Advertisement

ಕಮಲ ಅಭ್ಯರ್ಥಿಯತ್ತ , ಕೈ-ದಳ ಅಭ್ಯರ್ಥಿಗಳ ಚಿತ್ತ

03:14 PM Apr 01, 2023 | Team Udayavani |

ಬಂಗಾರಪೇಟೆ: ರಾಜ್ಯ ವಿಧಾನ ಸಭೆ ಚುನಾವಣೆ ಮುಹೂರ್ತ ಫಿಕ್ಸ್‌ ಆಗಿದ್ದು, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳಲ್ಲಿ ಅಭ್ಯರ್ಥಿಗಳ ಘೋಷಣೆಯೂ ಆಗಿದೆ. ಬಿಜೆಪಿಯಲ್ಲಿ ಮೂವರು ಪ್ರಬಲ ಆಕಾಂಕ್ಷಿಗಳ ನಡುವೆ ಟಿಕೆಟ್‌ಗಾಗಿ ಫೈಟ್‌ ನಡೆಯುತ್ತಿದ್ದು, ಬಿಜೆಪಿ ಕಾರ್ಯಕರ್ತರ ಜತೆಗೆ ಕಾಂಗ್ರೆಸ್‌-ಜೆಡಿಎಸ್‌ನಲ್ಲಿಯೂ ಟಿಕೆಟ್‌ ಯಾರಿಗೆಂಬ ಕಾತುರ ಹೆಚ್ಚಾಗಿದೆ.

Advertisement

ಬಂಗಾರಪೇಟೆ ವಿಧಾನ ಸಭಾ ಮೀಸಲು ಕ್ಷೇತ್ರದಲ್ಲಿ ಚುನಾವಣಾ ಕಾವು ದಿನಾಂಕ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳಲ್ಲಿ ಪೈಪೋಟಿ ಹೆಚ್ಚಾಗಿದ್ದು, ಹೊಸ ಹುರುಪುನೊಂದಿಗೆ ಮುಖಂಡರು ಚುನಾವಣಾ ರಾಜಕೀಯ ಲೆಕ್ಕಾಚಾರದಲ್ಲಿ ಮುಳಗಿದ್ದಾರೆ. ಆದರೆ, ಬಿಜೆಪಿಯಲ್ಲಿ ಮಾತ್ರ ಇನ್ನೂ ತಟಸ್ಥವಾಗಿದ್ದು, ಅಭ್ಯರ್ಥಿ ಆಯ್ಕೆಯಾಗುವವರೆಗೂ ಚುರುಕು ಇಲ್ಲದಂತಾಗಿದೆ. ಕಾಂಗ್ರೆಸ್‌ನಲ್ಲಿ ಹಾಲಿ ಶಾಸಕ ಎಸ್‌.ಎನ್‌.ನಾರಾ ಯಣಸ್ವಾಮಿ ಹೆಸರನ್ನು ಪಕ್ಷವು ಘೋಷಣೆ ಮಾಡಿ ರುವುದರಿಂದ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಸತತ 3ನೇ ಬಾರಿಗೆ ಗೆಲುವು ಸಾಧಿಸಲು ಸ್ಪರ್ಧಿಗಿಳಿದಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಇಲ್ಲದಿದ್ದರೂ, ಕ್ಷೇತ್ರದಲ್ಲಿ ನೂರಾರು ಕೋಟಿಗಳ ಅನುದಾನದಲ್ಲಿ ಕ್ಷೇತ್ರದ ಸಮಗ್ರ ಅಭಿವೃದ್ಧಿಪಡಿಸಲಾಗಿದೆ ಎಂಬ ಆಶಾಭಾವನೆಯಿಂದ ಚುನಾವಣೆ ಕಣಕ್ಕೆ ಸಿದ್ಧರಾಗಿದ್ದಾರೆ.

ಕಾರ್ಯಕರ್ತರಿಗೆ ಮನ್ನಣೆ ಇಲ್ಲ: ನಾರಾಯಣಸ್ವಾಮಿ ಕ್ಷೇತ್ರದಲ್ಲಿ ಮೊದಲನೇ ಅವಧಿಯಲ್ಲಿ ಅಭಿವೃದ್ಧಿ ಮಾಡಿ ರುವ ಬಗ್ಗೆ ಹಾಗೂ ಪಟ್ಟಣದಲ್ಲಿ ಸರ್ಕಾರಿ ಆಸ್ಪತ್ರೆ ಮತ್ತು ಡಬಲ್‌ ರಸ್ತೆ ನಿರ್ಮಾಣ ಮಾಡಿರುವುದಕ್ಕೆ ಜನರ ಮನ್ನಣೆ ಇರುವುದರಿಂದ ಗೆಲುವು ನನ್ನದೇ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ತಾಲೂಕಿನಲ್ಲಿ ಎಷ್ಟೇ ಅಭಿವೃದ್ಧಿಯಾದರೂ, ಕಾಂಗ್ರೆಸ್‌ ನಿಷ್ಠಾವಂತ ಕಾರ್ಯಕರ್ತರಿಗೆ ಮನ್ನಣೆ ಸಿಗಲಿಲ್ಲ ಹಾಗೂ ಪಕ್ಷದ ಕಾರ್ಯ ಕರ್ತರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್‌ನ ಪ್ರಭಾವಿ ಮುಖಂಡರಾಗಿದ್ದ ಕೆ.ಚಂದ್ರಾರೆಡ್ಡಿ ಬಿಜೆಪಿ ಸೇರಿದ್ದಾರೆ. ಹುತ್ತೂರು ಹೋಬಳಿಯಲ್ಲಿ ವಡಗೂರು ಹರೀಶ್‌ ಜೆಡಿಎಸ್‌ ಸೇರಿದ್ದಾರೆ. ಇನ್ನೂ ಕೆ.ಎಚ್‌.ಮುನಿಯಪ್ಪ ಬಲಗೈ ಬಂಟ ರಾಮಚಂದ್ರಪ್ಪ ತಟಸ್ಥರಾಗಿದ್ದಾರೆ.

ಜೆಡಿಎಸ್‌ನಲ್ಲಿ ಕಾರ್ಯಕರ್ತರ ಕೊರತೆ : ಜೆಡಿಎಸ್‌ ಪಕ್ಷದಲ್ಲಿ ಕಳೆದ ಐದು ವರ್ಷದಿಂದ ಪಕ್ಷದ ಸಂಘಟನೆ ಮಾಡುತ್ತಿರುವ ಎಂ.ಮಲ್ಲೇಶಬಾಬು ಅವರಿಗೆ ಈಗಾಗಲೇ ಜೆಡಿಎಸ್‌ ರಾಜ್ಯಾಧ್ಯಕ್ಷ ಹೆಚ್‌.ಡಿ. ಕುಮಾರಸ್ವಾಮಿ ಟಿಕೆಟ್‌ ಘೋಷಣೆ ಮಾಡಿದ್ದಾರೆ. ಮನೆಮನೆ ಕುಮಾರಣ್ಣ ಎಂಬ ಕಾರ್ಯಕ್ರಮದ ಮೂಲಕ ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಜೆಡಿಎಸ್‌ಗೆ ಮತ ನೀಡುವಂತೆ ಪ್ರಚಾರದಲ್ಲಿ ತೊಡಗಿದ್ದಾರೆ. ಜೆಡಿಎಸ್‌ ಪಕ್ಷದಲ್ಲಿ ಅಭ್ಯರ್ಥಿ ಎಷ್ಟೇ ಪ್ರಮಾಣಿಕರಾಗಿದ್ದರೂ ಸಹ ಪಕ್ಷದಲ್ಲಿ ಮುಖಂಡರ ಹಾಗೂ ಕಾರ್ಯಕರ್ತರ ಕೊರತೆ ಎದ್ದುಕಾಣುತ್ತಿದೆ. ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಕ್ಷದಲ್ಲಿ ಬಿಜೆಪಿ ಅಭ್ಯರ್ಥಿ ಟಿಕೆಟ್‌ ಘೋಷಣೆ ಆಧಾ ರದ ಮೇಲೆ ಪೈಪೋಟಿ ನಡೆಸಲು ಕಾಯುತ್ತಿದ್ದಾರೆ.

ಟಿಕೆಟ್‌ ಯಾರಿಗೆ ಸಿಕ್ಕರೂ ಒಗ್ಗಟ್ಟಿನಿಂದ ಕಾರ್ಯ: ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಕ್ಕೆ ನೇರಾ ಪೈಪೋಟಿ ನೀಡುವ ಬಿಜೆಪಿ ಪಕ್ಷದಲ್ಲಿ ಟಿಕೆಟ್‌ಗಾಗಿಯೇ ಬಿಗ್‌ ಫೈಟ್‌ ನಡೆಯುತ್ತಿದೆ. ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಅವರ ಪುತ್ರ ಬಿ.ವಿ.ಮಹೇಶ್‌ ಹಾಗೂ ಬೈರಗಾನಹಳ್ಳಿ ವಿ.ಶೇಷು ನಡುವೆ ಟಿಕೆಟ್‌ಗಾಗಿ ಫೈಟ್‌ ನಡೆಯುತ್ತಿದೆ. ಟಿಕೆಟ್‌ ಯಾರಿಗೇ ಸಿಕ್ಕರೂ ಒಟ್ಟಿಗೆ ಕೆಲಸ ಮಾಡುವುದಾಗಿ ಮೂವರು ಮುಖಂಡರು ಬಹಿರಂಗ ಹೇಳಿಕೆ ನೀಡಿದ್ದಾರೆ.

Advertisement

ಇದರ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ, ಸಂಸದ ಎಸ್‌.ಮುನಿಸ್ವಾಮಿ ಸಮ್ಮುಖದಲ್ಲಿ ಕೋಲಾರಮ್ಮ ಮೇಲೆ ಆಣೆ ಪ್ರಮಾಣ ಮಾಡಿದ್ದಾರೆ. ರಾಜ್ಯದಲ್ಲಿ ಚುನಾವಣೆ ದಿನಾಂಕ ಘೋಷಣೆಯಾಗಿ ದ್ದರೂ, ಸಹ ಕ್ಷೇತ್ರದಲ್ಲಿ ಬಿಜೆಪಿ ಘೋಷಣೆ ಮಾಡದೇ ಇರುವುದರಿಂದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷದಲ್ಲಿ ಇನ್ನೂ ಕಾತುರ ಹೆಚ್ಚಾಗಿದೆ. ಬಿಜೆಪಿಯ ಮೂವರಲ್ಲಿ ಯಾರಿಗೆ ಟಿಕೆಟ್‌ ಸಿಗಲಿದೆ. ಯಾರಿಗೆ ಟಿಕೆಟ್‌ ಕೊಟ್ಟರೆ ಅವರನ್ನು ಎದುರಿಸುವುದು ಹೇಗೆ, ಯಾರಿಗೆ ಟಿಕೆಟ್‌ ಇಲ್ಲ ಅಂತಹವರನ್ನು ತಮ್ಮತ್ತ ಸೆಳೆದುಕೊಳ್ಳಲು ಯಾವ ತಂತ್ರ ರೂಪಿಸಬೇಕು ಎಂದೆಲ್ಲಾ ರಾಜಕೀಯ ಲೆಕ್ಕಾಚಾರ ಮಾಡಿಕೊಂಡು ಬಿಜೆಪಿ ಟಿಕೆಟ್‌ ಘೋಷಣೆಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.

ಬಂಗಾರಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ಸ್ವಾತಂತ್ರ್ಯ ಬಂದಾಗಿನಿಂದ ಯಾವುದೇ ಶಾಸಕರು ಮಾಡದೇ ಇರುವಂತಹ ಕಾರ್ಯವನ್ನು ತನ್ನ ಹತ್ತು ವರ್ಷಗಳ ಅಧಿಕಾರಾವಧಿಯಲ್ಲಯೇ ಅಭಿವೃದ್ಧಿಪಡಿಸಿದ್ದೇನೆ. ಬಿಜೆಪಿಯಲ್ಲಿ ಟಿಕೆಟ್‌ ಗೊಂದಲ ಹಾಗೂ ಜೆಡಿಎಸ್‌ ಪಕ್ಷದಲ್ಲಿ ಕಾರ್ಯಕರ್ತರ ಕೊರತೆ ಇರುವುದರಿಂದ ಬಲಿಷ್ಠವಾಗಿರುವ ಕಾಂಗ್ರೆಸ್‌ ಅಭ್ಯರ್ಥಿಗೆ ಸತತ 3ನೇ ಬಾರಿಗೆ ಗೆಲುವು ಶತಸಿದ್ಧವಾಗಿದ್ದು, ಕ್ಷೇತ್ರದಲ್ಲಿ ಅಭಿವೃದ್ಧಿಗೆ ಮತದಾರರು ಜೈ ಅಂತಾರೇ, – ಎಸ್‌.ಎನ್‌.ನಾರಾಯಣಸ್ವಾಮಿ, ಕಾಂಗ್ರೆಸ್‌ ಅಭ್ಯರ್ಥಿ, ಬಂಗಾರಪೇಟೆ ಕ್ಷೇತ್ರ.

ಬಂಗಾರಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ ಐದಾರು ವರ್ಷದಿಂದ ಜೆಡಿಎಸ್‌ ಪಕ್ಷದ ಸಂಘಟನೆ ಮಾಡುತ್ತಿದ್ದೇನೆ. ಕ್ಷೇತ್ರದಲ್ಲಿ ಹೆಚ್‌.ಡಿ.ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿಗಳ ಅಧಿಕಾರಾವಧಿ ಯಲ್ಲಿ ಮಾಡಿರುವ ಸಾಧನೆಗಳೇ ಜೆಡಿಎಸ್‌ ಪಕ್ಷದ ಸಂಘಟನೆಗೆ ವರದಾನ. ಪ್ರತಿಯೊಂದು ಗ್ರಾಮದಲ್ಲಿಯೂ ಜೆಡಿಎಸ್‌ ಪಕ್ಷದ ಅಲೆ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ಗೆ ಅಧಿಕಾರ ನೀಡುವುದು ಶತಸಿದ್ಧವಾಗಿದೆ. – ಎಂ.ಮಲ್ಲೇಶಬಾಬು, ಜೆಡಿಎಸ್‌ ಅಭ್ಯರ್ಥಿ, ಬಂಗಾರಪೇಟೆ ಕ್ಷೇತ್ರ.

-ಎಂ.ಸಿ.ಮಂಜುನಾಥ್‌.

Advertisement

Udayavani is now on Telegram. Click here to join our channel and stay updated with the latest news.

Next