಬಾರಿ ಕಾಶ್ಮೀರದಲ್ಲಿ ಶಾಂತಿಯುತವಾಗಿ ಚುನಾವಣ ಪ್ರಚಾರ ನಡೆದಿರುವುದು ಪ್ರತ್ಯೇಕತಾವಾದಿಗಳ ಮೇಲೆ ಜನ ನಂಬಿಕೆ ಕಳೆದುಕೊಂಡಿರಬಹುದು ಎನ್ನಲಾಗುತ್ತಿದೆ. ಪಕ್ಷೇತರರಿಂದ ಅತಂತ್ರ ಸರಕಾರ?
ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಶೇ.40ಕ್ಕೂ ಹೆಚ್ಚು ಮಂದಿ ಪಕ್ಷೇತರರು ಸ್ಪರ್ಧೆ ಮಾಡುತ್ತಿದ್ದಾರೆ. ಒಟ್ಟು 908 ಮಂದಿಯಲ್ಲಿ 365 ಮಂದಿ ಪಕ್ಷೇತರ ಅಭ್ಯರ್ಥಿಗಳು ಈ ಬಾರಿ ಕಣದಲ್ಲಿದ್ದಾರೆ. ಇದು ಚುನಾವ ಣೆಯಲ್ಲಿ ಪಕ್ಷೇತರ ಅಭ್ಯರ್ಥಿಗಳ 2ನೇ ಗರಿಷ್ಠ ಸ್ಪರ್ಧೆಯಾಗಿದೆ. 2008ರಲ್ಲಿ 1353 ಮಂದಿ ಪಕ್ಷೇತರರು ಕಣಕ್ಕಿಳಿದಿದ್ದರು. ಕಾಶ್ಮೀರದಲ್ಲಿ ಪ್ರತೀ ಕ್ಷೇತಕ್ಕೂ ಕನಿಷ್ಠ 5 ಮಂದಿ ಪಕ್ಷೇತರ ಅಭ್ಯರ್ಥಿಗಳಿದ್ದಾರೆ. ಇವರು ಕನಿಷ್ಠ ಪ್ರಮಾಣದ ಮತಗಳನ್ನು ಕಿತ್ತುಕೊಂಡರೂ ಉಳಿದ ಅಭ್ಯರ್ಥಿಗಳ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಭಾರೀ ವ್ಯತ್ಯಾಸವಾಗಲಿದೆ. ಕಾಶ್ಮೀರ ಚುನಾವಣೆಯ ಪ್ರಮುಖ ವಿಷಯಗಳು
-ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನದ ಭರವಸೆ
-ಕಾಶ್ಮೀರದ ಅಸ್ಮಿತೆಗೆ ಪ್ರಾದೇಶಿಕ ಪಕ್ಷಗಳ ಕೊಡುಗೆ
-370ನೇ ವಿಧಿಯನ್ನು ಮರಳಿ ತರುವ ಭರವಸೆ
-ಭಯೋತ್ಪಾದನೆ ನಿರ್ಮೂಲನೆಯ ಆಶ್ವಾಸನೆ
-ಪ್ರಾದೇಶಿಕ ಪಕ್ಷಗಳು ಮಾಡಿರುವ ಕೆಲಸಗಳು
-ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ ಘೋಷಣೆ -ಗಣೇಶ್ ಪ್ರಸಾದ್