Advertisement

ಕಾವೇರಿದ ಚುನಾವಣಾ ಫ‌ಲಿತಾಂಶ ಬೆಟ್ಟಿಂಗ್‌

06:20 AM May 14, 2018 | |

ಬೆಂಗಳೂರು: ಮತದಾನ ಮುಗಿದು ಫ‌ಲಿತಾಂಶ ಹೊರಬೀಳುವವರೆಗೆ ಚರ್ಚೆ ಜತೆಗೆ ಬೆಟ್ಟಿಂಗ್‌ ನಡೆಯುವುದು ಸಾಮಾನ್ಯ. ಆದರೆ, ಈ ಬಾರಿ ವಿಧಾನಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂಬ ಮತದಾನೋತ್ತರ ಸಮೀಕ್ಷೆಗಳಿಂದಾಗಿ ಬೆಟ್ಟಿಂಗ್‌ ದಂಧೆಗೆ ಬಿರುಸು ಬಂದಿದೆ.

Advertisement

ಚುನಾವಣೆ ನಡೆದ ಮೇಲೆ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆಂಬ ಬಗ್ಗೆ ಮೊದಲೇ ಮಾಹಿತಿ ಸಿಗುವುದರಿಂದ
ಪ್ರತಿ ಬಾರಿ ವಿಧಾನಸಭಾ ಕ್ಷೇತ್ರವಾರು ಯಾವ ಅಭ್ಯರ್ಥಿ ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎಂಬುದರ ಬಗ್ಗೆ
ಹೆಚ್ಚು ಬೆಟ್ಟಿಂಗ್‌ ನಡೆಯುತ್ತಿತ್ತು. ಆದರೆ, ಈ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ? ಅತಂತ್ರ ಪರಿಸ್ಥಿತಿ ಬರುತ್ತದೆಯೇ? ಹೀಗಾದರೆ ಯಾವ ಪಕ್ಷಗಳು ಸೇರಿಕೊಂಡು ಸರ್ಕಾರ ರಚಿಸುತ್ತವೆ ಎಂಬುದರ ಮೇಲೆಯೇ ಬೆಟ್ಟಿಂಗ್‌ ಕೇಂದ್ರೀಕೃತವಾಗಿದೆ.

ರಾಜ್ಯದ ಪ್ರಮುಖ ವಿಧಾನಸಭಾ ಕ್ಷೇತ್ರಗಳು ಸೇರಿ ರಾಜಧಾನಿಯ ಬಹುತೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ
ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಸಾವಿರಾರು ಕೋಟಿ ರೂ. ಬೆಟ್ಟಿಂಗ್‌ ವ್ಯವಹಾರ ಕಾವೇರಿದೆ. ಚುನಾವಣಾ
ಪೂರ್ವದಲ್ಲಿ ಬಹುತೇಕ ಬುಕ್ಕಿಗಳಲ್ಲಿ ಕಾಂಗ್ರೆಸ್‌ ಪರ ಬಾಜಿ ಕಟ್ಟುವ ವ್ಯವಹಾರ ಮುಂಚೂಣಿಯಲ್ಲಿತ್ತು. ಆದರೆ, ಮೇ
12ರಂದು ಪ್ರಕಟಗೊಂಡ ಮತದಾನೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲುವ ಮುನ್ಸೂಚನೆ ಸಿಗುತ್ತಿದ್ದಂತೆ ಬೆಟ್ಟಿಂಗ್‌ ವ್ಯವಹಾರ ಕೂಡ ಬಿಜೆಪಿ ಪರವಾಲಿದೆ ಎಂದು ಹೇಳಲಾಗುತ್ತಿದೆ.

ಸರಳ ಬಹುಮತ ಯಾವ ಪಕ್ಷ ಪಡೆಯಲಿದೆ ಎಂಬುದರ ಆಧಾರದಲ್ಲಿ ನಡೆಯುವ ಬೆಟ್ಟಿಂಗ್‌ ವ್ಯವಹಾರ
ಒಂದೆಡೆಯಾದರೆ, ಜೆಡಿಎಸ್‌ ನೆರವಿನೊಂದಿಗೆ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂಬ ನಂಬಿಕೆ ಮೇಲೆ ಬಾಜಿ
ಕಟ್ಟುತ್ತಿರುವವರ ಸಂಖ್ಯೆಯೂ ಸಾಕಷ್ಟಿದೆ. ಉದಾಹರಣೆಗೆ ಬಿಜೆಪಿ ಅಥವಾ ಕಾಂಗ್ರೆಸ್‌ ಸ್ವಂತ ಬಲದಿಂದ ಸರ್ಕಾರ
ರಚಿಸುತ್ತದೆ ಎಂದು 1000 ರೂ. ಬೆಟ್ಟಿಂಗ್‌ ಕಟ್ಟಿದಾತ ಗೆದ್ದರೆ ಸೋತ ವ್ಯಕ್ತಿ ಆತನಿಗೆ 1200 ರೂ. ನೀಡಬೇಕು.
ಒಂದು ವೇಳೆ ಅಧಿಕಾರಕ್ಕೆ ಬಾರದಿದ್ದರೆ ಆಗ ಆತ 1300 ರೂ. ಗೆದ್ದವನಿಗೆ ನೀಡಬೇಕು. ಅದೇ ರೀತಿ ಅತಂತ್ರ
ಪರಿಸ್ಥಿತಿ ಬಗ್ಗೆಯೂ ಬೆಟ್ಟಿಂಗ್‌ ನಡೆಯುತ್ತಿದೆ.

ನೂರು, ಸಾವಿರ ರೂ. ಲೆಕ್ಕಾಚಾರದಲ್ಲಿ ಆರಂಭವಾಗುವ ಬೆಟ್ಟಿಂಗ್‌ ಲಕ್ಷ, ಕೋಟಿ ರೂ.ವರೆಗೂ ವಿಸ್ತರಣೆಯಾಗ
ಬಹುದು. ಫ‌ಲಿತಾಂಶ ಹೊರಬೀಳುವವರೆಗೆ ನೂರಾರು ಕೋಟಿ ರೂ. ಬೆಟ್ಟಿಂಗ್‌ ನಡೆಯಬಹುದು ಎನ್ನುತ್ತಾರೆ ಬೆಂಗಳೂರಿನ ಬುಕ್ಕಿಯೊಬ್ಬರು.

Advertisement

ಬೆಟ್ಟಿಂಗ್‌ದಾರರ ಕ್ಷೇತ್ರಗಳು: ಹೈವೋಲ್ಟೆàಜ್‌ ಕ್ಷೇತ್ರಗಳೆಂದೇ ಪರಿಗಣಿತವಾಗಿರುವ ಸಿಎಂ ಸಿದ್ದರಾಮಯ್ಯ ಕಣಕ್ಕಿಳಿದಿರುವ ಚಾಮುಂಡೇಶ್ವರಿ, ಬಾದಾಮಿ ಕ್ಷೇತ್ರಗಳು, ನಾಗಮಂಗಲ, ಮಾಗಡಿ, ಶ್ರೀರಾಮುಲು ಸ್ಪರ್ಧಿಸಿರುವ ಮೊಳಕಾಲ್ಮೂರು, ಸಚಿವ ಎಂ.ಬಿ.ಪಾಟೀಲ್‌ ಸ್ಪರ್ಧಿಸಿರುವ ಬಬಲೇಶ್ವರ, ಎಚ್‌.ಡಿ ರೇವಣ್ಣ ಅಖಾಡದಲ್ಲಿರುವ ಹೊಳೆನರಸೀಪುರ, ಜಿ. ಪರಮೇಶ್ವರ್‌ ಕಣದಲ್ಲಿರುವ ಕೊರಟಗೆರೆ,ಕುಮಾರಸ್ವಾಮಿ ಸ್ಪರ್ಧಿಸಿರುವ ಚನ್ನಪಟ್ಟಣ ಬೆಟ್ಟಿಂಗ್ ನಡೆಸುವವರ ಫೇವರೆಟ್‌ ಕ್ಷೇತ್ರಗಳಾಗಿವೆ.

ರಾಜಕೀಯ ಬೆಟ್ಟಿಂಗ್‌ ದಂಧೆ ನಗರ ಪ್ರದೇಶಗಳಲ್ಲಿ ಹಣ ಬಾಕಿ ಕಟ್ಟುವ, ಸ್ನೇಹಿತರ ನಡುವೆ ಪಾರ್ಟಿ ಕೊಡಿಸುವ ಸ್ವರೂಪಗಳಲ್ಲಿದ್ದರೆ, ಗ್ರಾಮೀಣ ಭಾಗಗಳಲ್ಲಿ ಜಮೀನು ಅಡ ಇಡುವುದು, ಕುರಿ, ಮೇಕೆ “ಬೆಟ್‌’ ಮಾಡುವುದು ಗುಟ್ಟಾಗಿ ಉಳಿದಿರುವ ಸಂಗತಿಯೇನಲ್ಲ. ಕೆಲವರು ತಮ್ಮ ತೋಟ, ಗದ್ದೆಗಳನ್ನೂ ಬೆಟ್ಟಿಂಗ್‌ಗೆ ಬಳಸಿಕೊಳ್ಳುವುದೂ ಇದೆ.

ಅಕ್ರಮಗಳಿಗೆ ಕಡಿವಾಣ ಹಾಕಲು ಹದ್ದಿನ ಕಣ್ಣು
ಚುನಾವಣಾ ಅಕ್ರಮಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿರುವ ಫ್ಲೈಯಿಂಗ್‌ ಸ್ಕ್ಯಾಡ್‌ ಕೂಡ ದಂಧೆಕೋರರ, ಬುಕ್ಕಿಗಳ ವಹಿವಾಟುಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಆದರೆ, ಬೆಟ್ಟಿಂಗ್‌ ಕುರಿತ ದೂರುಗಳು ಬರುವುದಿಲ್ಲ. ಎಲ್ಲವೂ ತೆರೆ ಮರೆಯಲ್ಲೇ ನಡೆಯುವುದರಿಂದ ಅದಕ್ಕೆ ಕಡಿವಾಣ ಹಾಕುವುದು ಕಷ್ಟಸಾಧ್ಯ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಅಭಿಪ್ರಾಯಪಡುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next