ಚಿತ್ತಾಪುರ: ಮುಂಬರುವ ವಿಧಾನಸಭೆ ಚುನಾವಾಣೆಯಲ್ಲಿ ಸ್ಥಳೀಯ ನಾಯಕರಿಗೆ ಆದ್ಯತೆ ನೀಡಬೇಕು ಎಂದು ಮಾಜಿ ಶಾಸಕ ವಾಲ್ಮೀಕಿ ನಾಯಕ ಪುತ್ರ ವಿಠ್ಠಲ್ ನಾಯಕ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಬೆಣ್ಣೂರಕರ್ ಆಗ್ರಹಿಸಿದ್ದಾರೆ.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ರವಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಜಂಟಿಯಾಗಿ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷದ ಸಂಘಟನೆಯಲ್ಲಿ ಅನೇಕ ವರ್ಷಗಳಿಂದ ಸ್ಥಳೀಯ ಮಟ್ಟದಲ್ಲಿ ತಳಮಟ್ಟದಿಂದ ದುಡಿದ ಮುಖಂಡರು ಅನೇಕರು ಇದ್ದಾರೆ. ಹೀಗಾಗಿ ಬಿಜೆಪಿಯಲ್ಲಿ ಅಭ್ಯರ್ಥಿಗಳಿಗೆ ಕೊರತೆಯಿಲ್ಲ ಎಂದು ಹೇಳಿದರು.
ಚಿತ್ತಾಪುರ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಸಂಘಟನೆಯಲ್ಲಿ ದುಡಿದವರು ಅನೇಕ ನಾಯಕರು ಇದ್ದಾರೆ. ಹೀಗಾಗಿ ಚಿತ್ತಾಪುರ ಸ್ವಾಭಿಮಾನಕ್ಕೆ ಧಕ್ಕೆ ಬಾರದಂತೆ ಬಿಜೆಪಿ ಹೈ ಕಮಾಂಡ್ ತೀರ್ಮಾನ ಕೈಗೊಳ್ಳಬೇಕು. ಹಿಂದೆ ಆಗಿದ್ದ ತಪ್ಪುಗಳು ಮುಂದೆ ಆಗಬಾರದು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷದಲ್ಲಿ ಸರ್ವಾಧಿಕಾರಿ ಮತ್ತು ವಂಶಪಾರಂಪರ್ಯ ರಾಜಕಾರಣವಿದೆ. ಹೀಗಾಗಿ ಅಲ್ಲಿ ಸ್ಥಳೀಯರ ಬಗ್ಗೆ ಚಿಂತನೆಯಿಲ್ಲ. ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂಬ ವಿಚಾರವಿಲ್ಲ ಅದೇನಿದ್ದರೂ ಬಿಜೆಪಿಯಲ್ಲಿ ಮಾತ್ರ. ಹೀಗಾಗಿ ಸ್ಥಳೀಯರಿಗೆ ಪ್ರಥಮಾಧ್ಯತೆ ನೀಡಬೇಕೆಂಬ ಒತ್ತಾಯವಿದೆ ಎಂದರು.
ಚಿತ್ತಾಪುರದಲ್ಲಿ ಬಿಜೆಪಿ ಅಂದರೆ ವಾಲ್ಮೀಕಿ ನಾಯಕ, ವಾಲ್ಮೀಕಿ ನಾಯಕ ಅಂದರೆ ಬಿಜೆಪಿ. ಹೀಗಾಗಿ ಸ್ಥಳೀಯ ಮಟ್ಟದ ಪರಿಶಿಷ್ಟ ಜಾತಿಯ ಯಾವುದೇ ನಾಯಕರಿಗೆ ಬಿಜೆಪಿ ಟಕೆಟ್ ನೀಡಲಿ, ಗೆಲುವಿಗೆ ನಾವು ಒಮ್ಮನಿಸಿನಿಂದ ಹಗಲು ರಾತ್ರಿ ಎನ್ನದೇ ಶ್ರಮಿಸುತ್ತೇವೆ ಎಂದು ಹೇಳಿದರು.
ಹಾಲು ಉತ್ಪಾದಕರ ಪ್ರಕೋಷ್ಠ ಜಿಲ್ಲಾ ಸಂಚಾಲಕ ಅಯ್ಯಪ್ಪ ರಾಮತೀರ್ಥ, ಬಿಜೆಪಿ ಪ್ರಮುಖರಾದ ವಾಲ್ಮೀಕಿ ರಾಠೊಡ, ಗೋಪಾಲ ರಾಠೊಡ, ಪೋಮು ರಾಠೊಡ, ಗಿರೀಶ ಭಜಂತ್ರಿ, ರಾಮದಾಸ ಚವ್ಹಾಣ, ಶಿವರಾಮ ಚವ್ಹಾಣ, ಮಹೇಶ ಬಟಗೇರಿ, ವೀರಣ್ಣ ಯಾರಿ, ಭರತ ಭಂಕೂರ, ಹನುಮಾನ ವ್ಯಾಸ್ ಇತರರು ಇದ್ದರು.