Advertisement

ವಿಧಾನಸಭೆ ಉಪಚುನಾವಣೆ: ಬಿಜೆಪಿಯಲ್ಲಿ ಚರ್ಚೆ

06:05 AM Oct 04, 2018 | |

ಬೆಂಗಳೂರು: ರಾಮನಗರ ಹಾಗೂ ಜಮಖಂಡಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಸದ್ಯದಲ್ಲೇ ದಿನಾಂಕ ಘೋಷಣೆ ಸಾಧ್ಯತೆ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಬುಧವಾರ ಪಕ್ಷದ ರಾಜ್ಯ ಕಚೇರಿಯಲ್ಲಿ ಕೆಲ ನಾಯಕರೊಂದಿಗೆ ಚರ್ಚೆ ನಡೆಸಿದರು.

Advertisement

ರಾಮನಗರ ಹಾಗೂ ಜಮಖಂಡಿ ಕ್ಷೇತ್ರಗಳಲ್ಲಿನ ಟಿಕೆಟ್‌ ಆಕಾಂಕ್ಷಿಗಳು, ಅವರ ವರ್ಚಸ್ಸು, ಸಂಘಟನಾ ಸಾಮರ್ಥಯ ಇತರೆ ಅಂಶಗಳ ಬಗ್ಗೆ ಪ್ರಾಥಮಿಕ ಮಾಹಿತಿಯನ್ನು ಯಡಿಯೂರಪ್ಪ ಪಡೆದರು. ಜತೆಗೆ ಎರಡೂ ಕ್ಷೇತ್ರಗಳಲ್ಲಿ ಸದ್ಯದ ರಾಜಕೀಯ ಸ್ಥಿತಿಗತಿ, ವಿದ್ಯಮಾನಗಳ ಬಗ್ಗೆಯೂ ಚರ್ಚಿಸಿದರು. ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಶ್‌ ಸೇರಿದಂತೆ ಹಲವರು ಸಭೆಯಲ್ಲಿ ಪಾಲ್ಗೊಂಡಿದ್ದರು.

ರಾಮನಗರ ಕ್ಷೇತ್ರದಿಂದ ಸ್ಪರ್ಧಿಸಲು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಆಸಕ್ತಿ ತೋರದಿರುವುದು, ಪ್ರಸ್ತುತ ಸಂದರ್ಭದಲ್ಲಿ ಪ್ರಬಲ ಸ್ಪರ್ಧೆಯೊಡ್ಡಬಲ್ಲ ಅಭ್ಯರ್ಥಿ ಯಾರಾದರೆ ಸೂಕ್ತ ಎಂಬುದು ಸೇರಿದಂತೆ ಇತರೆ ವಿಚಾರಗಳ ಬಗ್ಗೆಯೂ ಚರ್ಚೆ ನಡೆಯಿತು.

ಸಭೆಯ ಬಳಿಕ ಪ್ರತಿಕ್ರಿಯಿಸಿದ ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ, ರಾಮನಗರ, ಜಮಖಂಡಿ ಉಪಚುನಾವಣೆಗೆ ಸೂಕ್ತ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆಸಲಾಗಿದ್ದು, ಶೀಘ್ರವೇ ಅಂತಿಮಗೊಳಿಸಿ ಘೋಷಿಸಲಾಗುವುದು ಎಂದು ಹೇಳಿದರು.

ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಶ್‌, ರಾಮನಗರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆದಿದೆ. ಸಿ.ಪಿ.ಯೋಗೇಶ್‌ ಅವರೊಂದಿಗೆ ನಾನು ಚರ್ಚಿಸಿದ್ದು, ರಾಜ್ಯ ನಾಯಕರ ಸೂಚನೆಯ ನಿರೀಕ್ಷೆಯಲ್ಲಿದ್ದೇವೆ. ರಾಜ್ಯಾಧ್ಯಕ್ಷರಾದ ಯಡಿಯೂರಪ್ಪ ಅವರು ಸೂಚಿಸಿದರೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಪಕ್ಷದ ಸೂಚನೆಯಂತೆ ಕಾರ್ಯ ನಿರ್ವಹಿಸುತ್ತೇನೆ ಎಂದು ಹೇಳಿದರು.

Advertisement

ಪರ- ವಿರೋಧ ಚರ್ಚೆ
ಇನ್ನೊಂದೆಡೆ ಜಮಖಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರಾಗಬಹುದು ಎಂಬ ಬಗ್ಗೆಯೂ ಕುತೂಹಲ ಮೂಡಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದ ಸಂಗಮೇಶ್‌ ನಿರಾಣಿ ಅವರಿಗೆ ಪಕ್ಷದಿಂದ ಸ್ಪರ್ಧಿಸಲು ಅವಕಾಶ ನೀಡಬೇಕು ಎಂಬ ಮಾತು ಕೇಳಿಬಂದಿದೆ. ಆದರೆ ಯಾವುದೇ ಕಾರಣಕ್ಕೂ ಸಂಗಮೇಶ್‌ ನಿರಾಣಿ ಅವರಿಗೆ ಟಿಕೆಟ್‌ ನೀಡಬಾರದು. ಕಳೆದ ಬಾರಿ ಪಕ್ಷದ ಅಭ್ಯರ್ಥಿ ಸೋಲಿಗೆ ಪರೋಕ್ಷವಾಗಿ ಕಾರಣವಾದವರಿಗೆ ಮತ್ತೆ ಸ್ಪರ್ಧಿಸಲು ಆಸ್ಪದ ನೀಡಬಾರದು ಎಂಬ ಆಗ್ರಹವೂ ವ್ಯಕ್ತವಾಗಿದೆ. ಒಟ್ಟಾರೆ ಎರಡೂ ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಯ ಆಯ್ಕೆಗೆ ಬಿಜೆಪಿ ಕಸರತ್ತು ನಡೆಸಿದೆ.

Advertisement

Udayavani is now on Telegram. Click here to join our channel and stay updated with the latest news.

Next