ದಾವಣಗೆರೆ: ಈ ಬಾರಿ ವಿಧಾನಸಭಾ ಚುನಾವಣೆಗೆ ದಾವಣಗೆರೆ ಜಿಲ್ಲೆಯಲ್ಲಿ ಕಣಕ್ಕಿಳಿದಿರುವ ಅಭ್ಯರ್ಥಿಗಳ ಪೈಕಿ ಕಾಂಗ್ರೆಸ್‌ನ ಹಿರಿಯ ಶಾಸಕ, ಮುತ್ಸದ್ದಿ ರಾಜಕಾರಣಿ ಶಾಮನೂರು ಶಿವಶಂಕರಪ್ಪ ಅತ್ಯಂತ ಹಿರಿಯರು. ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಯಶಸ್ಸು ಪಡೆದಿರುವ ಅವರು ನಗರಸಭೆ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದವರು.
ನಗರಸಭೆ ಅಧ್ಯಕ್ಷ, ಶಾಸಕ, ಸಂಸದ, ಸಚಿವರಾಗಿಯೂ ಸೇವೆ ಸಲ್ಲಿಸಿದವರು. ಈಗ 87ರ ಪ್ರಾಯದಲ್ಲೂ ಅತ್ಯಂತ ಕ್ರಿಯಾಶೀಲರಾಗಿದ್ದು ಗಮನ ಸೆಳೆಯುತ್ತಿದ್ದಾರೆ.
1931ರ ಜೂನ್ 16ರಂದು ಜನಿಸಿದ ಶಾಮನೂರು ನಗರಸಭೆ ಅಧ್ಯಕ್ಷರಾದ ನಂತರ ಅರಸು ಕಾಂಗ್ರೆಸ್‌ನಿಂದ ಲೋಕಸಭೆ
ಚುನಾವಣೆಗೆ ಸ್ಪರ್ಧಿಸಿ ಸೋಲುಂಡರು. 1994ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಅವರು, 1998ರಲ್ಲಿ ಲೋಕಸಭಾ ಸದಸ್ಯರಾದರು. 1999ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡು, 2004ರಲ್ಲಿ ಮತ್ತೆ ಶಾಸಕರಾಗಿ ಆಯ್ಕೆಯಾದರು.
2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ನಂತರ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ 2 ಬಾರಿ ಆಯ್ಕೆಯಾಗಿರುವ ಶಾಮನೂರು ಶಿವಶಂಕರಪ್ಪ ಜನರ ಪಾಲಿಗೆ “ಸಾಹುಕಾರ’ ಎಂದೇ ಹೆಸರುವಾಸಿ. ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿಯಾಗಿರುವ ಅವರು, ಅಖೀಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಹೌದು.
ಶಾಮನೂರು ಒಂದು ಕಾಲದಲ್ಲಿ ಕೆಪಿಸಿಸಿ ಕಾಯಂ ಖಜಾಂಚಿ ಎಂದೇ ಖ್ಯಾತಿವೆತ್ತಿದ್ದರು. ಸುಮಾರು 45 ವರ್ಷದ ರಾಜಕೀಯ ಜೀವನದಲ್ಲಿ ಶಾಮನೂರು ಅಧಿಕಾರವನ್ನೇ ಅನುಭವಿಸಿಲ್ಲ ಎಂಬ ಅಪವಾದ 2013ರ ಚುನಾವಣೆವರೆಗೆ ಇತ್ತು. 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಎಪಿಎಂಸಿ, ತೋಟಗಾರಿಕೆ ಖಾತೆ ವಹಿಸಿಕೊಂಡು ಸಂಪುಟದ ಅತ್ಯಂತ ಹಿರಿಯ ಸಚಿವ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2008 ಹಾಗೂ 2013ರಲ್ಲಿ ಜಯ ಸಾಧಿಸಿದ್ದ ಶಾಮನೂರು ಮತ್ತೂಮ್ಮೆ ಶಾಸಕರಾಗಲು ಕಾಂಗ್ರೆಸ್‌ನಿಂದ ಕಣಕ್ಕೆ ಇಳಿದಿದ್ದಾರೆ. ಈ ಬಾರಿಯೂ ಸುಲಭ ಜಯ ಪಡೆಯುವ ಹುಮ್ಮಸ್ಸಿನಲ್ಲಿದ್ದಾರೆ.
– ಪಾಟೀಲ ವೀರನಗೌಡ